ಗುರುವಾರ , ಫೆಬ್ರವರಿ 25, 2021
31 °C
ವಾರ್ಡ್‌ನಲ್ಲಿ ಏನು ಕಾಮಗಾರಿ ನಡೆಯುತ್ತಿದೆ– ಮಾಹಿತಿ ಬೇಕೇ ಬಿಬಿಎಂಪಿ ವೆಬ್‌ಸೈಟ್‌ ನೋಡಿ

ತೆರಿಗೆ ಕಟ್ಟಿದ್ದೆಷ್ಟು, ಅಭಿವೃದ್ಧಿ ಕೆಲಸ ಆಗಿದ್ದೆಷ್ಟು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳ್ಳಂದೂರು: ನಿಮ್ಮ ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗಳಿಗೆ ಎಷ್ಟು ಅನುದಾನ ಮಂಜೂರಾಗಿದೆ. ನಿಮ್ಮ ವಾರ್ಡ್‌ನಿಂದ ಒಟ್ಟು ಎಷ್ಟು ತೆರಿಗೆಯನ್ನು ಪಾಲಿಕೆ ಸಂಗ್ರಹಿಸಿದೆ ಎಂಬ ವಿವರವನ್ನು ತಿಳಿದುಕೊಳ್ಳಬೇಕೇ. ಹಾಗಿದ್ದರೆ, ಬಿಬಿಎಂಪಿ ವೆಬ್‌ಸೈಟ್‌ (http://bbmp.gov.in) ನೋಡಿ.

2016ರ ಏಪ್ರಿಲ್‌ 1ರಿಂದ 2019 ಜ.31ರವರೆಗೆ ಪ್ರತಿ ವಾರ್ಡ್‌ಗೆ ಎಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ (ಕಾಮಗಾರಿ ಸಂಖ್ಯೆಸಹಿತ), ಪ್ರತಿ ವಾರ್ಡ್‌ನಲ್ಲಿ ಜ.31ರವರೆಗೆ ಎಷ್ಟು ತೆರಿಗೆ (2016–17, 2017–18, 2018–19ನೇ ಸಾಲಿನ ಅಂಕಿಅಂಶಗಳು) ಸಂಗ್ರಹವಾಗಿದೆ ಎಂಬ ವಿವರವನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ವಾರ್ಡ್‌ ಸಮಿತಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಪಾಲಿಕೆಯು ಮೊಟ್ಟಮೊದಲ ಬಾರಿಗೆ ಇಂತಹದ್ದೊಂದು ಹೆಜ್ಜೆಯನ್ನಿಟ್ಟಿದೆ.

‘ವಾರ್ಡ್‌ ಸಮಿತಿ ಕೇವಲ ಜನರ ಅಹವಾಲು ಆಲಿಸುವುದಕ್ಕೆ ಸೀಮಿತ ಆಗಬಾರದು. ವಾರ್ಡ್‌ನ ಅಭಿವೃದ್ಧಿಯ ಬಗ್ಗೆ ಸ್ಥಳೀಯರಿಗೆ ಸ್ಪಷ್ಟ ಮಾಹಿತಿ ನೀಡುವ ಮೂಲಕ ಅವರನ್ನೂ ಪ್ರಗತಿಯ ಪಾಲುದಾರರನ್ನಾಗಿ ರೂಪಿಸುವ ಉದ್ದೇಶದಿಂದ ನಾವು ಈ ಮಾಹಿತಿಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆ ನಮ್ಮಿಂದ ಕೇವಲ ತೆರಿಗೆ ವಸೂಲಿ ಮಾಡುತ್ತಿದೆ. ಆದರೆ, ನಮ್ಮ ವಾರ್ಡ್‌ನ ರಸ್ತೆಗಳಿನ್ನೂ ಅಭಿವೃದ್ಧಿಯೇ ಆಗಿಲ್ಲ. ಪಾದಚಾರಿ ಮಾರ್ಗಗಳ ಸ್ಥಿತಿ ಶೋಚನೀಯವಾಗಿದೆ ಎಂದೆಲ್ಲ ಸಾರ್ವಜನಿಕರು ಅಹವಾಲು ಹೇಳಿಕೊಳ್ಳುವುದು ಸರ್ವೇ ಸಾಮಾನ್ಯ. ಪ್ರತಿ ವಾರ್ಡ್‌ಗೆ ಏನೆಲ್ಲ ಕಾಮಗಾರಿಗಳು ಮಂಜೂರಾಗಿವೆ. ಯಾವ ಕಾಮಗಾರಿಗಳು ಪ್ರಗತಿಯಲ್ಲಿವೆ. ಯಾವುದು ಕಡತದಲ್ಲಿ ಮಾತ್ರ ಇದೆ ಎಂಬುದನ್ನು ಇನ್ನು ಸ್ಥಳೀಯರೇ ಪರಿಶೀಲಿಸಬಹುದು. ಪಾರದರ್ಶಕತೆ ತರಲು ಇದೊಂದು ಉತ್ತಮ ಹೆಜ್ಜೆ’  ಎನ್ನುತ್ತಾರೆ ‘ಸಿಟಿಜನ್ಸ್‌ ಅಜೆಂಡಾ ಫಾರ್‌ ಬೆಂಗಳೂರು’ ಸಂಘಟನೆಯ ಸಹಸಂಸ್ಥಾಪಕರಲ್ಲಿ ಒಬ್ಬರಾದ ಸಂದೀಪ್‌ ಅನಿರುದ್ಧನ್‌.

ದೇವರಜೀವನಹಳ್ಳಿ ವಾರ್ಡ್‌ನಲ್ಲಿ ₹49.82 ಲಕ್ಷ ಮಾತ್ರ ತೆರಿಗೆ ಸಂಗ್ರಹವಾಗಿದೆ. ಆದರೆ, ಈ ವಾರ್ಡ್‌ಗೆ ₹90.04 ಕೋಟಿ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಹಾಗೆಯೇ ಬೆಳ್ಳಂದೂರು ವಾರ್ಡ್‌ನಲ್ಲಿ ₹103 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. ಆದರೆ, ಇಲ್ಲಿ ₹31.55 ಕೋಟಿ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಏಕೆ ಈ ತಾರತಮ್ಯ ಎಂಬುದನ್ನೂ ವಾರ್ಡ್ ಸಮಿತಿ ಸಭೆಯಲ್ಲಿ ಚರ್ಚಿಸುವಂತೆಯೂ ಜನ ಒತ್ತಡ ಹೇರಬಹುದು. ವೆಬ್‌ಸೈಟ್‌ನಲ್ಲಿ ವಾರ್ಡ್‌ ಕಾಮಗಾರಿಗಳ ವಿವರ ಮಾತ್ರ ಇದೆ. ನಗರೋತ್ಥಾನ ಮತ್ತಿತರ ವಿಶೇಷ ಅನುದಾನಗಳ ಕಾಮಗಾರಿಗಳ ವಿವರಗಳು ಇದರಲ್ಲಿ ಸೇರಿಲ್ಲ. 

‘ಇಷ್ಟರವರೆಗೆ ನಮ್ಮ ವಾರ್ಡ್‌ನಲ್ಲಿ ಏನು ಕೆಲಸಗಳಾಗುತ್ತಿವೆ ಎಂಬ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿಯೇ ಸಿಗುತ್ತಿರಲಿಲ್ಲ. ಕಾಮಗಾರಿ ಮಂಜೂರಾಗಿದೆ ಎಂದು ರಾಜಕಾರಣಿಗಳು ಸುಳ್ಳು ಮಾಹಿತಿ ನೀಡಿ ಸ್ಥಳೀಯರ ದಾರಿ ತಪ್ಪಿಸುತ್ತಿದ್ದ ಉದಾಹರಣೆಗಳೂ ಇವೆ. ಇದಕ್ಕೂ ಕಡಿವಾಣ ಬೀಳಲಿದೆ. ಕಾಮಗಾರಿಯಲ್ಲಿ ಏನಾದರೂ ಅವ್ಯವಹಾರ ನಡೆದಿರುವ ಬಗ್ಗೆ ಸಂದೇಹವಿದ್ದರೆ ಅಥವಾ ಅನುಷ್ಠಾನ ವಿಳಂಬವಾಗುತ್ತಿದ್ದರೆ ಆ ಬಗ್ಗೆಯೂ ವಾರ್ಡ್‌ ಸಮಿತಿಯಲ್ಲಿ ಚರ್ಚಿಸಿ ಅದನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಒತ್ತಾಯಿಸಬಹುದು’ ಎಂದು ಸಂದೀಪ್‌ ವಿವರಿಸಿದರು.

‘ಸ್ಥಳೀಯಾಡಳಿತವನ್ನು ಬಲಪಡಿಸಿ ಜನತಂತ್ರ ವ್ಯವಸ್ಥೆಯನ್ನು ಅರ್ಥಪೂರ್ಣಗೊಳಿಸುವ ನಿಟ್ಟಿನಲ್ಲಿ ಸಾಗಬೇಕಾದ ಹಾದಿ ಬಹಳ ಇದೆ. ಒಂದೆಡೆ ಜನರಲ್ಲಿ ವಾರ್ಡ್‌ ಸಮಿತಿಗಳ ಸಬಲೀಕರಣದಿಂದಾಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಪಾಲಿಕೆಯೂ ತೆರಿಗೆ ಸಂಗ್ರಹದ ಹಾಗೂ ಕಾಮಗಾರಿಗಳ ಸಂಪೂರ್ಣ ಮಾಹಿತಿ ಹಂಚಿಕೊಂಡಿದೆ. ಇದನ್ನು ಜನರೂ ಕೂಡಾ ಸಮರ್ಥವಾಗಿ ಬಳಸಿಕೊಳ್ಳಬೇಕು. ನಮ್ಮ ವಾರ್ಡ್‌ಗೆ ಭವಿಷ್ಯದಲ್ಲಿ ಯಾವ ಯೋಜನೆಗಳು ಬೇಕು ಎಂಬ ಚರ್ಚೆಯಲ್ಲಿ ಸ್ಥಳೀಯರು ಹೆಚ್ಚು ಉತ್ಸಾಹ ತೋರಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಅಗ್ರಸ್ಥಾನದಲ್ಲಿ ಬೆಳ್ಳಂದೂರು

2018–19ನೇಸಾಲಿನಲ್ಲಿ ಇದುವರೆಗೆ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಸಂಗ್ರಿಸಿರುವ ವಾರ್ಡ್‌ಗಳಲ್ಲಿ ಮಹದೇವಪುರ ವಲಯದ ಬೆಳ್ಳಂದೂರು (150) ಅಗ್ರಸ್ಥಾನದಲ್ಲಿದೆ.

ಪೂರ್ವ ವಲಯದ ಶಾಂತಲಾ ನಗರ ವಾರ್ಡ್‌ (111) ಹಾಗೂ ಯಲಹಂಕ ವಲಯದ ಥಣಿಸಂದ್ರ (6) ವಾರ್ಡ್‌ಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

‘ಸದ್ಯಕ್ಕೆ ಯಾವ ವಾರ್ಡ್‌ನಲ್ಲಿ ಎಷ್ಟು ತೆರಿಗೆ ಸಂಗ್ರಹಿಸಿದ್ದೇವೆ ಎಂಬ ಮಾಹಿತಿಯನ್ನಷ್ಟೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದೇವೆ. ಪ್ರತಿ ವಾರ್ಡ್‌ಗೆ ಎಷ್ಟು ತೆರಿಗೆ ಸಂಗ್ರಹ ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ ಎಷ್ಟು ಗುರಿಸಾಧನೆ ಆಗಿದೆ ಎಂಬ ಅಂಶ ಈ ಮಾಹಿತಿಯಲ್ಲಿಲ್ಲ. ಅದನ್ನೂ ಶೀಘ್ರವೇ ಪ್ರಕಟಿಸುತ್ತೇವೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಬಾಕಿ ಇದ್ದರೆ ಹೆಸರು ಬಹಿರಂಗ’

‘ಯಾವ ಆಸ್ತಿ ಮಾಲೀಕರು ಎಷ್ಟು ತೆರಿಗೆ ಪಾವತಿಸಬೇಕು ಎಂಬ ವಿವರವನ್ನು ಒಳಗೊಂಡ ಜಿಐಎಸ್‌ ಮ್ಯಾಪಿಂಗ್‌ ಸಹಿತದ ಮಾಹಿತಿ ನಮ್ಮ ಬಳಿ ಇದೆ. 2018–19ನೇ ಸಾಲಿನ ತೆರಿಗೆ ಪಾವತಿಗೆ ಇದೇ ಮಾ .31ರವರೆಗೆ ಕಾಲಾವಕಾಶ ಇದೆ. ಅಷ್ಟರೊಳಗೆ ತೆರಿಗೆ ಪಾವತಿಸದಿದ್ದರೆ ಅಂತಹವರ ವಿವರವನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆ’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು