ಶನಿವಾರ, ಏಪ್ರಿಲ್ 4, 2020
19 °C
ಸ್ವಯಂ ಪ‍್ರೇರಣೆಯಿಂದ ಮುಂದೆ ಬಾರದ ನಗರದ ಜನ, ಜಿಲ್ಲಾಡಳಿತಕ್ಕೆ ತಲೆನೋವು

ಕೋವಿಡ್-19 ಸೋಂಕಿತರ ಸಂಪರ್ಕದಲ್ಲಿದ್ದವರ ಹುಡುಕುವುದೇ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೋವಿಡ್‌-19ನಿಂದ ಮೃತಪಟ್ಟ ವೃದ್ಧನ ನೇರ ಸಂಪರ್ಕದಲ್ಲಿದ್ದ ಪುತ್ರಿ ಹಾಗೂ ಚಿಕಿತ್ಸೆ ನೀಡಿದ ವೈದ್ಯರಿಗೂ ಸೋಂಕು ಖಚಿತವಾಗಿದ್ದು, ನಗರವನ್ನು ಬೆಚ್ಚಿ ಬೀಳಿಸಿದೆ. ಮದುವೆ ಮಾಡಿಸುವ ಕೆಲಸ ಮಾಡಿಸುತ್ತಿದ್ದ (ಖಾಜಿ) ಸಿದ್ದಿಕಿ ಅವರ ನೇರ ಸಂಪರ್ಕ ಹೊಂದಿದ್ದ ಇನ್ನಷ್ಟು ಮಂದಿ ತೆರೆಮರೆಯಲ್ಲೇ ಇರಬಹುದಾಗಿದ್ದು, ಅವರನ್ನು ಹುಡುಕುವುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸಿದ್ದಿಕಿ ಅವರ ನೇರ ಸಂಪರ್ಕದಲ್ಲಿದ್ದ 71 ಮಂದಿಯಲ್ಲೇ ಈ ಇಬ್ಬರೂ ಸೇರಿದ್ದಾರೆ. ಹಾಗಾಗಿ, ಈಗಾಗಲೇ ಮನೆಯಲ್ಲಿ ಕ್ವಾರಂಟೈನ್ ಮಾಡಲಾದ ಉಳಿದ 69 ಮಂದಿಯಲ್ಲೂ ಆತಂಕ ಶುರುವಾಗಿದೆ. ಈ 71 ಮಂದಿಯೊಂದಿಗೆ ನೇರ ಸಂಪರ್ಕದಲ್ಲಿದ್ದ ಅಂದರೆ; ಸಿದ್ದಿಕಿ ಅವರೊಂದಿಗೆ ಪರೋಕ್ಷ ಸಂಪರ್ಕ ಏರ್ಪಟ್ಟ ಕೇವಲ 238 ಮಂದಿಯನ್ನು ಮಾತ್ರ ಸೋಮವಾರ (ಮಾರ್ಚ್‌ 16)ದವರೆಗೆ ಗುರುತಿಸಲಾಗಿದೆ. ಅವರ ಕುಟುಂಬ ವರ್ಗದವರು ನೀಡಿದ ಮಾಹಿತಿ ಮೇರೆಗೆ ಎಲ್ಲೆಲ್ಲಿ ಓಡಾಡಿದ್ದರು ಎಂದು ಆಧರಿಸಿ, ಇವರನ್ನು ಗುರುತಿಸಲಾಗಿದೆ. ಫೆಬ್ರುವರಿ 29ರಂದೇ ಕಲಬುರ್ಗಿಗೆ ಬಂದಿದ್ದ ಅವರು ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಂದಿಸಿರುವ ಸಾಧ್ಯತೆಯನ್ನೂ ಜಿಲ್ಲಾಡಳಿತ ಅಲ್ಲಗಳೆದಿಲ್ಲ.

ಇದಷ್ಟೇ ಸಮಸ್ಯೆ ಅಲ್ಲ; ಈಗ ಹೊಸದಾಗಿ ವೈದ್ಯರಲ್ಲಿಯೂ ಸೋಂಕು ದೃಢಪಟ್ಟಿದ್ದೇ ಮುಂದಿರುವ ಸವಾಲು. ಮಾರ್ಚ್‌ 6, 7 ಹಾಗೂ 8ರಂದು ಈ ವೈದ್ಯ‌, ಸಿದ್ದಿಕಿ ಅವರ ಮನೆಗೇ ಹೋಗಿ ಔಷಧೋಪಚಾರ ಮಾಡಿದ್ದರು. ಸೋಂಕು ಉಲ್ಬಣಿಸಿ ಹೈದರಾಬಾದ್‌ಗೆ ಚಿಕಿತ್ಸೆಗೆ ತೆರಳಿದ್ದ ಅವರು ಮಾರ್ಚ್‌ 10ರಂದು ಮರಳುವಾಗ ಮೃತಪಟ್ಟಿದ್ದರು. ಆದರೆ, ‘ಈ ಸಾವು ಕೋವಿಡ್‌ನಿಂದ ಸಂಭವಿಸಿದ್ದಲ್ಲ; ವಯೋಸಹಜ ಸಾವು’ ಎಂದು ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದರು. ಮಾರ್ಚ್‌ 11ರಂದು ಅವರು ಸಾವಿಗೆ ಕಾರಣ ಕೊರೊನಾ ವೈರಾಣು ಎಂದು ದೃಢಪಟ್ಟಿತು. ಅಂದರೆ, ಮಾರ್ಚ್ 6ರಿಂದ 11ರವರೆಗೂ ಸಿದ್ದಿಕಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ತಮ್ಮ ವೃತ್ತಿ ಮುಂದುವರಿಸಿದ್ದರು. ಸೋಂಕು ದೃಢ‍ಪಟ್ಟಿದ್ದೇ ತಡ, ಅವರ ನೇರ ಸಂಪರ್ಕದಲ್ಲಿ ಇದ್ದವರು ಇನ್ಯಾರ್‍ಯಾರೋ...? ಎಂಬ ಆಲೋಚನೆ ಶುರುವಾಗಿದೆ.

ಸದ್ಯ ಈ ವೈದ್ಯರ ಮನೆ ಇರುವ ಯದುಲ್ಲಾ ಕಾಲೊನಿಯಲ್ಲಿರುವ ಅವರ ಮನೆಯ ಸುತ್ತಲಿನ 300 ಮೀಟರ್‌ ಪ್ರದೇಶದಲ್ಲಿ ಓಡಾ' ನಿರ್ಬಂಧಿಸಿದ್ದಾರೆ. ಕುಟುಂಬದಲ್ಲಿ ಇದ್ದ ಸದಸ್ಯರಿಗೂ ಮನೆಯಲ್ಲೇ ಇರುವಂತೆ ತಾಕೀತು ಮಾಡಲಾಗಿದೆ. ಸಿದ್ದಿಕಿ ಹಾಗೂ ವೈದ್ಯರ ಮನೆಗಳು ಕೇವಲ 1 ಕಿ.ಮೀ ಅಂತರದಲ್ಲಿವೆ. ಈ ಅಂತರದಲ್ಲಿ ಅವರು ಎಷ್ಟು ಬಾರಿ ಓಡಾಡಿದ್ದಾರೆ ಎಂಬುದನ್ನು ಕಲೆಹಾಕುವುದು ಇನ್ನೊಂದು ತಲೆನೋವಾಗಿದೆ.

ಸೋಂಕಿತರು ನಿವೃತ್ತ ಸರ್ಕಾರಿ ವೈದ್ಯ: ಸದ್ಯ ಕೋವಿಡ್‌ನಿಂದ ಬಳಲುತ್ತಿರುವ 63 ವರ್ಷದ ವೈದ್ಯ ಸರ್ಕಾರಿ ವೈದ್ಯಾಧಿಕಾರಿ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿ ಬಳಿಕ ಮನೆಯ ಹತ್ತಿರ ಕ್ಲಿನಿಕ್‌ ಇಟ್ಟುಕೊಂಡಿದ್ದರು. ಸಿದ್ದಿಕಿ ಅವರಂತೆಯೇ ಹಲವು ಕುಟುಂಬಗಳಿಗೂ ಇವರು ಆಪ್ತ ವೈದ್ಯರಾಗಿದ್ದರು. ಮಾತ್ರವಲ್ಲ; ನಗರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿರುವ ಇನ್ನೊಬ್ಬ ವೈದ್ಯ ಕೂಡ ಇವರಿಗೆ ನೇರ ಸಂಪರ್ಕದಲ್ಲಿ ಇದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು