ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಬದ್ಧ: ಪ್ರಹ್ಲಾದ ಜೋಶಿ

ಸ್ಮಾರ್ಟ್ ಸಿಟಿ ಯೋಜನೆ ತ್ವರಿತಗತಿ ಜಾರಿ: ಎಲ್ಲ ಪ್ರಸ್ತಾವನೆಗಳಿಗೆ ಶೀಘ್ರ ಅನುಮೋದನೆ ಭರವಸೆ
Last Updated 2 ಜೂನ್ 2019, 9:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಧಾರವಾಡ ಲೋಕಸಭಾ ಕ್ಷೇತ್ರ ಹಾಗೂ ಹುಬ್ಬಳ್ಳಿ– ಧಾರವಾಡ ಅವಳಿನಗರದ ಅಭಿವೃದ್ಧಿಗೆ ಬದ್ಧನಾಗಿದ್ದೇನೆ’ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಸಚಿವರಾದ ನಂತರ ಭಾನುವಾರ ಮೊದಲ ಬಾರಿಗೆ ತವರು ಜಿಲ್ಲೆಗೆ ಬಂದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ‘ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರದ ಎಲ್ಲ ಯೋಜನೆಗಳನ್ನು ಇಲ್ಲಿ ಜಾರಿಗೊಳಿಸಲಾಗುವುದು. ರಾಜ್ಯ ಸರ್ಕಾರ ಕಳುಹಿಸುವ ಎಲ್ಲ ಪ್ರಸ್ತಾವನೆಗಳಿಗೆ ತ್ವರಿತವಾಗಿ ಮಂಜೂರಾತಿ ಕೊಡಿಸುವ ಜವಾಬ್ದಾರಿ ನನ್ನದು. ಯಾವ ಕೆಲಸ ಆಗಬೇಕು, ಯಾವ ಯೋಜನೆ ಜಾರಿಗೊಳಿಸಬೇಕು ಎಂಬುದರ ಬಗ್ಗೆ ಇಲ್ಲಿನ ಎಲ್ಲ ಶಾಸಕರೊಂದಿಗೆ ಚರ್ಚೆ ನಡೆಸಲಾಗುವುದು’ ಎಂದರು.

‘ಚನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣ ಮಾಡುವ ಸಂಬಂಧ ಈ ಹಿಂದೆಯೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮಾತನಾಡಲಾಗಿದೆ. ₹ 315 ಕೋಟಿ ಯೋಜನೆಗೆ ಮಂಜೂರಾತಿ ನೀಡುವುದಾಗಿ ಈಗಾಗಲೇ ಅವರು ಭರವಸೆ ನೀಡಿದ್ದಾರೆ. ಉಳಿದ ಕಾಮಗಾರಿಗೆ (ಸೆಕ್ಷನ್) ಅಗತ್ಯ ಇರುವ ಮೊತ್ತಕ್ಕಾಗಿ ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ ಕಳುಹಿಸಬೇಕು. ಆ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.

‘ಹುಬ್ಬಳ್ಳಿ– ಬೆಂಗಳೂರು ಬೆಳಗಿನ ವಿಮಾನ ಬೇಕು ಎಂಬ ಬೇಡಿಕೆ ಇತ್ತು. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತನಾಡಿ ಏರ್‌ ಇಂಡಿಯಾ ಸೇವೆಯನ್ನು ಇವತ್ತಿನಿಂದ (ಭಾನುವಾರ) ಆರಂಭಿಸಲಾಗಿದೆ’ ಎಂದು ಅವರು ಹೇಳಿದರು.

ಬಲ ನೀಡಿದ ಕ್ಷೇತ್ರದ ಜನ:

‘ಧಾರವಾಡ ಲೋಕಸಭಾ ಕ್ಷೇತ್ರದ ಜನರಿಗೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸುತ್ತೇನೆ. ಅವರ ಆಶೀರ್ವಾದ ಬೆಂಬಲ ಇಲ್ಲದಿದ್ದರೆ ಮಂತ್ರಿಗಿರಿಯ ಜವಾಬ್ದಾರಿ ಸಿಗಲು ಸಾಧ್ಯವಿರಲಿಲ್ಲ. ನಾಯಕರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಅರವಿಂದ ಬೆಲ್ಲದ, ನಿಂಬಣ್ಣವರ, ಪ್ರದೀಪ್ ಶೆಟ್ಟರ್, ಅಮೃತ್ ದೇಸಾಯಿ, ಸಂಕನೂರು ಹಾಗೂ ಎಲ್ಲ ಕಾರ್ಯಕರ್ತರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಅವರ ನೈತಿಕ ಬೆಂಬಲ ಕೇಂದ್ರ ಸಚಿವ ಸ್ಥಾನದ ಜವಾಬ್ದಾರಿ ನಿರ್ವಹಿಸಲು ಬಲ ತುಂಬಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT