ಕಾಲೇಜು ಗೆಳೆಯನಿಂದ ಗೃಹಿಣಿಗೆ ಬ್ಲ್ಯಾಕ್‌ಮೇಲ್

7

ಕಾಲೇಜು ಗೆಳೆಯನಿಂದ ಗೃಹಿಣಿಗೆ ಬ್ಲ್ಯಾಕ್‌ಮೇಲ್

Published:
Updated:

ಬೆಂಗಳೂರು: ‘ಮನೆಗೆ ನುಗ್ಗಿ ನನ್ನ ಬಟ್ಟೆ ಹರಿದು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡ ಕಾಲೇಜು ದಿನಗಳ ಸಹಪಾಠಿ, ಆತನೊಂದಿಗೆ ಸಲುಗೆಯಿಂದ ಇರದಿದ್ದರೆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸುತ್ತಿದ್ದಾನೆ’ ಎಂದು ಆರೋಪಿಸಿ 29 ವರ್ಷದ ಗೃಹಿಣಿ ಕಲಾಸಿಪಾಳ್ಯ ಠಾಣೆಗೆ ದೂರು ಕೊಟ್ಟಿದ್ದಾರೆ.

ಸಂತ್ರಸ್ತೆ ಹೇಳಿಕೆ ಆಧರಿಸಿ ತಮಿಳುನಾಡಿನ ಗಿಲ್ಬರ್ಟ್ ಜಾನ್ ಎಂಬಾತನ ವಿರುದ್ಧ ಲೈಂಗಿಕ ಕಿರುಕುಳ (354) ಹಾಗೂ ಜೀವ ಬೆದರಿಕೆ (506) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ನಾನು ಹಾಗೂ ಜಾನ್ ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿದ್ದೆವು. ಆ ನಂತರ ಆತ ಬೆಂಗಳೂರಿಗೆ ಬಂದು ಪಿಎಚ್‌.ಡಿ ಮಾಡುತ್ತಿದ್ದ. ನಾನು ಮದುವೆಯಾದ ನಂತರ ಆತನ ವರ್ತನೆಯಲ್ಲಿ ಬದಲಾವಣೆಗಳಾದವು. ನನ್ನೊಂದಿಗೆ ತೀರಾ ಕೆಟ್ಟ ರೀತಿಯಲ್ಲಿ ಮಾತನಾಡಲು ಶುರು ಮಾಡಿದ್ದ. ಹೀಗಾಗಿ, ಸಂಪರ್ಕ ಕಡಿತಗೊಳಿಸಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.

‘ಸೋಮವಾರ ಬೆಳಿಗ್ಗೆ 8.30ರ ಸುಮಾರಿಗೆ ಮಗನನ್ನು ಶಾಲೆಗೆ ಬಿಟ್ಟು ಮನೆಗೆ ಮರಳುತ್ತಿದ್ದೆ. ಆಗ ದಾರಿಯಲ್ಲಿ ಎದುರಾದ ಆತ, ನನ್ನ ಮೊಬೈಲನ್ನು ಕಸಿದುಕೊಂಡ. ಬಳಿಕ ಮನೆಯವರೆಗೂ ಹಿಂಬಾಲಿಸಿ ಬಲವಂತವಾಗಿ ಒಳಗೆ ನುಗ್ಗಿದ.’

‘ನನ್ನನ್ನು ಎಳದಾಡಿ ಬಟ್ಟೆಯನ್ನು ಹರಿದು ಹಾಕಿದ ಆತ, ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ. ಅಲ್ಲದೆ, ‘ಈ ವಿಚಾರವನ್ನು ಗಂಡನಿಗಾಗಲೀ, ಪೊಲೀಸರಿಗಾಗಲೀ ತಿಳಿಸಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ನಿನ್ನ ಇಡೀ ಕುಟುಂಬವನ್ನು ಕೊಂದು, ನಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಬೆದರಿಸಿ ಹೊರಟು ಹೋದ.

ಇದರಿಂದ ದಿಕ್ಕು ತೋಚದಂತಾದ ನಾನು, ಪತಿಗೆ ವಿಷಯ ತಿಳಿಸಿದೆ. ಅವರ ಸಲಹೆಯಂತೆ ಠಾಣೆ ಮೆಟ್ಟಿಲೇರಿದೆ. ಜಾನ್‌ನನ್ನು ಬಂಧಿಸಿ, ಸೂಕ್ತ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !