ಕೆಎಸ್‌ಆರ್‌ಟಿಸಿ ಏಳು ನೌಕರರ ಅಮಾನತು

ಶುಕ್ರವಾರ, ಮೇ 24, 2019
33 °C
ಕಂಪ್ಯೂಟರ್‌ ಖರೀದಿಯಲ್ಲಿ ಅವ್ಯವಹಾರ ಆರೋಪ

ಕೆಎಸ್‌ಆರ್‌ಟಿಸಿ ಏಳು ನೌಕರರ ಅಮಾನತು

Published:
Updated:

ಬೆಂಗಳೂರು: ಯಾವುದೇ ಅನುಮೋದನೆ ಪಡೆಯದೆ ಕಂಪ್ಯೂಟರ್‌ ಮತ್ತು ಪ್ರಿಂಟರ್‌ ಖರೀದಿಸಿದ ಆರೋಪದ ಮೇಲೆ ಕೆಎಸ್‌ಆರ್‌ಟಿಸಿಯ ಕೆಲವು ಅಧಿಕಾರಿಗಳ ಸಹಿತ ಏಳು ಮಂದಿಯನ್ನು ಅಮಾನತು ಮಾಡಲಾಗಿದೆ. 

ನಿಗಮದ ಸರ್ವರ್‌ಗಳ ಬದಲಾವಣೆಗಾಗಿ 125 ಕಂಪ್ಯೂಟರ್‌ಗಳು, ಕಚೇರಿ ಬಳಕೆಗೆಂದು 1,200 ಕಂಪ್ಯೂಟರ್‌, ತರಬೇತಿ ಕೇಂದ್ರಗಳಿಗೆ 75 ಕಂಪ್ಯೂಟರ್‌ ಮತ್ತು 6 ಸರ್ವರ್‌ ಖರೀದಿಗೆ ಈ ಅಧಿಕಾರಿಗಳು ಬೇಡಿಕೆ ಸಲ್ಲಿಸಿದ್ದರು.

ಆದರೆ, ಅದಕ್ಕೆ ಸಂಬಂಧಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗಾಗಲಿ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯನಿರ್ವಾಹಕ ನಿರ್ದೇಶಕರಿಗಾಗಲಿ ತಿಳಿಸಿರಲಿಲ್ಲ. ಯಾವುದೇ ಅನುಮೋದನೆಯೂ ಸಿಕ್ಕಿರಲಿಲ್ಲ. ಎಲ್ಲವೂ ಖರೀದಿ ಉಗ್ರಾಣ ನಿಯಂತ್ರಕರ ಮಟ್ಟದಲ್ಲಿ ಪತ್ರ ವ್ಯವಹಾರ ನಡೆದಿತ್ತು.

ಅಲ್ಲದೆ, ನಿಗಮಕ್ಕೆ ಅಗತ್ಯವಿದ್ದ ನಿರ್ದಿಷ್ಟ ವಿಶೇಷತೆಗಳನ್ನು ಈ ಕಂಪ್ಯೂಟರ್‌ಗಳು ಹೊಂದಿರಲಿಲ್ಲ. ಹಾರ್ಡ್‌ವೇರ್‌ ಸಾಮಗ್ರಿಗಳಲ್ಲಿ ಲೋಪ ಕಂಡು ಬಂದಿತ್ತು. ಹಾಗಿದ್ದರೂ ಈ ಅಧಿಕಾರಿಗಳು ತಪಾಸಣಾ ವರದಿಯಲ್ಲಿ ಎಲ್ಲವೂ ಸರಿ ಇದೆ ಎಂದು ನಮೂದಿಸಿದ್ದರು ಎಂಬುದು ಆಂತರಿಕ ವಿಚಾರಣೆ ವೇಳೆ ಕಂಡುಬಂದಿತ್ತು. ವ್ಯಾಲ್ಯೂ ಪಾಯಿಂಟ್‌ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಈ ಸಾಮಗ್ರಿಗಳನ್ನು ಪೂರೈಸಿತ್ತು. 

ಸಂಸ್ಥೆಯ ಹಿತಾಸಕ್ತಿಯನ್ನು ಬದಿಗೊತ್ತಿ ಅಗತ್ಯವಿಲ್ಲದಿದ್ದರೂ ಸಾಮಗ್ರಿ ಖರೀದಿಸಿರುವುದು, ಗುಣಮಟ್ಟದ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದು, ಸಂಸ್ಥೆಗೆ ಭಾರಿ ಪ್ರಮಾಣದ ನಷ್ಟ ಉಂಟಾಗಲು ಕಾರಣರಾದ ಆರೋಪದ ಮೇಲೆ ಇವರನ್ನು ಅಮಾನತು ಮಾಡಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಆದೇಶದಲ್ಲಿ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !