ಸೋಮವಾರ, ಡಿಸೆಂಬರ್ 16, 2019
18 °C
‘ನಮ್ಮ ಮೆಟ್ರೊ’ ಪ್ರಗತಿ ಕುರಿತು ಸಭೆ; ಡಿ.ಸಿ.ಎಂ ಅಶ್ವತ್ಥನಾರಾಯಣ ಹೇಳಿಕೆ

‘ವಾರ್‌ ರೂಂ’ ಮಾದರಿ ವ್ಯವಸ್ಥೆ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಮ್ಮ ಮೆಟ್ರೊ’ ಮಾರ್ಗವನ್ನು ತ್ವರಿತ ಗತಿಯಲ್ಲಿ ನಿರ್ಮಿಸಲು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಎದುರಿಸುತ್ತಿರುವ ತೊಂದರೆಗಳ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ ಚರ್ಚೆ ನಡೆಸಿದರು. 

ಸರ್ಕಾರದ ಯಾವುದೇ ಯೋಜನೆ ಜಾರಿಗೊಳಿಸಲು ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸಲು ಬೇಕಾದ ವಿಶೇಷ ‘ವಾರ್‌ ರೂಂ’ ಮಾದರಿಯ ವ್ಯವಸ್ಥೆಯನ್ನು ಜಾರಿಗೊಳಿಸಲು ಮತ್ತು ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

‘ಮೆಟ್ರೊ  ಮಾರ್ಗ, ನಿಲ್ದಾಣಗಳ ನಿರ್ಮಾಣಕ್ಕಾಗಿ ಸ್ಥಳೀಯ ಸಂಸ್ಥೆಗಳಿಂದ ಹಲವು  ಅನುಮತಿ ಪಡೆಯಬೇಕು. ಇದಕ್ಕಾಗಿ ಕೆಲವು ಸಲ ಸಾಕಷ್ಟು ಸಮಯ ವ್ಯಯ ಆಗುತ್ತದೆ. ಹೀಗಾಗಿ, ಮುಂಬೈ ಮಾದರಿಯಲ್ಲಿ `ವಾರ್ ರೂಂ' ಜಾರಿಗೊಳಿಸುವುದು ಅವಶ್ಯ’ ಎಂದು ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಮಹಾರಾಷ್ಟ್ರದಲ್ಲಿ ಈ ವ್ಯವಸ್ಥೆ ಇದೆ. ಅದನ್ನು ಅಭ್ಯಸಿಸಲು ನಿಯೋಗವೊಂದನ್ನು ಮುಂಬೈಗೆ ಕಳುಹಿಸಲು ತೀರ್ಮಾನಿಸಲಾಯಿತು.

ಬೆಂಗಳೂರಿನಲ್ಲಿ ಹತ್ತು ವರ್ಷಗಳಲ್ಲಿ ಕೇವಲ 42 ಕಿ.ಮೀ. ಮೆಟ್ರೊ ಮಾರ್ಗ ನಿರ್ಮಾಣವಾಗಿದ್ದರೆ, ದೆಹಲಿಯಲ್ಲಿ 7 ವರ್ಷಗಳಲ್ಲೇ 210 ಕಿ.ಮೀ. ಮಾರ್ಗ ನಿರ್ಮಾಣವಾಗಿದೆ. ನಗರದಲ್ಲಿ ಮೆಟ್ರೊ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 

‘ಉದ್ಯಾನವಾಗಿ ಕಿರು ಅರಣ್ಯ ಅಭಿವೃದ್ಧಿ’

ನಗರ ವ್ಯಾಪ್ತಿಯಲ್ಲಿರುವ ಕಿರು ಅರಣ್ಯಗಳನ್ನು ಗುರುತಿಸಿ, ಅವುಗಳನ್ನು ಕಬ್ಬನ್‌ ಪಾರ್ಕ್‌, ಲಾಲ್‌ಬಾಗ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಅಶ್ವತ್ಥನಾರಾಯಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜನರಿಗೆ ಅನುಕೂಲವಾಗುವಂತೆ ಕಿರು ಅರಣ್ಯಗಳನ್ನು ಅಭಿವೃದ್ಧಿ ಪಡಿಸಬೇಕು. ಆದರೆ, ಅದರಲ್ಲಿನ ಜೀವವೈವಿಧ್ಯಗಳಿಗೆ ತೊಂದರೆಯಾಗದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು ಎಂದ ಅವರು, ಈ ಕುರಿತ ಸಾಧಕ–ಬಾಧಕಗಳ ಕುರಿತು ಅರಣ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. 

ಸೆ. 17ರಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ, ವಿಶೇಷ ಅಭಿಯಾನದ ಮೂಲಕ ಗಿಡಗಳನ್ನು ನೆಡಲು ಸಭೆಯಲ್ಲಿ ನಿರ್ಧರಿಸಲಾಯಿತು. 

ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಇದ್ದರು.

ಸಂತ್ರಸ್ತರ ನೆರವಿಗಾಗಿ ಕ್ರಿಕೆಟ್‌ ಪಂದ್ಯ

ಪ್ರವಾಹ ಸಂತ್ರಸ್ತರ ನೆರವಿಗಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ಸೇರಿದಂತೆ, ಚಲನಚಿತ್ರ ನಟರನ್ನು ಒಳಗೊಂಡ ಕ್ರಿಕೆಟ್‌ ಟೂರ್ನಿಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ನಿರ್ಧರಿಸಿದೆ. ಬಿಸಿಸಿಐ ಒಪ್ಪಿಗೆ ನಂತರ ಈ ಪಂದ್ಯಗಳನ್ನು ಆಯೋಜಿಸಲು ಅದು ತಾತ್ವಿಕ ಒಪ್ಪಿಗೆ ನೀಡಿದೆ. 

ಪರಿಹಾರ ಕಾರ್ಯಕ್ರಮಗಳಿಗೆ ಕೈಜೋಡಿಸುವಂತೆ ಅಶ್ವತ್ಥನಾರಾಯಣ್‌ ಅವರು ಮಾಡಿಕೊಂಡ ಮನವಿಗೆ ಕೆಎಸ್‌ಸಿಎ ಸ್ಪಂದಿಸಿತು. ಈ ಪಂದ್ಯಗಳಿಂದ ಸಂಗ್ರಹಿಸಿದ ಹಣವನ್ನು ಪರಿಹಾರ ನಿಧಿಗೆ ನೀಡಲು ನಿರ್ಧರಿಸಲಾಯಿತು.

ಕೆಎಸ್‌ಸಿಎಯ ಸಂಜಯ್‌ ಜೋಶಿ, ಸುಧಾಕರ್‌ ರಾವ್, ವಿನಯ್‌ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು