ಶನಿವಾರ, ಸೆಪ್ಟೆಂಬರ್ 18, 2021
28 °C
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕೈದಿ ವಶಕ್ಕೆ: ಹೈದರಾಬಾದ್‌ನ ಪ್ರಯೋಗಾಲಯದ ಮೇಲೆ ಎನ್‌ಸಿಬಿ ದಾಳಿ

ಮತ್ತೆ ₹ 25 ಕೋಟಿ ಮೌಲ್ಯದ ಕೆಟಮಿನ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಂಗೇರಿಯಲ್ಲಿ ಇತ್ತೀಚೆಗಷ್ಟೇ ₹ 30 ಕೋಟಿ ಮೌಲ್ಯದ ಮಾದಕ ವಸ್ತು ‘ಕೆಟಮಿನ್’ ಜಪ್ತಿ ಮಾಡಿದ್ದ ಎನ್‌ಸಿಬಿ ಅಧಿಕಾರಿಗಳು, ಪ್ರಕರಣದ ಆರೋಪಿಗಳು ನೀಡಿದ ಸುಳಿವಿನಿಂದ ಹೈದರಾಬಾದ್‌ನಲ್ಲಿ ಮತ್ತೆ ₹ 25 ಕೋಟಿ ಮೌಲ್ಯದ ಕೆಟಮಿನ್ ಜಪ್ತಿ ಮಾಡಿದ್ದಾರೆ.

‘ನಚಾರಾಂ ಕೈಗಾರಿಕೆ ಪ್ರದೇಶದಲ್ಲಿರುವ ‘ಇನ್‌ಕೆಮ್’ ಎಂಬ ಪ್ರಯೋಗಾಲಯದಲ್ಲಿ ಕೆಟಮಿನ್ ತಯಾರಿಸಲಾಗುತ್ತಿತ್ತು. ಪ್ರಯೊಗಾಲಯಕ್ಕೆ ದಾಳಿ ನಡೆಸಿ, ‘ಕೆಟಮಿನ್’ ಹಾಗೂ ಅದರ ತಯಾರಿಗೆ ಬಳಸುತ್ತಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆಂಗೇರಿಯ ಘಟಕವೊಂದರ ಮೇಲೆ ಏಪ್ರಿಲ್ 30ರಂದು ದಾಳಿ ಮಾಡಲಾಗಿತ್ತು. ಸ್ಥಳೀಯ ನಿವಾಸಿ ಶಿವರಾಜ್ ಅರಸ್ (36) ಹಾಗೂ ಚೆನ್ನೈನ ಜೆ. ಕಣ್ಣನ್ (31) ಎಂಬುವರನ್ನು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೈದಿ ಪಿ.ವೆಂಕಟೇಶ್ವರಲು, ಇಲ್ಲಿದ್ದುಕೊಂಡೇ ನಚಾರಾಂನಲ್ಲಿ ನಡೆಸುತ್ತಿರುವ ಪ್ರಯೋಗಾಲಯದಲ್ಲಿ ಕೆಟಮಿನ್ ತಯಾರಿಸುವ ಕುರಿತು ಆರೋಪಿಗಳು ಮಾಹಿತಿ ನೀಡಿದ್ದರು’ ಎಂದು ವಿವರಿಸಿದರು.

‘‌2009ರಲ್ಲಿ ಮಾದಕ ವಸ್ತು ಸಾಗಣೆ ವೇಳೆ ಕೇಂದ್ರ ಕಂದಾಯ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ ವೆಂಕಟೇಶ್ವರಲು ಜೈಲು ಪಾಲಾಗಿದ್ದ. ಜೈಲಿನಲ್ಲಿರುವ ಆತನನ್ನು ವಾರಂಟ್ ಮೇಲೆ ವಶಕ್ಕೆ ಪಡೆದು, ನಚಾರಾಂಗೆ ಕರೆದೊಯ್ದೆವು. ಆತನ ಸಮ್ಮುಖದಲ್ಲೇ ಪ್ರಯೋಗಾಲಯದ ಮೇಲೆ ದಾಳಿ ನಡೆಸಿದೆವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನ್ಯಾಯಾಲಯಕ್ಕೆ ಆತನನ್ನು ಬುಧವಾರ ಹಾಜರುಪಡಿಸಲಾಗುವುದು’ ಎಂದರು.

‘ಪ್ರಯೋಗಾಲಯದಲ್ಲಿ ಎಂಟು ಮಂದಿ ಕಾಯಂ ನೌಕರರಿದ್ದರು. 17 ಕೆಲಸಗಾರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು. ಕರೆದಾಗ ವಿಚಾರಣೆಗೆ ಬರುವಂತೆ ಹೇಳಿ, ಕೆಲಸಗಾರರನ್ನು ಬಿಟ್ಟು ಕಳುಹಿಸಲಾಗಿದೆ’ ಎಂದು ಅಧಿಕಾರಿ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು