ಮಂಗಳವಾರ, ನವೆಂಬರ್ 19, 2019
29 °C
ಶಿವಮೊಗ್ಗದಿಂದ ಬೆಂಗಳೂರಿಗೆ ಚಾರುಲತಾ

ಸಿ.ಎಂಗೆ ಸೆಲ್ವಕುಮಾರ್ ಕಾರ್ಯದರ್ಶಿ

Published:
Updated:

ಬೆಂಗಳೂರು: ತಮ್ಮ ಸಚಿವಾಲಯಕ್ಕೆ ಚುರುಕು ಮುಟ್ಟಿಸಲು ಮುಂದಾಗಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಇಬ್ಬರು ಆಯಕಟ್ಟಿನ ಅಧಿಕಾರಿಗಳನ್ನು ಬದಲಾವಣೆ ಮಾಡಿದ್ದಾರೆ.

ಮುಖ್ಯಮಂತ್ರಿ ಸಚಿವಾಲಯ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ. ಯಾವ ಕೆಲಸವೂ ಆಗುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗಿತ್ತು.  ಸಚಿವಾಲಯದ ಕಾರ್ಯವೈಖರಿ ಬದಲಾವಣೆ ಮಾಡುವಂತೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರು. ಈ ನಿರ್ದೇಶನದ ಅನುಸಾರ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಕಾರ್ಯದರ್ಶಿಯಾಗಿದ್ದ ಶಿವಯೋಗಿ ಕಳಸದ ಅವರನ್ನು ವರ್ಗಾವಣೆ ಮಾಡಿ, ಅವರ ಜಾಗಕ್ಕೆ ಎಸ್‌. ಸೆಲ್ವಕುಮಾರ್ ಅವರನ್ನು ತರಲಾಗಿದೆ. ಸೆಲ್ವಕುಮಾರ್ ಅವರು ಹಿಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

ಮುಖ್ಯಮಂತ್ರಿ ಕಾರ್ಯದರ್ಶಿ–2 ಹುದ್ದೆಯಲ್ಲಿದ್ದ ವಿ.ಪಿ. ಇಕ್ಕೇರಿ ಅವರನ್ನು ಬಿಎಂಆರ್‌ಡಿಎ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಇತ್ತೀಚೆಗೆ ವರ್ಗಾವಣೆ ಮಾಡಲಾಗಿತ್ತು. ಇವರ ಬದಲಿಗೆ ಆರ್. ವಿಶಾಲ್ ಅವರನ್ನು ಮುಖ್ಯಮಂತ್ರಿ ಸಚಿವಾಲಯಕ್ಕೆ ವರ್ಗಾವಣೆ ಮಾಡಲಾಗಿದ್ದು, ಹೆಚ್ಚುವರಿ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ.

ಶಿವಮೊಗ್ಗ ನಗರ ಪಾಲಿಕೆ ಆಯುಕ್ತೆಯಾಗಿದ್ದ ಚಾರುಲತಾ ಸೋಮಲ್‌ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಹುದ್ದೆ ನೀಡಲಾಗಿದೆ.

ಐಎಎಸ್ ಅಧಿಕಾರಿಗಳ ವರ್ಗ: ಪಿ. ಹೇಮಲತಾ–ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ. ಜಾವೇದ್ ಅಖ್ತರ್‌–ಪ್ರಧಾನ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ. ಆರ್. ವಿಶಾಲ್‌–ಆಯುಕ್ತ, ಗ್ರಾಮೀಣ ನೀರು ಸರಬರಾಜು ಸಂಸ್ಥೆ(ಹೆಚ್ಚುವರಿ ಹೊಣೆ). ಅನಿರುಧ್ ಶ್ರವಣ್‌– ಆಯುಕ್ತ, ಗ್ರಾಮೀಣಾಭಿವೃದ್ಧಿ ಇಲಾಖೆ.

ಪಲ್ಲವಿ ಅಕುರಾತಿ–ನಿರ್ದೇಶಕಿ, ಸಂಯೋಜಿತ ಮಕ್ಕಳ ರಕ್ಷಣಾ ಯೋಜನೆ. ಎಂ.ಸುಂದರೇಶ್ ಬಾಬು–ವ್ಯವಸ್ಥಾಪಕ ನಿರ್ದೇಶಕ, ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್ ಸಿಟಿ ನಿಗಮ, ಹುಬ್ಬಳ್ಳಿ. ಅಕ್ರಂ ಪಾಶ–ಆಯುಕ್ತ, ಕಬ್ಬು ಅಭಿವೃದ್ಧಿ ಆಯುಕ್ತ ಮತ್ತು ಸಕ್ಕರೆ ನಿರ್ದೇಶಕ.

ಪ್ರತಿಕ್ರಿಯಿಸಿ (+)