ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಲೇವಾರಿ ಮಾಡಲಾಗದಿದ್ದರೆ ಹುದ್ದೆ ತ್ಯಜಿಸಿ

ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್‌ ಅಡಿ ಕಿಡಿ
Last Updated 14 ಮೇ 2019, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಕಸ ನಿರ್ವಹಣೆಗಾಗಿ ವರ್ಷಕ್ಕೆ ₹1,500 ಕೋಟಿಗಳಷ್ಟು ಹಣ ಬಿಡುಗಡೆಯಾಗುತ್ತದೆ. ಎಲ್ಲಾ ವ್ಯವಸ್ಥೆ ಮಾಡಿದ್ದರೂ ತ್ಯಾಜ್ಯ ನಿರ್ವಹಣೆ ಪರಿಣಾಮಕಾರಿಯಾಗಿ ಆಗುತ್ತಿಲ್ಲವೆಂದರೆ ಏನರ್ಥ. ಇಷ್ಟೊಂದು ಹಣ ವ್ಯರ್ಥವಾಗುವುದಾರೆ ಅಧಿಕಾರಿಗಳು ಏಕಿರಬೇಕು’

ತಾಜ್ಯ ವಿಲೇವಾರಿ ಮೇಲೆ ನಿಗಾ ಇಡುವ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್‌ ಅಡಿ ಅವರು ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.

‘ಕಸ ಎಲ್ಲೆಂದರಲ್ಲಿ ಬಿಸಾಡುವವರಿಗೆ ದಂಡ ಹಾಕುವಂತೆ ಆದೇಶ ನೀಡಲಾಗಿತ್ತು. ಆದರೂ, ಯಾವುದೇ ಸುಧಾರಣೆಯಾಗಿಲ್ಲ. ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಸಾಧ್ಯವಾಗದಿದ್ದರೆ ಅಧಿಕಾರಿಗಳು ಮುಲಾಜಿಲ್ಲದೇ ಹುದ್ದೆ ತೊರೆಯಿರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಬಿಬಿಎಂಪಿ ಯಲಹಂಕ ವಲಯದ ಘನತ್ಯಾಜ್ಯ ನಿರ್ವಹಣೆ ಪಾಲುದಾರರ ಸಭೆಯಲ್ಲಿ ಅವರು ಮಾತನಾಡಿದರು.

‘ಕಸ ವಿಲೇವಾರಿ ಕೇವಲ ಪಾಲಿಕೆ ಸಮಸ್ಯೆಯಲ್ಲ. ಇದು ನಮ್ಮೆಲ್ಲರ ಮೂಲ ಸಮಸ್ಯೆ ಎನ್ನುವುದನ್ನು ಜನ ಗಮನದಲ್ಲಿಟ್ಟುಕೊಳ್ಳಬೇಕು. ಘನತ್ಯಾಜ್ಯ ನಿರ್ವಹಣೆ ನಿಯಮಗಳು–2016ರ ಅನುಷ್ಠಾನಕ್ಕೆ ಅಧಿಕಾರಿಗಳ ಜೊತೆಗೆ ನಾಗರೀಕರ ಹೊಣೆಯೂ ಇದೆ. ಕಸ ವಿಲೇವಾರಿಗಾಗಿ ಪಾಲಿಕೆ ಜೊತೆಗೆ ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂ ಸೇವಕರು ಕೈಜೋಡಿಸಿದ್ದಾರೆ. ಆದರೂ ಬಹುತೇಕ ಜನ ನಮಗ್ಯಾಕೆ ಉಸಾಬರಿ ಎಂದು ಸುಮ್ಮನೆ ಕುಳಿತಿದ್ದಾರೆ. ಇದರಿಂದಲೇ ಕಸದ ಸಮಸ್ಯೆ ಹಾಗೆಯೇ ಉಳಿದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತ್ಯಾಜ್ಯ ಸಂಗ್ರಹಿಸುವ ಪಾಲಿಕೆ ವಾಹನಗಳಿಗೆ ಒಂದು ನಿಗದಿತ ಸಮಯ, ವ್ಯಾಪ್ತಿಯ ಜೊತೆಗೆ ಜಿಪಿಎಸ್‌ ಅಳವಡಿಸಿ ಸಮರ್ಪಕ ತ್ಯಾಜ್ಯ ನಿರ್ವಹಣೆ ಮಾಡಬೇಕು’ ಎಂದು ಸೂಚನೆ ನೀಡಿದರು.

ದೂರುಗಳ ಸರಮಾಲೆ: ಸಭೆಗೆ ಹಾಜರಾಗಿದ್ದ ಯಲಹಂಕ ವ್ಯಾಪ್ತಿಯ ವಾರ್ಡ್‌ಗಳ ಪಾಲಿಕೆ ಸದಸ್ಯರು, ಸಾರ್ವಜನಿಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಹೇಳಿಕೊಂಡರು.

‘ಕಸ ವಿಂಗಡಣೆಗೆ ಬರುವ ಪಾಲಿಕೆ ವಾಹನಗಳು ಸಾಕಾಗುತ್ತಿಲ್ಲ. ಮಾಂಸದಂಗಡಿಯ ತ್ಯಾಜ್ಯಗಳನ್ನು ರಾತ್ರಿ ವೇಳೆ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಕೆಲವರು ಒತ್ತಾಯಿಸಿದರು.ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸುಭಾಷ್‌ ಅಡಿ ಸೂಚನೆ ನೀಡಿದರು.

ಯಲಹಂಕ–ಸಮಸ್ಯೆ ಕಡಿಮೆ: ‘ಬೆಂಗಳೂರಿನ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಯಲಹಂಕ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಕಡಿಮೆ. ಇಲ್ಲಿನ ಕಸ ಸಮರ್ಪಕವಾಗಿ ವಿಲೇವಾರಿಯಾಗುತ್ತಿದೆ’ ಎಂದು ಸುಭಾಷ್‌ ಅಡಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಿತಿಯ ಸದಸ್ಯ ಕಾರ್ಯದರ್ಶಿ ಮನೋಜ್‌ ಕುಮಾರ್‌, ಜಂಟಿ ಆಯುಕ್ತ (ಘನತ್ಯಾಜ್ಯ) ಸರ್ಫರಾಜ್‌ ಖಾನ್‌, ಅಧಿಕಾರಿಗಳಾದ ಅಶೋಕ್‌, ‌ವಿಜಯ್‌ ಕುಮಾರ್‌ ಭಾಗವಹಿಸಿದ್ದರು.

**

‘ಆರಂಭಿಕ ಹಂತದಲ್ಲೇ ವಿಲೇವಾರಿ’

‘ಆರಂಭಿಕ ಹಂತದಲ್ಲೇ ನಡೆಯಲಿ ಕಸ ವಿಲೇವಾರಿ ನಡೆಯಬೇಕು. ಪ್ರತಿ ಮನೆಯವರೂ ಕಸ ನಿರ್ವಹಣೆ ಜವಾಬ್ದಾರಿ ಹೊರಬೇಕು. ಕಸವನ್ನು ಒಯ್ದೊ ಎಲ್ಲೋ ವಿಲೇವಾರಿ ಮಾಡುವುದು ಅವೈಜ್ಞಾನಿಕ’ ಎಂದು ಸುಭಾಷ್‌ ಅಡಿ ಸಲಹೆ ನೀಡಿದರು.

‘ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿರುವ ಹಸಿತ್ಯಾಜ್ಯವನ್ನು ಹೊರಗೆ ಕಳುಹಿಸುವಂತಿಲ್ಲ. ಅವರ ಆವರಣದಲ್ಲೇ ಕಸ ವಿಂಗಡಣೆ ಹಾಗೂ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕು. ಹಸಿ ಕಸದಿಂದ ಅಲ್ಲೇ ಕಾಂಪೋಸ್ಟ್‌ ತಯಾರಿಸಬೇಕು. ಒಂದು ವೇಳೆ ಕಸ ವಿಲೇವಾರಿ ಆಗದಿದ್ದಲ್ಲಿ ಸಂಬಂಧಪಟ್ಟವರೆಲ್ಲರಿಗೂ ದಂಡ ವಿಧಿಸಬೇಕು’ ಎಂದು ಸೂಚನೆ ನೀಡಿದರು.

‘ಐಟಿ–ಬಿಟಿಯವರಿಗೆ ಪರ್ಯಾಯ ವ್ಯವಸ್ಥೆ’

‘ಐಟಿ–ಬಿಟಿ ಕಂಪನಿಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಹೆಚ್ಚಾಗಿದ್ದಾರೆ. ಬೆಳಿಗ್ಗೆ ಕಸ ಸಂಗ್ರಹಿಸುವವರು ಮನೆ ಬಳಿಗೆ ಬರುವಾಗ ಅವರು ಮಲಗಿರುತ್ತಾರೆ. ಅವರಿಗೂ ಅನುಕೂಲವಾಗುವಂತೆ ಕಸ ಸಂಗ್ರಹಕ್ಕೆ ಪ್ರತ್ಯೇಕ ಸಮಯ ನಿಗದಿಪಡಿಸಿ ಪರ್ಯಾಯ ವ್ಯವಸ್ಥೆ ಮಾಡಬೇಕು’ ಎಂದು ಸುಭಾಷ್‌ ಅಡಿ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT