ಕಾಫಿ ಹೀರಲು ಸಂತೇಲಿ ಸುತ್ತಾಡಿ

7

ಕಾಫಿ ಹೀರಲು ಸಂತೇಲಿ ಸುತ್ತಾಡಿ

Published:
Updated:

ಚುಮು ಚುಮು ಚಳಿಗೆ ಮುದುಡಿದ ದೇಹಕ್ಕೆ ಬೆಚ್ಚನೆ ಕಾಫಿ ಟಾನಿಕ್ ಇದ್ದಂತೆ. ಹೊಗೆಯಾಡುವ ಹಾಗೂ ಸ್ವಾದ ನೀಡುವ ಕಾಫಿಯನ್ನು ಗ್ಲಾಸ್‌ನಲ್ಲಿ ಹಾಕಿ ಕೈಯಲ್ಲಿ ಹಿಡಿದು ತುಟಿಗೇರಿಸಿ ಹೀರುತ್ತಿದ್ದರೆ ಅಬ್ಬಾ ಇನ್ನೇನು ಬೇಕು ದಿನದ ಆರಂಭಕ್ಕೆ ಅನಿಸದಿರದು. ಕೆಲವರಿಗೆ ಕಾಫಿ ಇಲ್ಲದೇನೆ ದಿನ ಆರಂಭವಾಗುವುದೇ ಇಲ್ಲ...

 ದೇಶದಲ್ಲಿ ಲಭ್ಯವಿರುವ ಬಹುತೇಕ ಎಲ್ಲ ಕಾಫಿ ಪುಡಿ ಹಾಗೂ ಕಾಫಿಯು ಒಂದೇ ಜಾಗದಲ್ಲಿ ಸಿಗುತ್ತಿದೆ. ಅದು ಬೆಂಗಳೂರಿನಲ್ಲೇ ಎಂಬುದು


ಶಣ್ಮುಗ ಸುಂದರ್

ವಿಶೇಷ. ನಗರದ ಒರಾಯನ್ ಮಾಲ್‌ ಆವರಣದಲ್ಲಿ ವುಮೆನ್ಸ್ ಕಾಫಿ ಅಲೆಯನ್ಸ್ ಇಂಡಿಯಾ ಸಮೂಹವು ‘ಕಾಫಿ ಸಂತೆ’ ಆರಂಭಿಸಿದೆ.

ಸಂತೆ ಆಯೋಜನೆಯ ಹಿಂದೆ ಸಾಮಾಜಿಕ ಕಳಕಳಿ ಇದೆ. ಕಾಫಿ ತೋಟಗಳಲ್ಲಿ ದಿನವಿಡೀ ಬೆವರು ಹರಿಸಿ, ದುಡಿವ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಲುವಾಗಿ ಈ ಸಂತೆ ಆಯೋಜಿಸಿದ್ದು, ಸಂತೆಯಲ್ಲಿ ಸಂಗ್ರಹವಾಗುವ ಹಣವನ್ನು ಅವರಿಗಾಗಿಯೇ ವ್ಯಯಿಸಲಾಗುತ್ತದೆ.

ಜ.11ರಿಂದ ಪ್ರಾರಂಭವಾಗಿರುವ ಈ ಸಂತೆಯು ಇದೇ ಭಾನುವಾರ (ಜ.13) ವರೆಗೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ  ನಡೆಯಲಿದೆ. ನೂರಕ್ಕೂ ಅಧಿಕ ಮಳಿಗೆಗಳಿದ್ದು, ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮಳಿಗೆಗಳು ಕಾಫಿಗೆ ಸಂಬಂಧಿಸಿದವು. ಉಳಿದವು ಬಟ್ಟೆಗಳ, ಕರಕುಶಲ ವಸ್ತುಗಳ, ವಿವಿಧ ಕಲಾಕೃತಿಗಳ ಮಳಿಗೆಗಳು.


ಕಾಫಿ ಮಷಿನ್

ಹೇಳಿ ಕೇಳಿ ಒರಾಯನ್ ಮಾಲ್ ಜನಾಕರ್ಷಣೆಯ ತಾಣ. ಜನರು ಒಂದೊಂದೇ ಮಳಿಗೆಗಳಿಗೆ ಭೇಟಿ ಕೊಟ್ಟು ಅಲ್ಲಿದ್ದ ವಿಶೇಷ ಕಾಫಿಯನ್ನು ಹೀರಿ ಖುಷಿ ಪಡುತ್ತಿದ್ದರು. ಮಾರಾಟಗಾರರು ತಮ್ಮಲ್ಲಿ ಲಭ್ಯವಿರುವ ತರಹೇವಾರಿ ಕಾಫಿ ಫುಡಿ ಹಾಗೂ ಕಾಫಿ ತಯಾರಿಸುವ ಮಷಿನ್‌ಗಳ ಬಗ್ಗೆ ವಿವರಿಸುತ್ತಿದ್ದರು. ಕೆಲ ಮಳಿಗೆಗಳಲ್ಲಿ ತಮ್ಮಲ್ಲಿ ಲಭ್ಯವಿರುವ ಕಾಫಿ ಪುಡಿಯ ಸ್ವಾದ ಪರಿಚಯಿಸಲೆಂದೇ ಸಾರ್ವಜನಿಕರಿಗೆ ಕಾಫಿ ನೀಡುತ್ತಿದ್ದರು.

ಸಂತೆಯಲ್ಲಿ ಸುತ್ತಾಡಿ ವಿಶೇಷ ಎನಿಸಿದ ಕಾಫಿಯನ್ನು ಖರೀದಿಸಿದ ಯುವಕ ಯುವತಿಯರು ಕೊಳದ ಪ್ರದೇಶದ ದಡದಲ್ಲಿ ಹಾಕಿದ್ದ ಕಲ್ಲಿನ ಹಾಸುಗಳ ಮೇಲೆ ಕಾಲಿನ ಮೇಲೆ ಕಾಲು ಹಾಕಿ ಕೊಳದತ್ತ ಮುಖಮಾಡಿ ಮೆಲ್ಲನೆ ಕಾಫಿಯನ್ನು ಹೀರುತ್ತಿದ್ದದ್ದು ಕಾಫಿ ಸವಿದಷ್ಟೇ ಚೆಂದವಾಗಿತ್ತು. ಜೋಡಿಯೊಂದು ಒಂದೇ ಕಪ್‌ನಲ್ಲಿದ್ದ ಕಾಪಿಯನ್ನು ಒಬ್ಬರಾದ ಮೇಲೆ ಒಬ್ಬರು ತುಟಿಗೇರಿಸುತ್ತಿದ್ದರು. ಅಲ್ಲಿನ ಇಡೀ ವಾತಾವರಣ ರೊಮ್ಯಾಂಟಿಕ್ ಆಗಿತ್ತು.

‌ತರಹೇವಾರಿ ಕಾಫಿ ಮಾಡುವ ಸಂಬಂಧ ಸ್ಪರ್ಧೆಯೊಂದನ್ನು ಆಯೋಜಿಸಲಾಗಿತ್ತು. ನಿರ್ದಿಷ್ಟ ಸಮಯದೊಳಗೆ ಶುಚಿತ್ವದಿಂದ ರುಚಿಕರವಾದ ಕಾಫಿ ಮಾಡುವುದು ಸ್ಪರ್ಧೆಯಾಗಿತ್ತು. ಸ್ಪರ್ಧಿಸಿದ್ದ ಅಭ್ಯರ್ಥಿಗಳು ಕಾಫಿ ಮಷಿನ್‌ಗಳನ್ನು ಬಳಸಿ ಚಕ ಚಕನೆ ಕಾಫಿ ಮಾಡಿ, ತೀರ್ಪುಗಾರರ ಮುಂದಿಟ್ಟರು. ಅದನ್ನು ಸಿಪ್ ಬೈ ಸಿಪ್ ಹೀರಿ ಅಂಕಗಳನ್ನು ನಿಗದಿ ಮಾಡುತ್ತಿದ್ದರು ದೇಶ ವಿದೇಶದಿಂದ ಬಂದಿದ್ದ ತೀರ್ಪುಗಾರರು.

ಸಂತೆ ಸುತ್ತಾಡಿ ಕಾಫಿ ಸವಿದೆ

‘ನಾನು ಕಾಫಿ ಪ್ರಿಯ. ಇದೇ ಮೊದಲ ಬಾರಿಗೆ ನಾನು ಈ ಕಾಫಿ ಸಂತೆಗೆ ಬಂದಿದ್ದೇನೆ. ವಾತಾವರಣಕ್ಕೆ ತಕ್ಕಂತೆ ತರಹೇವಾರಿ ಕಾಫಿ ಹೀರಲು ಬೆಳಿಗ್ಗೆಯೇ ಇಲ್ಲಿಗೆ ಬಂದೆ. ವಾತಾವರಣವೂ ಇಷ್ಟವಾಯಿತು. ಕಾಫಿ ಹೀರುತ್ತಾ ಸುತ್ತಾಡಿದೆ. ಕಾಫಿ ಮಾಡುವ ಸಣ್ಣ ಯಂತ್ರ ಹಾಗೂ ಕಾಫಿ ಪುಡಿ ಖರೀದಿಸಿದ್ದೇನೆ. ಆದರೆ, ಪ್ಯೂರ್ ಅರೇಬಿಕಾ ಕಾಫಿ ಪುಡಿ ಸಿಗಲಿಲ್ಲ. ತಡವಾಗಿ ಸಿಗುತ್ತದೆ ಎಂದು ಮಳಿಗೆಯ ವ್ಯಾಪಾರಿಯೊಬ್ಬರು ಹೇಳಿದ್ದಾರೆ. ಒಟ್ಟಾರೆ ಸಂತೆ ಖುಷಿ ಕೊಟ್ಟಿತು’ ಎಂದರು ಸದಾಶಿವನಗರದ ಶಣ್ಮುಗ ಸುಂದರ್.

‘ಇಟಲಿ, ಜರ್ಮನ್ ಹಾಗೂ ಅಮೆರಿಕದ ಕಾಫಿ ಮಷಿನ್‌ಗಳನ್ನು ನಾವು ಮಾರಾಟ ಮಾಡುತ್ತೇವೆ. ಕಾಫಿ ಪುಡಿ ಮಾಡುವ ಮಷಿನ್‌ಗಳು ಲಭ್ಯ. ಸೆಮಿ ಆಟೋಮ್ಯಾಟಿಕ್ ಯಂತ್ರವಾದ ರ‍್ಯಾನ್ಸಿಲಿಯೊ ಹಾಗೂ ಸಂಪೂರ್ಣ ಆಟೋಮ್ಯಾಟಿಕ್ ಯಂತ್ರವಾದ ಡಬ್ಲ್ಯುಎಂಎಫ್ ಯಂತ್ರಗಳು ಲಭ್ಯ. ಸಾಮಾನ್ಯವಾಗಿ ಇಂತಹ ಸಂತೆಗಳಲ್ಲಿ ನಮ್ಮಲ್ಲಿನ ಯಂತ್ರಗಳ ಮಾರಾಟ ಕಡಿಮೆಯೇ. ಪ್ರದರ್ಶನ ಹಾಗೂ ಪ್ರಮೋಷನ್‌ಗಾಗಿ ಯಂತ್ರಗಳನ್ನು ಇಲ್ಲಿ ಪ್ರದರ್ಶಿಸುತ್ತಿದ್ದೇವೆ’ ಎಂದರು ಕಾಫಿ ಮಷಿನ್ಸ್ ಸಂತೆಯ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಸಂದೀಪ್ ರೆಡ್ಡಿ ಹೇಳಿದರು.

ಇನ್ನೂ ಕಾಫಿ ಬೋರ್ಡ್‌ನ ಮಳಿಗೆಯೂ ಸಂತೆಯಲ್ಲಿತ್ತು. ‘ರಾಜ್ಯದ ಕಾಫಿ ಪುಡಿಯ ಬಗ್ಗೆ ಜಾಗೃತಿ ಮಾಡಿಸಲು ಹಾಗೂ ಪ್ರಮೋಷನ್‌ ಉದ್ದೇಶದಿಂದ ಸಂತೆಯಲ್ಲಿ ಬೋರ್ಡ್ ಪಾಲ್ಗೊಂಡಿದೆ. ಕಾಫಿ ಬೀಜ ಬೆಳೆಯುವ ಪ್ರದೇಶಗಳಿಗೆ ಐಡೆಂಟಿಟಿ ತಂದುಕೊಡುವ ಸಲುವಾಗಿ ಆಯಾ ಪ್ರದೇಶದ ಹೆಸರಿನ ಮೂಲಕವೇ ಕಾಫಿ ಪುಡಿಯನ್ನು ಪರಿಚಯಿಸಿದ್ದೇವೆ’ ಎನ್ನುತ್ತಾರೆ ಕಾಫಿ ಬೋರ್ಡ್‌ನ ಸಹಾಯಕ ಕಾರ್ಯದರ್ಶಿ ಪ್ರೇಮಕುಮಾರಿ.


ಕಾಫಿ ತಯಾರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಅಭ್ಯರ್ಥಿ


ಕಾಫಿ ಮಷಿನ್

 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !