ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸೇತು ಮಾದರಿಯ ಆ್ಯಪ್: ಬಂಟಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅವಿಷ್ಕಾರ

ಅಕ್ಷರ ಗಾತ್ರ

ಶಿರ್ವ: ಜಗತ್ತನ್ನು ಕಾಡುತ್ತಿರುವ ಕೋವಿಡ್-19 ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಮಾಹಿತಿ, ಮಾರ್ಗದರ್ಶನ ನೀಡಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ‘ಆರೋಗ್ಯ ಸೇತು ಆ್ಯಪ್’ ಮಾದರಿಯಲ್ಲಿ ಹೊಸ ‘ಕೋವಿಡ್ -19 ಆ್ಯಪ್‍’ ಅನ್ನು ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾರ್ಥಿಗಳ ತಂಡ ಅಭಿವೃದ್ಧಿಪಡಿಸಿ ವಿಶೇಷ ಸಾಧನೆ ಮಾಡಿದೆ.

ಲಾಕ್‍ಡೌನ್ ಅವಧಿಯಲ್ಲಿ ಕೋವಿಡ್-19 ಅನ್ನು ನಿಯಂತ್ರಿಸಲು ತಾಂತ್ರಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕರೆಗೆ ಸ್ಪಂದಿಸಿದ ವಿದ್ಯಾರ್ಥಿಗಳು ಈ ಹೊಸ ಆ್ಯಪ್‍ ಅನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಟಕಲ್ ತಾಂತ್ರಿಕ ವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿ ಸೂರಜ್ ನೇತೃತ್ವದ ತಂಡವು ಹೊಸ ಮೊಬೈಲ್ ಆ್ಯಪ್ ಅಭಿವೃದ್ಧಿಗೊಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸೇತು ಆ್ಯಪ್ ಬರುವ ಮೊದಲೇ ಈ ‘ಕೋವಿಡ್ -19 ಆ್ಯಪ್‍’ ಅನ್ನು ತಯಾರಿಸಿರುವ ವಿದ್ಯಾರ್ಥಿಗಳು, ಇದೀಗ ಆ್ಯಪ್‌ ಅನ್ನು ಲೋಕಾರ್ಪಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.

‘ಈ ಮೊಬೈಲ್ ಆ್ಯಪ್ ಕರ್ನಾಟಕ ರಾಜ್ಯದ ಕೋವಿಡ್ ಸೋಂಕಿನ ಪ್ರಸ್ತುತ ಅಂಕಿ ಅಂಶಗಳು, ಈ ರೋಗದ ಬಗೆಗಿರುವ ಸತ್ಯ ಮಿಥ್ಯೆಗಳು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ, ಪ್ರಶ್ನಾವಳಿಗಳ ಮೂಲಕ ಸ್ವ ಆರೋಗ್ಯ ಪರೀಕ್ಷೆ, ಹತ್ತಿರದಲ್ಲಿರುವ ಕೋವಿಡ್ ತಪಾಸಣಾ ಮತ್ತು ಚಿಕಿತ್ಸಾ ಕೇಂದ್ರಗಳ ಸಂಪರ್ಕ- ಮಾಹಿತಿ ಇತ್ಯಾದಿ ವಿಶೇಷತೆಗಳನ್ನು ಹೊಂದಿದೆ.

ಆರೋಗ್ಯ ಸೇತು ಆ್ಯಪ್‍ನಂತೆ ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಕೋವಿಡ್ ಲಕ್ಷಣ ಇರುವವರು ಅಥವಾ ಮಾಹಿತಿ ಬೇಕಾದವರು ಈ ಆ್ಯಪ್ ಬಳಸಿಕೊಂಡು ಜಿಪಿಎಸ್ ಮುಖಾಂತರ ಕ್ವಾರಂಟೈನ್ ಕೇಂದ್ರ, ಕೋವಿಡ್ ಕ್ಲಿನಿಕ್‍ಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಸೂರಜ್, ದೀಪಕ್ ನಾಯಕ್, ಉಲ್ಲಾಸ್, ಸೌರಭ್ ಶೆಟ್ಟಿ, ಅಭಿಜಿತ್, ಹಿತ್ಯೇಶ್ ಆಚಾರ್.

ಅನುದಾನ: ‘ಲಾಕ್‌ಡೌನ್‌ ನಿರ್ಬಂಧದ ಅವಧಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ಅತ್ಯಂತ ಸೃಜನಾತ್ಮಕವಾಗಿ ಉಪಯೋಗಿಸಿಕೊಂಡಿದ್ದಾರೆ. ಈ ತಂಡಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ತಾಂತ್ರಿಕ ಶಿಕ್ಷಣ ಗುಣಮಟ್ಟ ಸುಧಾರಣಾ ಯೋಜನೆಯಡಿಯಲ್ಲಿ ಆರ್ಥಿಕ ಅನುದಾನ ನೀಡಿದೆ. ಈ ತಂಡಕ್ಕೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸುತ್ತಿದೆ’ ಎಂದು ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT