ಶುಕ್ರವಾರ, ಜೂಲೈ 10, 2020
24 °C

ಬಂದ ‘ಮಾದಾರಿ ಮಾದಯ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಶ್ವಘೋಷ ಥಿಯೇಟರ್ ಟ್ರಸ್ಟ್, ಒಂದು ವರ್ಷದ ಅವಧಿಯಲ್ಲಿ ‘ಬೀದಿ ಬಿಂಬ ರಂಗದ ತುಂಬಾ’, ‘ಪುರಹರ’, ‘ನನ್ನ ಕಥೆ’ ನಾಟಕಗಳನ್ನು ಪ್ರಸ್ತುತಪಡಿಸಿದೆ. ಈಗ ‘ಮಾದಾರಿ ಮಾದಯ್ಯ’ ನಾಟಕವನ್ನು ಪ್ರದರ್ಶಿಸುತ್ತಿದೆ. 

ಕನ್ನಡ ಜನಪದ ಚರಿತ್ರೆಯ ಅಧ್ಯಾಯಗಳಲ್ಲಿ ಒಂದಾಗಿರುವ ಮಾದೇಶ್ವರನ ಪುಣ್ಯಕಥೆಯ ಸಮಕಾಲೀನ ಅರ್ಥದ ನಾಟಕವೇ ಮಾದಾರಿ ಮಾದಯ್ಯ. ಇದು ಮೇಲುನೋಟಕ್ಕೆ ಅದ್ಭುತ ಪವಾಡದ ಕತೆ. ಮಾದೇಶ್ವರ ನಿಸರ್ಗದ ಶಕ್ತಿಗಳನ್ನು ತನ್ನ ಅಡಿಯಾಳಾಗಿಸಿಕೊಂಡು ಶ್ರವಣನನ್ನು ನಾಶ ಮಾಡುವ ಕತೆ ಇಲ್ಲಿದೆ. ಇಡೀ ನಾಟಕ ಪವಾಡದ ಸರಣಿಯನ್ನು ಯಥಾವತ್ತಾಗಿ ನಿರೂಪಿಸದೆ, ಒಂದು ರೀತಿಯ ಆಟದ ಮೂಲಕ, ಆಚರಣೆಯ ಮೂಲಕ ಕಟ್ಟಿಕೊಡುವುದರಿಂದ ಇಲ್ಲಿನ ಪವಾಡಗಳು ಕಾರಣೀಕಗಳಾಗುತ್ತವೆ.

ಮಾದರಿ ಏಳು ಬೇಲಿಯಾಚೆ ಕೀಳಾಗಿ ಹುಟ್ಟಿದವನು. ಅವನ ವಿರೋಧಿ ಎಲ್ಲ ದೇವಮಾನವರನ್ನು ದಮನ ಮಾಡುತ್ತಿರುವ ಶ್ರವಣ. ಅವನು ನೆಲದೇವತೆಯನ್ನು ಕೆಡಿಸಲು ಹೊರಡುವನು. ಯುದ್ಧ ಶಾಂತಿ ಎರಡನ್ನೂ ತನ್ನ ದಬ್ಬಾಳಿಕೆಯ ಅಸ್ತ್ರವನ್ನಾಗಿಸಿಕೊಂಡವನು. ಇಂತಹವನನ್ನು ಮಾದರಿ ಮುಗಿಸುವುದು ತುಳಿತಕ್ಕೊಳಗಾದ ಎಲ್ಲಾ ಜನಗಳ ರಕ್ತ, ಬೆವರುಗಳ ಸಾಕಾರ ರೂಪವಾಗಿರುವ ಉರಿಚಮ್ಮಾಳಿಗೆಯಿಂದ. ಮೇಲುನೋಟಕ್ಕೆ ಧಾರ್ಮಿಕ ಭ್ರಮೆ ಹುಟ್ಟಿಸಿದರೂ, ಆಂತರ್ಯದಲ್ಲಿ ರಾಜಕೀಯ ಹಾಗೂ ಸಾಂಸ್ಕೃತಿಕ ಅರ್ಥ ಸಾಧ್ಯತೆಗಳಿಂದ ಇಂದಿನ ಕನ್ನಡಿಯಾಗಿದೆ.

ಈ ನಾಟಕವನ್ನು ಕನ್ನಡ ರಂಗಭೂಮಿಯಲ್ಲಿ 17 ವರ್ಷಗಳಿಂದ ಸಕ್ರಿಯರಾಗಿರುವ ಸಂಪತ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಅಭಿನಯ ತರಂಗದ ವಿದ್ಯಾರ್ಥಿಯಾಗಿದ್ದ ಇವರು ಪ್ರಸ್ತುತ ಸಿನಿಮಾ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಕಿರಗೂರಿನ ಗಯ್ಯಾಳಿಗಳು, ಪಟಾಕಿ, ಕೆಜಿಎಫ್ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಪುರಹರ ನಾಟಕಕ್ಕೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 5 ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿದ್ದು. ಬೀದಿ ಬಿಂಬ ರಂಗದ ತುಂಬಾ ಮತ್ತು ನನ್ನ ಕಥೆ ನಾಟಕಗಳು ಪ್ರಯೋಗಾತ್ಮಕ ಮತ್ತು ಸಮಾಜದ ಕನ್ನಡಿಗಳಾಗಿವೆ. ಅಷ್ಟೆ ಅಲ್ಲದೆ ಇತರ ಅತ್ಯುತ್ತಮ ನಾಟಕಗಳನ್ನು ಆಹ್ವಾನಿಸಿ ಆ ತಂಡಗಳಿಗೂ ಬೆಂಗಳೂರಿನಲ್ಲಿ ನಾಟಕ ಮಾಡಲು ಪ್ರೋತ್ಸಾಹ ನೀಡುತ್ತಾ ಬಂದಿದೆ. ಅದರಲ್ಲಿ ಹಾವೇರಿಯ 'ವಾಲಿ ವಧೆ', ನೀನಾಸಂನ 'ಕುರುಕ್ಷೇತ್ರ' ಮತ್ತು ಮನೋರಂಗದ 'ಕರ್ಣ ರಸಾಯನ' ನಾಟಕಗಳು ಸೇರಿವೆ. ಕನ್ನಡ ಪರವಾಗಿ ಏನಿವಾಗ, ಪಾರ್ಶ್ವವಾಯು ಮತ್ತು ಮೂರ್ಛೆ ರೋಗದ ಅರಿವು ಮೂಡಿಸುವ ಹಲವು ಬೀದಿನಾಟಕ ಪ್ರದರ್ಶನಗಳನ್ನು ತಂಡ ಪ್ರದರ್ಶಿಸಿದೆ. 

ಮಾದಾರಿ ಮಾದಯ್ಯ ನಾಟಕ: ನಿರ್ದೇಶನ–ಸಂಪತ್ ಕುಮಾರ್, ರಚನೆ–ಎಚ್.ಎಸ್.ಶಿವಪ್ರಕಾಶ್, ಸಂಗೀತ–ಚಂದ್ರಶೇಖರಾಚಾರ್, ಆಯೋಜನೆ– ಅಶ್ವಘೋಷ ಥಿಯೇಟರ್ ಟ್ರಸ್ಟ್, ಸ್ಥಳ–ರಂಗಶಂಕರ್, ಜೆ.ಪಿ. ನಗರ, ಸಂಜೆ 7.30,
ಟಿಕೆಟ್–ಬುಕ್‌ಮೈ ಶೋ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.