ಮಂಗಳವಾರ, ಮಾರ್ಚ್ 31, 2020
19 °C
ರಾಜಧಾನಿಯಲ್ಲಿ ವಿವಿಧ ಸಂಘ–ಸಂಸ್ಥೆಗಳಿಂದ ವಿಶ್ವ ಪರಿಸರ ದಿನ ಆಚರಣೆ

ಹಸಿರು ಕಳಕಳಿ: ನಗರದಲ್ಲಿ ಮೊಳಗಿದ ಕಹಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗ ವಾಗಿ ನಗರದ ವಿವಿಧೆಡೆ ಸಸಿ ನೆಡುವ ಮತ್ತು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆದವು.

ವಿವಿಧ ಸಂಘ–ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಸಂಸ್ಥೆಗಳು ಹಸಿರು ಕಾಳಜಿ ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿದವು. ಕೆಲವರು ಬೈಸಿಕಲ್ ಜಾಥಾ, ಕಾಲ್ನಡಿಗೆ ಜಾಥಾಗಳ ಮೂಲಕ ಗಿಡ ಮರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದರು.

ಜಲಮಂಡಳಿ ಹಾಗೂ ನೌಕರರ ಸಂಘದ ಆಶ್ರಯದಲ್ಲಿ ಮಲ್ಲೇಶ್ವರದ ಸಿಜೆಎಫ್‌ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಗಿಡ ನೆಟ್ಟರು. ಮುಖ್ಯ ಎಂಜಿನಿಯರ್‌ ಬಿ.ಸಿ.ಗಂಗಾಧರ್‌, ನೌಕರರ ಸಂಘದ ಅಧ್ಯಕ್ಷ ರುದ್ರೇಗೌಡ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ಅದಮ್ಯ ಚೇತನ: ಅದಮ್ಯ ಚೇತನ ಸಂಸ್ಥೆ ವತಿಯಿಂದ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಿಂದ ಜಯನಗರದವರೆಗೆ ಆಯೋಜಿಸಿದ್ದ ಜನ ಜಾಗೃತಿ ಜಾಥಾಕ್ಕೆ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್ ಚಾಲನೆ ನೀಡಿದರು.

‘ಕಣ್ಣಿಗೆ ಕಾಣದ ಹಾನಿಕಾರಕ ಮೈಕ್ರೊ ಪ್ಲಾಸ್ಟಿಕ್‌ನಿಂದ ಜನರ ಆರೋಗ್ಯ ಹಾಗೂ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ’ ಎಂದು ತೇಜಸ್ವಿನಿ ಹೇಳಿದರು.

‘ನಾವು ಸುರಕ್ಷಿತ ಎಂದು ಪರಿಭಾವಿಸಿ ಕುಡಿಯುವ ಖನಿಜಯುಕ್ತ ನೀರೂ ಕೂಡಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಆಘಾತಕಾರಿ ಅಂಶವನ್ನು ವಿಶ್ವಸಂಸ್ಥೆಯ ವರಿದಗಳು ಬಹಿರಂಗಪಡಿಸಿವೆ. ಪ್ಲಾಸ್ಟಿಕ್ ಬದಲು ಸ್ಟೀಲ್ ವಸ್ತುಗಳನ್ನು ಬಳಸಬೇಕು. ಇಂತಹ ಅಂಶಗಳನ್ನು ಜನರಿಗೆ ತಿಳಿಸಬೇಕಾಗಿದೆ’ ಎಂದರು.

ಶಿಲ್ಪಾ ಫೌಂಡೇಷನ್: ನಿತ್ಯ 85 ಲಕ್ಷಕ್ಕೂ ಅಧಿಕ ವಾಹನಗಳ ಸಂಚಾರದಿಂದ ನಗರದಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿದರು.

ಶಿಲ್ಪಾ ಫೌಂಡೇಷನ್ ವಿಕ್ಟೋರಿಯಾ ಲೇಔಟ್‌‌ನ ಸರ್ಕಾರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು. 

ಸಮನ್ವಯ ಸಮಿತಿ: ಜಯನಗರದ ಸಮನ್ವಯ ವೇದಿಕೆಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು. ವೇದಿಕೆ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅವರ 72ನೇ ಜನ್ಮದಿನದ ಪ್ರಯುಕ್ತ 72 ಕಡೆ ಗಿಡಗಳನ್ನು ನೆಡಲಾಯಿತು.

ಬನ್ನೇರುಘಟ್ಟ: ಬನ್ನೇರುಘಟ್ಟ ಉದ್ಯಾನದಲ್ಲಿ ನಡೆದ ಪರಿಸರ ದಿನ ಕಾರ್ಯಕ್ರಮದಲ್ಲಿ 250 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳು ಜಾಥಾ ಮೂಲಕ ಜಾಗೃತಿ ಮೂಡಿಸಿದರು. ಬಳಿಕ ಸಸಿಗಳನ್ನು ನೆಟ್ಟರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಶಂಕಿನ
ಮಠ, ವಲಯ ಅರಣ್ಯಾಧಿಕಾರಿ ಗಣೇಶ್, ಸ್ಥಳೀಯ ಮುಖಂಡ ಟಿ. ನಾರಾಯಣ, ಉಮಾಶಂಕರ್ ಭಾಗವಹಿಸಿದ್ದರು.

ಹೆಸರುಘಟ್ಟ ಮುಖ್ಯರಸ್ತೆಯ ದುರ್ಗಾನಿವಾಸ ಅಪಾರ್ಟ್‌ಮೆಂಟ್‌ ಸಮುಚ್ಚಯದ ಆವರಣದಲ್ಲಿ ಪರಿಸರ ದಿನ ಆಚರಿಸಲಾಯಿತು. ಸಮಿತಿ ಅಧ್ಯಕ್ಷ ಟಿ.ಗುರುರಾಜಾಚಾರ್ ಜಹಾಗೀರ್‌ದಾರ್‌, ಪದಾಧಿಕಾರಿಗಳಾದ ಶಿವರಾಮ್, ಎಸ್.ಕೆ. ಸಿಂಗ್, ಹರಿಕೃಷ್ಣ, ಶಿವಾನಂದ ತಳವರ್ ಪಾಲ್ಗೊಂಡಿದ್ದರು.

ಉಲ್ಲಾಳು ವಾರ್ಡ್‌ನ ಜ್ಞಾನಭಾರತಿ ಬಡಾವಣೆಯಲ್ಲಿ ಪಾಲಿಕೆ ಸದಸ್ಯೆ ಶಾರದಾ ಮುನಿರಾಜ್, ಬಿಜೆಪಿ ಯುವ ಮುಖಂಡ ಸತೀಶ್, ಡಾ.ರವಿಶಂಕರ್ ಪ್ರಸಾದ್, ಜಯರಾಂ, ಶಶಿಕುಮಾರ್ ಭಾಗವಹಿಸಿದ್ದರು.

ಲಾಲ್‌ಬಾಗ್‌ಲ್ಲಿ 500 ಹಣ್ಣಿನ ಸಸಿ ನಾಟಿ

ಹಣ್ಣು ಬಿಡುವ 175 ತಳಿಗಳ 500ಕ್ಕೂ ಹೆಚ್ಚು ಸಸಿಗಳನ್ನು ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ನೆಡಲಾಯಿತು. ಈ ಸಸ್ಯಗಳು ವರ್ಷದ ವಿವಿಧ ಅವಧಿಗಳಲ್ಲಿ ಹಣ್ಣು ಬಿಡಲಿವೆ.

‘ಸಸ್ಯತೋಟದ ಎಕನಾಮಿಕ್ ಗಾರ್ಡನ್‌ನಲ್ಲಿ ಸದ್ಯ 43 ಜಾತಿಯ 85 ಬಹುವಾರ್ಷಿಕ ಹಣ್ಣಿನ ಮರಗಳಿವೆ. ಕೆಲವು ಮರಗಳು ಕೀಟ ಬಾಧೆಯಿಂದ ಹಾಗೂ ಗಾಳಿ ಮಳೆಯ ವೇಳೆ ನಶಿಸಿ ಹೋಗಿವೆ. ಅವುಗಳ ಮರುನಾಟಿ ಜತೆಗೆ ದೇಶ–ವಿದೇಶಗಳಿಂದ ಹಲವು ಹೊಸ ಬಗೆಯ ತಳಿಗಳನ್ನು ತರಿಸಿ ನೆಟ್ಟಿದ್ದೇವೆ’ ಎಂದು ಲಾಲ್‌ಬಾಗ್‌ ಸಸ್ಯತೋಟದ ಉಪನಿರ್ದೇಶಕ ಎಂ.ಆರ್. ಚಂದ್ರಶೇಖರ್ ತಿಳಿಸಿದರು.

ವಿಮಾನ ನಿಲ್ದಾಣದಲ್ಲಿ 7,095 ಮರ ಸ್ಥಳಾಂತರ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತರಣೆ ಜಾಗದಲ್ಲಿರುವ 7,095 ಮರಗಳನ್ನು ಸುರಕ್ಷಿತವಾಗಿ ವಿಮಾನ ನಿಲ್ದಾಣದ ಆವರಣಕ್ಕೆ ಸ್ಥಳಾಂತರಿಸುವ ಕಾರ್ಯಕ್ಕೆ ಬೆಂಗಳೂರು ಇಂಟರ್‌ ನ್ಯಾಷನಲ್ ಏರ್‌ಪೋರ್ಟ್‌ ಲಿಮಿಟೆಡ್‌ (ಬಿಐಎಎಲ್) ಚಾಲನೆ ನೀಡಿದೆ.

ಮೊದಲ ಹಂತದಲ್ಲಿ 2,285 ಮರಗಳನ್ನು ಸ್ಥಳಾಂತರ ಮಾಡಲಾಗುವುದು. ಉಳಿದವುಗಳನ್ನು ಎರಡು ವರ್ಷಗಳ ಅವಧಿಯಲ್ಲಿ ಸ್ಥಳಾಂತರಿಸಲಾಗುವುದು ಎಂದು  ಬಿಐಎಎಲ್‍ನ ಮುಖ್ಯ ಯೋಜನಾಧಿಕಾರಿ ಟಾಮ್ ಶಿಮಿನ್ ಹೇಳಿದರು.

₹13 ಸಾವಿರ ಕೋಟಿ ಅಂದಾಜು ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಈ ಭಾಗದಲ್ಲಿ 7,095 ಮರಗಳಿವೆ. ಅವುಗಳನ್ನು ವೋಲ್ವೊ ಟ್ರೀ-ಟ್ರಾನ್ಸ್‌ಪ್ಲಾಂಟರ್ ಬಳಸಿ ಸ್ಥಳಾಂತರ ಮಾಡಲಾಗುತ್ತಿದೆ. ಈ ಯಂತ್ರ ಪ್ರತಿದಿನ ಸುಮಾರು 17 ದೊಡ್ಡ ಮರಗಳನ್ನು ಸ್ಥಳಾಂತರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರು.

‘ವಿಮಾನ ನಿಲ್ದಾಣದ ರನ್‌ ವೇ ಸುತ್ತಲ ಪ್ರದೇಶದ ಹಸಿರೀಕರಣ ಕಾರ್ಯ ನಡೆಯುತ್ತಿದೆ. ಹಸಿರು ಕಾರಿಡಾರ್‌ ಹೊಂದಿರುವ ಭಾರತದ ಪ್ರಥಮ ಮತ್ತು ಜಗತ್ತಿನ 3ನೇ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆ 18 ತಿಂಗಳುಗಳಲ್ಲಿ ನಮ್ಮದಾಗಲಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು