ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಬೆಂಗಳೂರು ವಿ.ವಿಯಲ್ಲಿ ಪ್ರೊ.ಎಂ.ಡಿ.ಎನ್‌ ಪ್ರತಿಮೆ ಸ್ಥಾಪನೆಗೆ ರೈತ ಸಂಘ ಒತ್ತಾಯ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಪ್ರತಿಮೆಯನ್ನೂ ಸ್ಥಾಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಪ್ರೊ. ಎಂ.ಡಿ.ಎನ್‌ ಅವರ ಪ್ರತಿಮೆಯನ್ನು ಸರಸ್ವತಿ ಮತ್ತು ಬುದ್ಧ ವಿಗ್ರಹಗಳ ಜತೆಯಲ್ಲೇ ಪ್ರತಿಷ್ಠಾಪಿಸಬೇಕು ಎಂದು ರೈತ ಸಂಘ ಪಟ್ಟು ಹಿಡಿದಿದೆ.

ರೈತರಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟು ಹೋರಾಟ ನಡೆಸಿದ ನಂಜುಂಡಸ್ವಾಮಿ ಅವರ ಪ್ರತಿಮೆ ಸ್ಥಾಪಿಸುವುದರಿಂದ ವಿದ್ಯಾರ್ಥಿಗಳಿಗೆ ಉತ್ತೇಜನ ಸಿಗುತ್ತದೆ. ಆದ್ದರಿಂದ ಪ್ರತಿಮೆ ಸ್ಥಾಪಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಹಲವು ವರ್ಷಗಳಿಂದ ಸರಸ್ವತಿ ವಿಗ್ರಹ ಇದ್ದ ಜಾಗದಲ್ಲಿ ಬುದ್ಧ ವಿಗ್ರಹವನ್ನು ರಾತ್ರೋರಾತ್ರಿ ಸ್ಥಾಪಿಸಿದ ಬಳಿಕ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ ವರ್ಗದ ನೌಕರರು ಕನಕದಾಸ, ಬಸವಣ್ಣ, ಶಿಶುನಾಳ ಶರೀಫ, ಮಹಾತ್ಮಾಗಾಂಧಿ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಸರಸ್ವತಿ ವಿಗ್ರಹಗಳ ಜತೆಗೆ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಪ್ರೊ.ಡಿ. ಎಂ.ನಂಜುಂಡಪ್ಪ ಕುಲಪತಿ ಆಗಿದ್ದ ಸಂದರ್ಭದಲ್ಲಿ ಸರಸ್ವತಿ ವಿಗ್ರಹವನ್ನು ಸ್ಥಾಪಿಸಲಾಗಿತ್ತು. ಇತ್ತೀಚೆಗೆ ಸರಸ್ವತಿ ವಿಗ್ರಹ ಭಿನ್ನಗೊಂಡಿದ್ದರಿಂದ, ಅದನ್ನು ತೆರವು ಮಾಡಿ ಅಲ್ಲಿ ಹೊಸ ವಿಗ್ರಹ ಸ್ಥಾಪಿಸಲು ವಿಶ್ವವಿದ್ಯಾಲಯ ಮುಂದಾಗಿತ್ತು. ಆದರೆ, ಮೇ 6 ರಂದು ಸರಸ್ವತಿ ವಿಗ್ರಹ ಇದ್ದ ಜಾಗದಲ್ಲಿ ಬುದ್ಧನ ವಿಗ್ರಹ ತಂದಿಡಲಾಗಿತ್ತು. ಈ ಸಂಬಂಧ ವಿಶ್ವವಿದ್ಯಾಲಯದಲ್ಲಿ ಎರಡು ಗುಂಪಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಒಳ್ಳೆಯ ಬೆಳವಣಿಗೆ ಅಲ್ಲ: ‘ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಒಳ್ಳೆಯದಲ್ಲ. ಈ ಬಗ್ಗೆ  ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಸಮಿತಿಯೊಂದನ್ನು ರಚಿಸಿ,  ಎಲ್ಲ ವಿಶ್ವವಿದ್ಯಾಲಯಗಳಿಗೆ ಅನ್ವಯ ಆಗುವಂತೆ ಸಾಮಾನ್ಯ ಶಿಫಾರಸು ನೀಡಲು ಸಮಿತಿಯನ್ನು ಕೋರಲಾಗುವುದು. ಅದನ್ನು ಆಧರಿಸಿ ಆದೇಶ ಹೊರಡಿಸುತ್ತೇವೆ’ ಎಂದು ಅವರು ಹೇಳಿದರು.

Post Comments (+)