ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ಅಧಿಕಾರಿಗಳ ವಸೂಲಿ ಗೊತ್ತಿದೆ: ಎಚ್‌.ಡಿ.ಕುಮಾರಸ್ವಾಮಿ

ಸಿಆರ್‌ಪಿಎಫ್‌ ಬಳಕೆಗೆ ಆಕ್ಷೇಪ: ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
Last Updated 28 ಮಾರ್ಚ್ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ಐ.ಟಿ ಅಧಿಕಾರಿಗಳು ಯಾರ ಯಾರ ಬಳಿ ಎಷ್ಟು ವಸೂಲಿ ಮಾಡ್ತಾರೆ? ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಂಬುದೆಲ್ಲ ನಮಗೆ ಗೊತ್ತಿದೆ. ಇದರ ನಿರ್ದೇಶಕ ಪ್ರಾಮಾಣಿಕ ಅಧಿಕಾರಿಯಾ? ಮುಂಬೈನಲ್ಲಿ ಅಕ್ರಮವಾಗಿ ಫ್ಲಾಟ್ ಖರೀದಿಸಿರುವುದನ್ನೂ ನಾವು ಬಲ್ಲೆವು’ ಎಂದುಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಐ.ಟಿ. ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಐ.ಟಿ ಅಧಿಕಾರಿಗಳು ಸಾಮಾನ್ಯವಾಗಿ ದಾಳಿ ಮಾಡುವ ವೇಳೆ ಸ್ಥಳೀಯ ಪೊಲೀಸರ ನೆರವು ಪಡೆಯುತ್ತಾರೆ. ಆದರೆ, ಇಲ್ಲಿ ಸಿಆರ್‌ಪಿಎಫ್ ಪೊಲೀಸರನ್ನು ದಾಳಿಗೆ ಬಳಸಿಕೊಳ್ಳಲಾಗಿದೆ. ದಾಳಿ ರಾಜಕೀಯ ಪ್ರೇರಿತ ಎನ್ನುವುದು ಇದರಿಂದಲೇ ತಿಳಿಯುತ್ತದೆ. ಇದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ವಿಶ್ವಾಸ ಹಾಗೂ ನಂಬಿಕೆಯಿಂದ ಕೆಲಸ ಮಾಡಬೇಕು. ಆದರೆ,ನೀವು (ಬಿಜೆಪಿ) ಹೊರಟಿರುವ ಮಾರ್ಗ ನೋಡಿದರೆ ಸಂಘರ್ಷ ಮಾಡುವ ವೇದಿಕೆ ಸೃಷ್ಟಿಸುವಂತೆ ಕಾಣುತ್ತಿದೆ. ದೇಶದ ಒಕ್ಕೂಟ ವ್ಯವಸ್ಥೆಯನ್ನೇ ನೀವು ಛಿದ್ರ ಮಾಡುತ್ತಿದ್ದೀರಿ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೇಂದ್ರದ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗುತ್ತದೆ’ ಎಂದು ಕಿಡಿಕಾರಿದರು.

‘ಈ ಐ.ಟಿ ದಾಳಿಯಿಂದ ನಾನೇನು ಭಯ ಬೀಳಲ್ಲ. ವಿರೋಧ ಪಕ್ಷಗಳನ್ನು ಸೋಲಿಸುವುದಕ್ಕೆ ಬಿಜೆಪಿ ಇಂಥ ಕೀಳುಮಟ್ಟದ ರಾಜಕಾರಣ ನಡೆಸುತ್ತಿದೆ.ಮೈತ್ರಿ ಸರ್ಕಾರ ರಚನೆಯಾದ ನಂತರ ದೇಶದಲ್ಲಿ ಬದಲಾವಣೆಯ ವಾತಾವರಣ ನಿರ್ಮಾಣವಾಗಿದೆ. ಕರ್ನಾಟಕದಿಂದಲೇ ಬಿಜೆಪಿಯ ಪತನವೂ ಶುರುವಾಗಲಿದೆ’ ಎಂದರು.

ಕೇಂದ್ರ ಸರ್ಕಾರದ ಏಜೆಂಟರಾಗಬೇಡಿ: ‘ಜೆಡಿಎಸ್‌ ಹಾಗೂ ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ದಾಳಿ ನಡೆಸುವಂತೆಬಿಜೆಪಿ ಮುಖಂಡನೇ ಪಟ್ಟಿಯೊಂದನ್ನು ಐ.ಟಿ ಕಚೇರಿಗೆ ತಂದು ಕೊಟ್ಟಿದ್ದಾನೆ. ಅದರಂತೆ ಅಧಿಕಾರಿಗಳು ದಾಳಿ ಶುರುವಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ನಮ್ಮದೇನು ಅಭ್ಯಂತರವಿಲ್ಲ. ಆದರೆ, ಕೇಂದ್ರ ಸರ್ಕಾರದ ಏಜೆಂಟರಾಗಿ ಕೆಲಸ ಮಾಡಬೇಡಿ’ ಎಂದು ಕಿಡಿಕಾರಿದರು.

‘ಸಾಗರದ ಹೊಸನಗರದಲ್ಲಿ ₹2 ಕೋಟಿ ಜಪ್ತಿ ಆಗಿದ್ದು, ಆ ಹಣವನ್ನು ಐ.ಟಿಗೆ ಒಪ್ಪಿಸಲಾಗಿತ್ತು. ಆ ದುಡ್ಡು ಯಾರದ್ದು? ಅದರ ತನಿಖೆ ಏನಾಯಿತು?, ವಿಧಾನಸೌಧದ ಮುಂಭಾಗದಲ್ಲಿ ಕೋಟ್ಯಂತರ ರೂಪಾಯಿ ಹೋಯಿತಲ್ಲ. ಅದರ ತನಿಖೆ ಏನಾಯಿತು ಎಂಬುದನ್ನು ಐ.ಟಿಯವರೇ ಹೇಳಬೇಕು’ ಎಂದು ಒತ್ತಾಯಿಸಿದರು.

‘ಬಾತ್‌ರೂಮ್‌ನಲ್ಲಿ ಇದ್ದವರಿಗೂ ಆತಂಕ’

‘ಬುಧವಾರ ರಾತ್ರಿ11.45ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಸಂದೇಶ ಕೊಡಲಿದ್ದಾರೆ ಎಂದು ಸುದ್ದಿ ವಾಹಿನಿಗಳೆಲ್ಲವೂ ಬ್ರೇಕಿಂಗ್‌ ನ್ಯೂಸ್‌ ಕೊಟ್ಟವು. ಕಚೇರಿಯಲ್ಲಿರುವವರಿಗೂ ಆತಂಕ, ಮನೆಯಲ್ಲಿರುವವರಿಗೂ ಆತಂಕ, ಬಾತ್‌ರೂಮ್‌ನಲ್ಲಿ ಇರುವವರಿಗೂ ಆತಂಕ ಶುರುವಾಗಿತ್ತು’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

‘ಯಾವುದೋ ಅವಧಿ ಮುಗಿದ ಉಪಗ್ರಹವನ್ನು ತಾವೇ ನಾಶಪಡಿಸಿದ್ದಾರೆ ಎಂಬಂತೆ ಪ್ರಧಾನಿ ಹೇಳಿದರು. ವಿಜ್ಞಾನಿಗಳು ಕಷ್ಟಪಟ್ಟು ಮಾಡಿದ್ದನ್ನು ತಮ್ಮ ಪ್ರಚಾರಕ್ಕೆ ಬಳಸಿಕೊಂಡರು. ಇಂಥ ಸಣ್ಣತನದ ರಾಜಕಾರಣದಿಂದ ಇನ್ನೊಮ್ಮೆ ಅಧಿಕಾರಕ್ಕೆ ಬರಲು ಹೊರಟಿದ್ದಾರೆ. ಅದು ಅಸಾಧ್ಯ’ ಎಂದು ಹೇಳಿದರು.

‘ಕಾನೂನು, ಸಂವಿಧಾನಕ್ಕೆ ಅಪಚಾರ’

ಐಟಿ ದಾಳಿಯ ಬಗ್ಗೆ ಮುಂಚಿತವಾಗಿಯೇ ಹೇಳುವ ಮೂಲಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಷ್ಟ್ರದ ಕಾನೂನು ಹಾಗೂ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಟೀಕಿಸಿದ್ದಾರೆ.

‘ಐಟಿ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಮೈತ್ರಿ ಕೂಟದ ನಾಯಕರು ತಮ್ಮ ಹಣದ ಮೂಲವನ್ನು ರಕ್ಷಿಸಲು ಹೊರಟಿದ್ದಾರೆ. ಲೋಕಸಭಾ ಚುನಾವಣೆ ವೇಳೆ ಹಂಚಲು ಈ ಹಣ ಸಂಗ್ರಹಿಸಿದ್ದರು ಎಂಬ ಅನುಮಾನ ಇದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಹನ ಸವಾರರಿಗೆ ಸಂಚಾರ ದಟ್ಟಣೆಯ ಸಂಕಟ

ಆದಾಯ ತೆರಿಗೆ ಇಲಾಖೆ ಎದುರು ಪ್ರತಿಭಟನೆ ನಡೆದಿದ್ದರಿಂದ ಮಿನ್ಸ್ಕ್ ಸ್ಕ್ವೇರ್‌ನ ಸುತ್ತಮುತ್ತಲಿನ ರಸ್ತೆಗಳಲ್ಲಿ ದಟ್ಟಣೆ ಉಂಟಾಗಿ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಪ್ರತಿಭಟನಾಕಾರರು ಮಧ್ಯಾಹ್ನದಿಂದ ಸಂಜೆಯವರೆಗೂ ರಸ್ತೆ ಮೇಲೆಯೇ ನಿಂತು ಪ್ರತಿಭಟನೆ ನಡೆಸಿದರು. ರಾಜಭವನ ರಸ್ತೆ, ಕಬ್ಬನ್ ರಸ್ತೆ, ಇನ್ಫೆಂಟ್ರಿ ರಸ್ತೆ, ಅಂಬೇಡ್ಕರ್ ವೀದಿ ಸುತ್ತಮುತ್ತಲ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು.ಪ್ರತಿಭಟನೆ ಮುಗಿದ ಬಳಿಕವೇ ಸಂಚಾರ ಸ್ಥಿತಿ ಯಥಾಸ್ಥಿತಿಗೆ ಮರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT