ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬರದ ತುಂಬಾ ಉಕ್ಕಿನ ಹಕ್ಕಿಗಳ ಕಾರುಬಾರು

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಗಮನ ಸೆಳೆದ ರಫೇಲ್‌, ಫಾಲ್ಕನ್‌
Last Updated 20 ಫೆಬ್ರುವರಿ 2019, 20:33 IST
ಅಕ್ಷರ ಗಾತ್ರ

ಬೆಂಗಳೂರು: ಮಿಂಚಿನ ವೇಗದಲ್ಲಿ ಸಾಗಿ ಬಂದು, ಒಂದೇ ಸಮನೆ ಅಂಬರದ ತುದಿಗೇರಿ ಮರೆಯಾದ ಉಕ್ಕಿನ ಹಕ್ಕಿಗಳು, ಆಗಸದಲ್ಲಿ ಉರುಳಾಡುತ್ತಾ ರುದ್ರ ನರ್ತನ ಮಾಡಿದ ಯುದ್ಧವಿಮಾನಗಳು, ನೀಲಗಗನದಲ್ಲಿ ಚುಕ್ಕಿ ಇಡದೆಯೇ ಧೂಮದ ರಂಗೋಲಿ ಬಿಡಿಸಿದ ಹೆಲಿಕಾಪ್ಟರ್‌ಗಳು...

ಯಲಹಂಕ ವಾಯುನೆಲೆಯ ಪರಿಸರದಲ್ಲೆಲ್ಲಾ ಈಗ ಲೋಹದ ಹಕ್ಕಿಗಳದೇ ಕಾರುಬಾರು. ಏಷ್ಯಾದ ಅತಿದೊಡ್ಡ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನ ಮೇಳ ‘ಏರೋ ಇಂಡಿಯಾ 2019’ಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಅಧಿಕೃತ ಚಾಲನೆ ನೀಡಿದರು.

ಭಾರತೀಯ ವಾಯುಪಡೆಯ ಮೂರು ಎಂಐ –17 ಹೆಲಿಕಾಪ್ಟರ್‌ಗಳು ತ್ರಿವರ್ಣಧ್ವಜವನ್ನು ಹೊತ್ತು ಸಾಗಿ ಬರುವ ಮೂಲಕ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿಗೆ ಮುನ್ನುಡಿ ಬರೆದವು. ಉದ್ಘಾಟನಾ ಸಮಾರಂಭ ಮುಕ್ತಾಯವಾಗುತ್ತಿದ್ದಂತೆಯೇ ಆಗಸದಲ್ಲಿ ಕಣ್ಣಿಗೆ ಹಬ್ಬವೇ ಸೃಷ್ಟಿಯಾಯಿತು.

‘ಸೂರ್ಯಕಿರಣ’ದ ಬೆನ್ನೇರಿ ಹೊರಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ವಿಂಗ್‌ ಕಮಾಂಡರ್‌ ಸಾಹಿಲ್‌ ಗಾಂಧಿ ಅವರಿಗೆ ಆಗಸದಲ್ಲಿ ಕ್ಲಿಷ್ಟಕರ ಸಂಯೋಜನೆಗಳ ಮೂಲಕ ಪೈಲಟ್‌ಗಳು ನಮನ ಸಲ್ಲಿಸಿದರು.

ಸುಖೋಯ್‌– 30 ಎಂ.ಕೆ.1, ದೇಸೀ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್‌, ಫ್ರಾನ್ಸ್‌ ನಿರ್ಮಿತ ರಫೇಲ್‌ ಹಾಗೂ ಅಮೆರಿಕದ ಎಫ್‌–16 ಫೈಟಿಂಗ್‌ ಫಾಲ್ಕನ್‌ನಂತಹ ಯುದ್ಧವಿಮಾನಗಳ ಗರ್ಜನೆ ವೀಕ್ಷಕರ ಮೈನವಿರೇಳಿಸಿತು.

ಪ್ರದರ್ಶನದಲ್ಲಿ ಪ್ರೇಕ್ಷಕರ ಕಣ್ಣು ನೆಟ್ಟಿದ್ದು ವಿವಾದ ಸೃಷ್ಟಿಸಿರುವ ರಫೇಲ್‌ನತ್ತ. ಶರವೇಗದಲ್ಲಿ ಸಾಗಿ ಬಂದ ಈ ವಿಮಾನ ಸೂರ್ಯನಿಗೇ ಮುತ್ತಿಕ್ಕುತ್ತದೆಯೇನೋ ಎಂಬಂತೆ ಮೇಲಕ್ಕೇರಿತು.

ಅಮೆರಿಕದ ವಾಯುಪಡೆಯ ಫಾಲ್ಕನ್‌ ಯುದ್ಧ ವಿಮಾನ ರಣಹದ್ದಿನಂತೆ ಮೆರೆದಾಡಿತು. ಕಿವಿ
ಗಡಚಿಕ್ಕುವಂತೆ ಸದ್ದು ಮೊಳಗಿಸುತ್ತಾ ಆಗಸದಲ್ಲಿ ಉರುಳು ಸೇವೆ ಮಾಡುತ್ತಾ ಹಾರಾಡಿದ ಈ ವಿಮಾನ ಪ್ರೇಕ್ಷಕರ ಎದೆ ಢವಗುಟ್ಟುವಂತೆ ಮಾಡಿತು.

ಎಚ್‌ಎಎಲ್‌ ನಿರ್ಮಿತ ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ (ಎಎಲ್‌ಎಚ್‌) ಎಂ.ಕೆ.–3 ಧ್ರುವ ಹಾಗೂ ಎಎಲ್‌ಎಚ್‌– ಎಂ.ಕೆ.4 ರುದ್ರ ಲಘು ಯುದ್ಧ ಹೆಲಿಕಾಪ್ಟರ್‌ (ಎಲ್‌ಸಿಎಚ್‌), ವಾಯು ಮುನ್ಸೂಚನೆ ಮತ್ತು ನಿಯಂತ್ರಣಾವ್ಯವಸ್ಥೆ ಅಳವಡಿಸಿದ ನೇತ್ರಾ, ಯುದ್ಧಕೌಶಲ ಅಳವಡಿಸಿದ ಪಿ–81 ವಿಮಾನಗಳು ಭಾರತೀಯ ವಾಯುಸೇನೆಯ ಶಕ್ತಿ ಪ್ರದರ್ಶಿಸಿದವು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT