ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇವಲ ಎಕ್ಸಿಟ್‌; ಎಕ್ಸಾಕ್ಟ್‌ ಸಮೀಕ್ಷೆ ಅಲ್ಲ’

Last Updated 20 ಮೇ 2019, 20:24 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಇನ್ನೂ ಅಲೆ ಇದೆ ಎಂಬ ಭಾವನೆ ಮೂಡಿಸುವ ಯತ್ನವಷ್ಟೆ. ಮತ ಯಂತ್ರಗಳನ್ನು (ಇವಿಎಂ) ತಿರುಚುವ ಹುನ್ನಾರ’ ಎಂದು ‘ಮೈತ್ರಿ’ (ಜೆಡಿಎಸ್‌–ಕಾಂಗ್ರೆಸ್‌) ನಾಯಕರು ಕಿಡಿಕಾರಿದ್ದಾರೆ.

‘ಕರ್ನಾಟಕದಲ್ಲಿ ಬಿಜೆಪಿ 18 ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ವರದಿ ನಂಬಲು ಸಾಧ್ಯವೇ? ಸಮೀಕ್ಷಾ ವರದಿಗಳು ತಪ್ಪು ಹೇಳಿವೆ. ಮೈತ್ರಿಕೂಟವೇ ಹೆಚ್ಚು ಸ್ಥಾನ ಗಳಿಸಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದೂ ಈ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ‘ಇದೊಂದು ಕೇವಲ ಎಕ್ಸಿಟ್‌ (ಮತಗಟ್ಟೆ) ಸಮೀಕ್ಷೆ. ಎಕ್ಸಾಕ್ಟ್‌ (ನಿಖರ) ಸಮೀಕ್ಷೆ ಅಲ್ಲ’ ಎಂದು ಗೇಲಿ ಮಾಡಿದ್ದಾರೆ.

‘ಒಂದು ನಿರ್ದಿಷ್ಟ ಪಕ್ಷ ಮತ್ತು ನಾಯಕನ ಪರವಾಗಿ ಅಲೆ ಎಂದು ತಪ್ಪು ಭಾವನೆ ಸೃಷ್ಟಿಸಲು ಮತಗಟ್ಟೆ ಸಮೀಕ್ಷೆಗಳ ಮೂಲಕ ಯತ್ನಿಸಲಾಗಿದೆ. ಇದೇ 23ರಂದು ಮತ ಎಣಿಕೆ ನಡೆಯಲಿದ್ದು, ಬಹುಮತಕ್ಕೆ ಕೊರತೆ ಉಂಟಾದರೆ ಎಂಬ ಕಾರಣಕ್ಕೆ ಮೊದಲೇ ಪ್ರಾದೇಶಿಕ ಪಕ್ಷಗಳನ್ನು ಓಲೈಸುವ ಉದ್ದೇಶದಿಂದ ಮೋದಿ ಅಲೆಯಿದೆ ಎಂಬ ಭಾವನೆಯನ್ನು ಕೃತಕವಾಗಿ ಸೃಷ್ಟಿಸಲಾಗಿದೆ’ ಎಂದೂ ಅವರು ದೂರಿದ್ದಾರೆ.

‘ಮೋದಿ ಆಡಳಿತಾವಧಿಯಲ್ಲಿ ಎಲ್ಲ ವಿರೋಧ ಪಕ್ಷಗಳು ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಸಂದೇಹ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ಇವಿಎಂ ದುರ್ಬಳಕೆಗೆ ಅವಕಾಶವಿರುವುದರಿಂದ, ಅದನ್ನು ಕೈಬಿಟ್ಟು ಸಾಂಪ್ರದಾಯಿವಾಗಿ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸುವಂತೆ ಎಲ್ಲ ಪಕ್ಷಗಳು ಸುಪ್ರೀಂ ಕೋರ್ಟ್‌ ಕದ ತಟ್ಟಿವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೆನಪಿಸಿದ್ದಾರೆ.

‘ಮತಯಂತ್ರ ಬೇಡ. ಮತ ಪತ್ರ ವ್ಯವಸ್ಥೆ ಮತ್ತೆ ಜಾರಿಗೆ ತರುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇವಿಎಂ ಹ್ಯಾಕ್ ಮಾಡುವ ಸಾಧ್ಯತೆಯನ್ನೂ ನೋಡಿದ್ದೇವೆ.‌ ಸಮೀಕ್ಷೆಗಳನ್ನು ನೋಡಿದಾಗ ಆ ಅನುಮಾನ ಮೂಡಿದೆ’ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ತಮ್ಮ ಪರ ಫಲಿತಾಂಶ ಬರುವಂತೆ ಬಿಜೆಪಿಯವರೇ ಹೇಳಿ ಮಾಡಿಸಿದಂತಿದೆ ಸಮೀಕ್ಷಾ ವರದಿಗಳು. ಆದರೆ, ವಸ್ತುಸ್ಥಿತಿಯಲ್ಲಿ ಬಿಜೆಪಿ ಸೋಲಲಿದೆ’ ಎಂದರು.

‘ಈ ಸಮೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ಎಷ್ಟೋ ಮತಗಟ್ಟೆ ಸಮೀಕ್ಷೆಗಳು ನಿಜ ಆಗಿಲ್ಲ. ಇತ್ತೀಚೆಗೆ ಆಸ್ಟ್ರೇಲಿಯದಲ್ಲೂ ಯಾವುದೇ ಮತ ಸಮೀಕ್ಷೆಗಳು ನಿಜ ಹೇಳಲಿಲ್ಲ. ಹಾಗೆಂದು, ಈ ಸಮೀಕ್ಷೆಗಳು ತಪ್ಪು ಅಥವಾ ಸುಳ್ಳು ಎಂದು ಹೇಳಲ್ಲ. ಆದರೆ, ನಾನು‌ ಒಪ್ಪಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

‘ಮೇ 23ರವರೆಗೆ ಕಾದು ನೋಡೋಣ. ಅಂದು ನಿಜವಾದ ಸಮೀಕ್ಷೆ ಬರುತ್ತದೆ. ನಮಗೆ ರಾಜ್ಯ, ದೇಶದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT