ಇಲಾಖೆಯ ತಿದ್ದುಪಡಿ ರದ್ದತಿಗೆ ತೀರ್ಮಾನ

7
ಕಡ್ಡಾಯ ವರ್ಗಾವಣೆ: ವಿಧಾನ ಪರಿಷತ್ ಸದಸ್ಯರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ

ಇಲಾಖೆಯ ತಿದ್ದುಪಡಿ ರದ್ದತಿಗೆ ತೀರ್ಮಾನ

Published:
Updated:

ಬೆಂಗಳೂರು: ಕಡ್ಡಾಯ ವರ್ಗಾವಣೆ ಕುರಿತು ತಾತ್ಕಾಲಿಕವಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಮಾಡಿಕೊಂಡಿದ್ದ ಕೆಲ ತಿದ್ದುಪಡಿಗಳನ್ನು ರದ್ದುಪಡಿಸಲು ವಿಧಾನ ಪರಿಷತ್ ಸದಸ್ಯರ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಹಾಗೂ ಶಿಕ್ಷಣ ಸಚಿವ ಎನ್. ಮಹೇಶ್ ಉಪಸ್ಥಿತಿಯಲ್ಲಿ ಶನಿವಾರ ವಿಧಾನಪರಿಷತ್ ಸದಸ್ಯರು, ಶಿಕ್ಷಣ, ಹಣಕಾಸು ಮತ್ತು ಕಾನೂನು ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಯಿತು.

ಉತ್ತರ ಕರ್ನಾಟಕ ಭಾಗದಲ್ಲಿ ‘ಎ’ ಕೇಂದ್ರದಲ್ಲಿ ಹೆಚ್ಚು ಮಕ್ಕಳಿರುವ ಶಾಲೆಗಳಿಗೆ ‘ಸಿ’ ಕೇಂದ್ರದಿಂದ ಯಾವ ಶಿಕ್ಷಕರು ಬರುತ್ತಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಕಡ್ಡಾಯ ವರ್ಗಾವಣೆಯಲ್ಲಿ ಭರ್ತಿಯಾಗದೆ ಉಳಿದ ‘ಡೀಮ್ಡ್‌ ವೆಕೆನ್ಸಿ’ಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕರನ್ನು 2018–19ನೇ ಸಾಲಿಗೆ ಮಾತ್ರ ನಿಯೋಜಿಸಲು ಪದವಿಪೂರ್ವ ಇಲಾಖೆ ನಿರ್ಧರಿಸಿ, ಇದೇ 28ರಂದು ಸುತ್ತೋಲೆಯನ್ನೂ ಹೊರಡಿಸಿತ್ತು. ಹಾಗೇ ಆದೇಶಿಸಲು ನಿಯಮದಲ್ಲಿ ಅವಕಾಶವಿಲ್ಲವೆಂದು ಸಭೆ ಅಭಿಪ್ರಾಯಪಟ್ಟಿದ್ದರಿಂದ ಇಲಾಖೆ ಅದನ್ನು ಶನಿವಾರ (ಸೆ. 1) ಹಿಂಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದರು.

ರಾಜ್ಯದಲ್ಲಿ 1987ರಿಂದ 1994-95ರಲ್ಲಿ ಆರಂಭವಾದ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಆರ್ಥಿಕ ಇಲಾಖೆಯಿಂದ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರಿದ ನಂತರವಷ್ಟೆ ಈ ಕುರಿತು ಆದೇಶ ಹೊರಡಿಸಲು ಸಾಧ್ಯ ಎಂದರು.

‘ತೀರ್ಮಾನವೇನೋ ಆಗಿದೆ. ಆದರೆ, ಯಾವುದೇ ಆದೇಶವಾಗಿಲ್ಲ. ಹೀಗಾಗಿ ಧರಣಿ ಮುಂದುವರೆಸುತ್ತೇವೆ’ ಎಂದು ವೇತನಾನುದಾನಕ್ಕೆ ಒಳಪಟ್ಟ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಒಕ್ಕೂಟದ ಸದಸ್ಯರು ತಿಳಿಸಿದರು. ಸ್ವಾತಂತ್ರ್ಯ ಉದ್ಯಾನವದಲ್ಲಿ 47 ದಿನಗಳಿಂದ ಅಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ.

ಸಚಿವ ಎನ್. ಮಹೇಶ್ ಹಾಗೂ ವಿಧಾನಪರಿಷತ್ ಸದಸ್ಯ ಬೋಜೇಗೌಡ ಪ್ರತಿಭಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಶಿಕ್ಷಕರನ್ನು ಮನವೊಲಿಸುವ ಪ್ರಯತ್ನ ಮಾಡಿದರು.

ವೇತನ ವಿಳಂಬ: ಶಾಲಾ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಉಪನಿರ್ದೇಶಕರು ವೇತನ ವಿಳಂಬ ಮಾಡುತ್ತಿರುವ ಬಗ್ಗೆ ವಿಧಾನಪರಿಷತ್ ಸದಸ್ಯರು ಸಭೆಯಲ್ಲಿ ಅಧಿಕಾರಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ನಿಗದಿ ಮಾಡಿದ ದಿನಾಂಕದೊಳಗೆ ಶಾಲಾ ಶಿಕ್ಷಕರಿಗೆ ವೇತನ ನೀಡಬೇಕು. ಯಾವುದೇ ಕಾರಣಕ್ಕೂ ವೇತನವನ್ನು ಅಧಿಕಾರಿಗಳು ತಮ್ಮ ಖಾತೆಯಲ್ಲಿ ಇಟ್ಟುಕೊಳ್ಳಬಾರದು. ವೇತನ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಥವಾ ಅಧಿಕಾರಿಗಳ ವೇತನದಿಂದ ವಿಳಂಬಕ್ಕೆ ಬಡ್ಡಿ ನೀಡಬೇಕು’ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಸಭೆಯಲ್ಲಿ ಆಗ್ರಹಿಸಿದರು.

ಅನುದಾನ ಪಡೆಯಲು ಖಾಸಗಿ ಶಾಲೆಗಳಿಗೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಮಾನದಂಡ ವಿನಾಯಿತಿ ನೀಡಬೇಕು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ವೇತನ ತಾರತಮ್ಯ ಸರಿಪಡಿಸಿ, 2016ರಲ್ಲಿ ಇಲಾಖೆ ಹೊರಡಿಸಿದ್ದ ಆದೇಶದಂತೆ ವೇತ ನೀಡಬೇಕು, ಶಾಲಾ ಶಿಕ್ಷಕರ ವರ್ಗಾವಣೆ, ಹೊಸ ನೇಮಕಾತಿ, ಹೆಚ್ಚುವರಿ ಶಿಕ್ಷಕರ ನಿಯೋಜನೆ ಇತ್ಯಾದಿ ವಿಚಾರಗಳ ಬಗ್ಗೆಯೂ  ಚರ್ಚೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !