ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಜಿಗುಡುವ ಮಾರುಕಟ್ಟೆಯಲ್ಲಿ ಬುಲ್‌ಡೋಜರ್‌ಗಳ ಆರ್ಭಟ

ಕೆ.ಆರ್‌.ಮಾರುಕಟ್ಟೆ: ಅನಧಿಕೃತ ಅಂಗಡಿ ಮುಂಗಟ್ಟು ತೆರವು * ಯುಗಾದಿಗೆ ಸಂಭ್ರಮದ ಬದಲು ನೋವು
Last Updated 29 ಮಾರ್ಚ್ 2019, 20:26 IST
ಅಕ್ಷರ ಗಾತ್ರ

ಬೆಂಗಳೂರು: ಹೊತ್ತೇರುತ್ತಿದ್ದಂತೆಯೇ ದಿನದ ವ್ಯಾಪಾರಕ್ಕೆ ಸಜ್ಜಾಗಬೇಕಾದ ವರ್ತಕರು ತಮ್ಮ ಸರಕು ಸರಂಜಾಮುಗಳನ್ನು ಉಳಿಸಿಕೊಳ್ಳಲು ಹರಸಾಹಸಪಟ್ಟರು. ಗ್ರಾಹಕರು ಹಾಗೂವರ್ತಕರ ನಡುವಿನ ಚೌಕಾಸಿ–ಚಟುವಟಿಕೆಯಿಂದ ಕೂಡಿರುತ್ತಿದ್ದ ಕೆ.ಆರ್‌.ಮಾರುಕಟ್ಟೆ ಶುಕ್ರವಾರ ಬುಲ್‌ಡೋಜರ್‌ಗಳ ಆರ್ಭಟ ಹಾಗೂ ವ್ಯಾಪಾರಿಗಳ ಆಕ್ರಂದನಕ್ಕೆ ಸಾಕ್ಷಿಯಾಯಿತು.

ಕೆ.ಆರ್‌.ಮಾರುಕಟ್ಟೆ ಕಟ್ಟಡದೊಳಗೆ ಹಾಗೂ ಪ್ರಾಂಗಣದಲ್ಲಿ ತಲೆ ಎತ್ತಿದ್ದ ಅನಧಿಕೃತ ಮಳಿಗೆಗಳು, ಮುಂಗಟ್ಟುಗಳನ್ನು ತೆಗೆಸುವಂತೆ ಹೈಕೋರ್ಟ್‌ ಬುಧವಾರ ನಿರ್ದೇಶನ ನೀಡಿತ್ತು. ಪಾಲಿಕೆ ಅಧಿಕಾರಿಗಳು ಅವುಗಳನ್ನೆಲ್ಲ ನಿಷ್ಕರುಣೆಯಿಂದ ತೆರವುಗೊಳಿಸಿದರು. ಯುಗಾದಿ ಹಬ್ಬಕ್ಕೆ ಭರ್ಜರಿ ವ್ಯಾಪಾರದ ಭರಾಟೆಯನ್ನು ಎದುರು ನೋಡುತ್ತಿದ್ದ ವ್ಯಾಪಾರಿಗಳು ಈ ದಾಳಿಯಿಂದ ಆಘಾತ ಅನುಭವಿಸಿದರು.

ಒಂದೆಡೆ ಅನಧಿಕೃತ ವ್ಯಾಪಾರಿಗಳು ಮಾರುಕಟ್ಟೆ ಪ್ರಾಂಗಣದ ಜಾಗವನ್ನು ಆಕ್ರಮಿಸಿದ್ದರೆ, ಇನ್ನೊಂದೆಡೆ ಪರವಾನಗಿ ಪಡೆದ ವ್ಯಾಪಾರಿಗಳೂ ಅಂಗಡಿ ಮುಂದಿನ ಜಾಗ ಒತ್ತುವರಿ ಮಾಡಿಕೊಂಡಿದ್ದರು. ಗ್ರಾಹಕರು ಮುಕ್ತವಾಗಿ ಸಾಗುವುದಕ್ಕೆ ದಾರಿಯೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಇವುಗಳನ್ನೆಲ್ಲಾ ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳು ಗುರುವಾರವೇ ಸೂಚನೆ ನೀಡಿದ್ದರು. ಕೆಲವು ವ್ಯಾಪಾರಿಗಳು ನಿನ್ನೆಯೇ ತಮ್ಮ ಸಾಮಗ್ರಿಗಳನ್ನು ಬೇರೆಡೆಗೆ ಸಾಗಿಸಿದ್ದರೆ, ಇನ್ನು ಕೆಲವರು, ‘ಏನೂ ಆಗುವುದಿಲ್ಲ’ ಎಂಬ ಧೋರಣೆಯಿಂದ ಅವುಗಳನ್ನು ಅಲ್ಲೇ ಬಿಟ್ಟಿದ್ದರು.

ಕೆ.ಆರ್.ಮಾರುಕಟ್ಟೆಯ ಹಾಗೂ ಸುತ್ತಮುತ್ತಲಿನ ಅನಧಿಕೃತವಾಗಿಕಟ್ಟಡಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು
ಕೆ.ಆರ್.ಮಾರುಕಟ್ಟೆಯ ಹಾಗೂ ಸುತ್ತಮುತ್ತಲಿನ ಅನಧಿಕೃತವಾಗಿ
ಕಟ್ಟಡಗಳನ್ನು ಶುಕ್ರವಾರ ತೆರವುಗೊಳಿಸಲಾಯಿತು

ಮಾರುಕಟ್ಟೆಯತ್ತ ಏಕಕಾಲದಲ್ಲಿ ನುಗ್ಗಿದ್ದ ಬುಲ್‌ಡೋಜರ್‌ಗಳ ಕಬಂಧ ಬಾಹುಗಳು ಅನಧಿಕೃತ ರಚನೆಗಳನ್ನು ಕುಕ್ಕಿ ಕುಕ್ಕಿ ಕಿತ್ತುಹಾಕಿದವು. ಕಟ್ಟಡಕ್ಕೆ ಜೋಡಿಸಿದ್ದ ಉಕ್ಕಿನ ಚೌಕಟ್ಟುಗಳನ್ನು, ಮೇಜು, ಕಪಾಟುಗಳನ್ನು, ಹೆಚ್ಚುವರಿಛಾವಣಿಗಳನ್ನೆಲ್ಲಾ ಕಿತ್ತೆಸೆದವು. ದೈತ್ಯಯಂತ್ರಗಳ ಆರ್ಭಟಕ್ಕೆ ಸಿಲುಕಿ ತರಕಾರಿ, ಹಣ್ಣುಹಂಪಲುಗಳು ಚೆಲ್ಲಾಪಿಲ್ಲಿಯಾದವು. ಸರಕು ಸರಂಜಾಮುಗಳು ನಜ್ಜುಗುಜ್ಜಾದವು.

ಕಟ್ಟಡದ ನಾಲ್ಕು ದಿಕ್ಕುಗಳಲ್ಲಿ ಹತ್ತಾರು ಬುಲ್‌ಡೊಜರ್‌ಗಳು ದಾಳಿ ಆರಂಭಿಸುತ್ತಿದ್ದಂತೆಯೇ, ಮಳಿಗೆಗಳ ಮಾಲೀಕರು ತರಾತುರಿಯಲ್ಲಿ ಸಾಮಗ್ರಿಗಳನ್ನು ಬೇರೆಡೆ ಸಾಗಿಸಿದರು. ಬುಲ್‌ಡೊಜರ್‌ ಕಾರ್ಯಾಚರಣೆ ನಡೆಸುತ್ತಿದ್ದಂತೆಯೇ ಅವುಗಳ ಕೆಳಗೂ ತೂರಿದ ಕೆಲವರು ಜೀವವನ್ನೇ ಪಣವಾಗಿಟ್ಟು ಸಾಧ್ಯವಾದಷ್ಟು ಸರಕುಗಳನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರು. ಬೀದಿ ಬದಿ ವ್ಯಾಪಾರಿಗಳಂತೂ ಮಾರಾಟಕ್ಕಿಟ್ಟಿದ್ದ ಉತ್ಪನ್ನಗಳನ್ನು ಗಡಿಬಿಡಿಯಲ್ಲಿ ಬಾಚಿಕೊಂಡು ಬೇರೆಡೆ ಸಾಗಿಸಿದರು.

ಕೆಲವು ಮಾಲೀಕರು, ‘ನಮ್ಮ ಅಂಗಡಿಯನ್ನು ಮಾತ್ರ ಕಿತ್ತು ಹಾಕಿದಿರಿ. ಪಕ್ಕದ ಅಂಗಡಿಯನ್ನೇಕೆ ಬಿಟ್ಟಿದ್ದೀರಿ. ಅದನ್ನೂ ತೆಗೆಸಿ’ ಎಂದೂ ಅಧಿಕಾರಿಗಳ ಬಳಿ ಜಗಳ ಕಾಯ್ದರು.

ಕಾರ್ಯಾಚರಣೆ ಮುಗಿಯುತ್ತಿದ್ದಂತೆಯೇ ಕೆಲವು ಚಿಂದಿ ಆಯುವವರು, ಪೌರಕಾರ್ಮಿಕರು ರಟ್ಟು, ಕಬ್ಬಿಣದ ಶೀಟ್‌ ಮೊದಲಾದ ಗುಜರಿಗಳನ್ನು ಹೆಕ್ಕಿ ಒಯ್ದರು.

‘ಮಾರುಕಟ್ಟೆ ಒಳಾಂಗಣದ ಮಳಿಗೆಗಳಲ್ಲಿ ಈ ಹಿಂದೆ 2.5 ಅಡಿಗಳಷ್ಟು ಚೌಕಟ್ಟು ನಿರ್ಮಿಸಿಕೊಳ್ಳುವುದಕ್ಕೆ ಪಾಲಿಕೆಯವರೇ ಅನುಮತಿ ನೀಡಿದ್ದರು. ಅವುಗಳನ್ನು ಕಿತ್ತುಹಾಕುತ್ತಿದ್ದಾರೆ. ಇದು ನ್ಯಾಯವೇ’ ಎಂದು ವ್ಯಾಪಾರಿ ವಿಶ್ವನಾಥ ‍ಪ್ರಶ್ನಿಸಿದರು.

ಪಾಲಿಕೆ ಹೆಚ್ಚುವರಿ ಆಯುಕ್ತ (ಮಾರುಕಟ್ಟೆ) ಎಸ್‌.ಜಿ.ರವೀಂದ್ರ, ‘ಅಂಗಡಿ ಬಿಟ್ಟು ಒಂದಿಂಚು ಜಾಗವನ್ನು ಆಕ್ರಮಿಸುವಂತಿಲ್ಲ. ಗ್ರಾಹಕರ ಓಡಾಟಕ್ಕೆ ಅಡ್ಡಿಯಾಗುವಂತಹ ಏನೇ ರಚನೆ ಇದ್ದರೂ ಮುಲಾಜಿಲ್ಲದೇ ತೆರವುಗೊಳಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಅಗ್ನಿ ಅನಾಹುತ ನಡೆದರೆ ಅಗ್ನಿಶಾಮಕ ವಾಹನ, ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ ಮತ್ತು ಇತರ ವಾಹನಗಳು ಸರಾಗವಾಗಿ ಸಂಚರಿಸುವುದಕ್ಕೆ ಮಾರುಕಟ್ಟೆ ಕಟ್ಟಡದ ಸುತ್ತಲೂ ದಾರಿ ಇರಬೇಕು. ಕಟ್ಟಡದೊಳಗೂ ಅಗ್ನಿಶಾಮಕ ಸಿಬ್ಬಂದಿ ಒಡಾಟಕ್ಕೆ ಸ್ಥಳಾವಕಾಶ ಇರಬೇಕು. ವ್ಯಾಪಾರಿಗಳು ಎಲ್ವನ್ನೂ ಒತ್ತುವರಿ ಮಾಡಿಕೊಂಡಿದ್ದರು. ಅವುಗಳೆಲ್ಲವನ್ನೂ ತೆರವು ಮಾಡಲಾಗಿದೆ’ ಎಂದರು.

‘ವ್ಯಾಪಾರ ಇಲ್ಲದಿದ್ದರೆ ದಿನದ ಕೂಳಿಲ್ಲ’

‘ನಮಗೆ ದಿನದ ಊಟಕ್ಕೆ ಆ ದಿನದ ವ್ಯಾಪಾರವೇ ದಾರಿ. ಅದಿಲ್ಲದಿದ್ದರೆ ಅನ್ನವಿಲ್ಲ. ಇನ್ನು ಮಕ್ಕಳನ್ನು ಕುಟುಂಬವನ್ನು ಸಾಕುವುದೆಂತು?’

ಮಾರುಕಟ್ಟೆ ಬಳಿ ಬೀದಿ ಸೊಪ್ಪು, ಹಣ್ಣು, ತರಕಾರಿ ಮಾರಾಟ ಮಾಡಿ ಜೀವನೋಪಾಯ ಕಂಡುಕೊಳ್ಳುತ್ತಿದ್ದ ಮಹಿಳೆಯರ ಪ್ರಶ್ನೆ ಇದು.

‘30– 40 ವರ್ಷಗಳಿಂದ ಇಲ್ಲಿ ವ್ಯಾಪಾರದಲ್ಲಿ ತೊಡಗಿದ್ದೇವೆ. ನಿತ್ಯವೂ ನಮಗೆ ಕಿರುಕುಳ ತಪ್ಪಿದ್ದಲ್ಲ. ಇದನ್ನೆಲ್ಲ ಸಹಿಸಿಕೊಂಡು ಹೇಗೋ ಬದುಕಿನ ಬಂಡಿ ಸಾಗಿಸುತ್ತಿದ್ದೇವೆ. ಮುಂದೇನು ಎಂದೇ ತೋಚುತ್ತಿಲ್ಲ’ ಎಂದು ಆತಂಕ ತೋಡಿಕೊಂಡರು.

‘ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ಒಬ್ಬೊಬ್ಬರಾಗಿ ಬಂದು ನಮ್ಮಿಂದ ದಿನಕ್ಕೆ ₹ 10, ₹ 50ರವರೆಗೆ ಮಾಮೂಲಿ ಕಿತ್ತುಕೊಳ್ಳುತ್ತಾರೆ. ಈ ಎಲ್ಲ ಮೊತ್ತವನ್ನು ಸೇರಿಸಿದರೆ ತಿಂಗಳಿಗೆ ಏನಿಲ್ಲವೆಂದರೂ ₹ 3 ಸಾವಿರದಿಂದ ₹ 3.5 ಸಾವಿರ ಆಗುತ್ತದೆ’ ಎಂದು ಲಕ್ಷ್ಮೀ ದೂರಿದರು.

‘ನಮಗೂ ಅಂಗಡಿ ಬಾಡಿಗೆಗೆ ನೀಡಲಿ. ನಮ್ಮ ಕೈಯಿಂದ ನೀಡಲು ಸಾಧ್ಯವಾಗುವಷ್ಟು ಬಾಡಿಗೆ ನಿಗದಿಪಡಿಸಲಿ. ನಾವೂ ಅಲ್ಲೇ ವ್ಯಾಪಾರ ಮಾಡುತ್ತೇವೆ’ ಎಂದು ಮಾರಿಯಮ್ಮ ಒತ್ತಾಯಿಸಿದರು.

ಒಂದೆಡೆ ತೆರವು ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದ್ದರೆ ಕಟ್ಟಡದ ನೆಲಮಹಡಿಯಲ್ಲಿ ಮಹಿಳೆಯರು ಹೂಕಟ್ಟುವುದರಲ್ಲಿ ತಲ್ಲೀನರಾಗಿದ್ದರು. ಕೆಲವು ಬೀದಿಬದಿ ವ್ಯಾಪಾರಿಗಳು ಅಳಿದುಳಿದ ಹಣ್ಣು ತರಕಾರಿಗಳನ್ನು ಬಿಸಿಲಿನಲ್ಲೇ ಕುಳಿತು ಮಾರಾಟ ಮಾಡಿದರು.

240 ಲೋಡ್‌ ಕಸ ಸ್ಥಳಾಂತರ

ತೆರವು ಕಾರ್ಯಚರಣೆಯಲ್ಲಿ ತ್ಯಾಜ್ಯದ ರೂಪದಲ್ಲಿ ಸಂಗ್ರಹವಾದ 240ಕ್ಕೂ ಹೆಚ್ಚು ಲೋಡ್‍ಗಳಷ್ಟು ಸರಂಜಾಮುಗಳನ್ನು ಬೇರೆಡೆ ಸಾಗಿಸಲಾಗಿದೆ.

’ಕೆಲವು ವಸ್ತುಗಳನ್ನು ಮಾಲೀಕರಿಗೇ ಹಿಂತಿರುಗಿಸಿದ್ದೇವೆ. ಬೇಡವಾದ ವಸ್ತುಗಳನ್ನಷ್ಟೇ ಕಸ ವಿಲೇವಾರಿ ತಾಣಗಳಿಗೆ ಸಾಗಿಸಲಾಗಿದೆ’ ಎಂದು ಪಾಲಿಕೆ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒತ್ತುವರಿಗೆ ₹ 2ಸಾವಿರ ದಂಡ’

‘ಈ ಹಿಂದೆ ತೆರವು ಕಾರ್ಯಾಚರಣೆ ನಡೆಸಿದ ಬಳಿಕವೂ ಕೆಲವರು ಮತ್ತೆ ಬಂದು ವ್ಯಾಪಾರ ಶುರುಹಚ್ಚಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಹಾಗಾಗುವುದಕ್ಕೆ ಅವಕಾಶ ನೀಡುವುದಿಲ್ಲ. ಈ ಬಗ್ಗೆ ನಿಗಾ ಇಡಲು ಇಲ್ಲಿಗೆ 30 ಮಾರ್ಷಲ್‌ಗಳನ್ನು ನೇಮಿಸುತ್ತೇವೆ. ಇಷ್ಟಾಗಿಯೂ ಯಾರಾದರೂ ಮತ್ತೆ ಒತ್ತುವರಿ ಮಾಡಿದರೆ ₹ 2 ಸಾವಿರ ದಂಡ ವಿಧಿಸುತ್ತೇವೆ’ ಎಂದು ಸರ್ಫರಾಜ್‌ ಖಾನ್‌ ತಿಳಿಸಿದರು.

ವಹಿವಾಟು ಸ್ಥಗಿತ

ಮಾರುಕಟ್ಟೆಯ ಮುಖ್ಯ ಕಟ್ಟಡದ ವ್ಯಾಪಾರಿಗಳು ಅಂಗಡಿಯ ಮುಂಗಟ್ಟಿನಲ್ಲಿದ್ದ ಸರಕುಗಳನ್ನು ಬೇರೆ ಕಡೆ ಸ್ಥಳಾಂತರಿಸುವುದರಲ್ಲೇ ತಲ್ಲೀನರಾಗಿದ್ದರು. ಹಾಗಾಗಿ ಹೆಚ್ಚಿನ ಮಳಿಗೆಗಳಲ್ಲಿ ವಹಿವಾಟು ನಡೆಯಲಿಲ್ಲ. ಗ್ರಾಹಕರು ಬಂದ ದಾರಿಗೆ ಸುಂಕವಿಲ್ಲದೆ ಮರಳಬೇಕಾಯಿತು.

ಹೊಗೆ ಸೃಷ್ಟಿಸಿದ ತಳಮಳ

ಮೊದಲ ಮಹಡಿಯಲ್ಲಿ ಕುಂಕುಮ ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಯಲ್ಲಿ ಕಾಣಿಸಿಕೊಂಡ ಹೊಗೆ ಕೆಲಕಾಲ ತಳಮಳ ಸೃಷ್ಟಿಸಿತು.

ಆನಂದ್‌ ಎಂಬುವರು ಅಂಗಡಿಗೆ ಬೀಗ ಹಾಕಿದ್ದರು. ಆದರೆ ಅವರ ಅಂಗಡಿಯೊಳಗಿಂದಲೇ ಹೊಗೆ ಬರುತ್ತಿದ್ದುದರಿಂದ ಅಕ್ಕಪಕ್ಕದ ಅಂಗಡಿಯವರು ಅದರ ಬೀಗ ಒಡೆಯಿಸಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದಾಗ, ಶಾರ್ಟ್‌ ಸರ್ಕೀಟ್‌ನಿಂದ ಹೊಗೆಯಾಡುತ್ತಿದ್ದುದು ಕಂಡುಬಂತು.

ಅಜ್ಜಿಯ ಜೋಪಡಿಯೂ ಹೋಯ್ತು

ಮಾರುಕಟ್ಟೆ ಬಳಿ ಸೊಪ್ಪು ಮಾರಿಕೊಂಡು ಬದುಕುತ್ತಿದ್ದ ಈ ಅಜ್ಜಿಯ ಹೆಸರು ಸರೋಜಮ್ಮ. ಮಾರುಕಟ್ಟೆ ಬಳಿಯೇ ಜೋಪಡಿಯಲ್ಲಿ. ಈಗ ಅವರ ಪಾಲಿಗೆ ವ್ಯಾಪಾರದ ಜೊತೆಗೆ ಜೋಪಡಿಯೂ ಇಲ್ಲವಾಗಿದೆ.

‘ನನಗೆ ಮನೆ ಇಲ್ಲ. ಯಾರೂ ದಿಕ್ಕಿಲ್ಲ. ಇಲ್ಲಿ ವ್ಯಾಪಾರ ಮಾಡಿ ಬಂದ ಹಣದಲ್ಲಿ ಹೋಟೆಲ್‌ನಲ್ಲಿ ಊಟ ಮಾಡಿ ಬದುಕುತ್ತಿದ್ದೆ. ಅದರ ಜೊತೆಗೆ ಮಧುಮೇಹ, ರಕ್ತದೊತ್ತಡ ಸಮಸ್ಯೆಯೂ ಇದೆ. ಔಷಧಕ್ಕೂ ಹಣ ಹೊಂದಿಸಬೇಕು. ನನ್ನ ವ್ಯಾಪಾರ ಹಾಗೂ ಜೋಪಡಿಎರಡನ್ನೂ ಕಿತ್ತುಕೊಂಡರು. ಮುಂದೇನು ತೋಚುತ್ತಿಲ್ಲ’ ಎಂದರು.

***

ನನಗೆ ದಿನದ ವ್ಯಾಪಾರದಲ್ಲಿ ₹100– ₹150 ಉಳಿದರೆ ಹೆಚ್ಚು. ಈಗ ಅದಕ್ಕೂ ಕಲ್ಲು ಬಿದ್ದಿದೆ. ನಾಳೆಯಿಂದ ನಮ್ಮ ಪರಿಸ್ಥಿತಿ ಏನೋ ಗೊತ್ತಿಲ್ಲ

–ಲಕ್ಷ್ಮಮ್ಮ, ಬೀದಿಬದಿ ವ್ಯಾಪಾರಿ

ಬಿಸಿನಲ್ಲಿ ದಿನವಿಡೀ ಕುಳಿತು ವ್ಯಾಪಾರ ಮಾಡುತ್ತಿದ್ದೆವು. ಹೇಗೋ ಮಕ್ಕಳ ಹೊಟ್ಟೆ ಹೊರೆಯುತ್ತಿದ್ದೆವು. ಮನೆಯಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ನೆನೆದರೆ ಭಯವಾಗುತ್ತದೆ

–ಶಾಂತಮ್ಮ, ಬೀದಿಬದಿ ವ್ಯಾಪಾರಿ

ನಾವು ಪ್ರತಿ ದಿನವೂ ಸಾಲ ಮಾಡಿ ವ್ಯಾಪಾರ ಮಾಡುತ್ತಿದ್ದೆವು. ಅಧಿಕಾರಿಗಳು ನಮ್ಮ ವ್ಯಾಪಾರ ಕಿತ್ತುಕೊಂಡರು. ಈಗ ಸಾಲಗಾರರು ನಮ್ಮನ್ನು ಬಿಟ್ಟುಬಿಡುತ್ತಾರಾ

–ಸಾವಿತ್ರಮ್ಮ, ಬೀದಿ ಬದಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT