ಶನಿವಾರ, ಮಾರ್ಚ್ 6, 2021
20 °C
ಹಳೆಸೇತುವೆ ಬಳಿ ಸಂಚಾರ ದಟ್ಟಣೆ ನಿವಾರಣೆ

ಶ್ರೀರಾಂಪುರದಿಂದ ಮಲ್ಲೇಶ್ವರಕ್ಕೆ ಸಂಪರ್ಕ: ದಶಕದ ಬಳಿಕ ಪೂರ್ಣಗೊಂಡ ಕಾಮಗಾರಿ

ಪೀರ್‌ಪಾಷಾ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರೈಲ್ವೆ ಇಲಾಖೆಯ ಅಡ್ಡಗಾಲು, ಮೆಟ್ರೊ ಮಾರ್ಗ ನಿರ್ಮಾಣ ಕಾಮಗಾರಿ, ಅಗತ್ಯ ಮೂಲಸೌಕರ್ಯಗಳ ಸ್ಥಳಾಂತರ, ಭೂ ಮಾಲೀಕತ್ವ ವಿವಾದ ದಾವೆಗಳನ್ನು ದಾಟಿಕೊಂಡು ಮಲ್ಲೇಶ್ವರ– ಶ್ರೀರಾಂಪುರ ನಡುವಿನ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ಅಂತೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

ಮಲ್ಲೇಶ್ವರದ ಸಂಪಿಗೆ ರಸ್ತೆಯಿಂದ ಶ್ರೀರಾಂಪುರಕ್ಕೆ ಸಂಪರ್ಕ ಕಲ್ಪಿಸುವ ಈ ಕೆಳಸೇತುವೆ ಕಾಮಗಾರಿಗೆ 2008ರಲ್ಲಿ ಚಾಲನೆ ನೀಡಲಾಗಿತ್ತು. ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದ್ದ ಈ ಕಾಮಗಾರಿ ಬಿಬಿಎಂಪಿಯ ಮುತುವರ್ಜಿಯಿಂದ ಒಂದೂವರೆ ವರ್ಷದಿಂದ ಈಚೆಗೆ ಚುರುಕು ಪಡೆದುಕೊಂಡಿತ್ತು.

ಅಂಡರ್‌ಪಾಸ್‌ನಲ್ಲಿ ರೈಲ್ವೆ ಇಲಾಖೆಯೇ ಡಕ್‌ಗಳನ್ನು ಅಳವಡಿಸಿದೆ. ವಾಹನಗಳು ಇಳಿದು–ಹತ್ತುವ ರ‍್ಯಾಂಪ್‌ ಮತ್ತು ಅದರ ಬದಿಯ ತಡೆಗೋಡೆಗಳು, ಪಾದಚಾರಿ ಮಾರ್ಗ, ಮಳೆನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣವನ್ನು ಪಾಲಿಕೆ ನಡೆಸಿದೆ.

‘ಈ ಸೇತುವೆ ಬಳಕೆಗೆ ಮುಕ್ತವಾದರೆ, ಬದಿಯಲ್ಲೇ ಇರುವ ಹಳೆಯ ಕೆಳಸೇತುವೆಯಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯಿಂದ ಸವಾರರಿಗೆ ಮುಕ್ತಿ ಸಿಗಲಿದೆ. ಸಂಪಿಗೆ ರಸ್ತೆಯಿಂದ ಶ್ರೀರಾಮಪುರದ ಕಡೆ ಹೋಗಲು ಹೊಸ ಸೇತುವೆಯನ್ನು ಹಾಗೂ ಶ್ರೀರಾಂಪುರದಿಂದಬರುವ ವಾಹನಗಳು ಹಳೆಸೇತುವೆ ಬಳಸುವಂತಾಗಲು ಯೋಜಿಸಿದ್ದೇವೆ’ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ (ಪಶ್ವಿಮ) ಆರ್‌.ಮಾಲತೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಡೆಗೋಡೆಗಳ ಹೊರಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ, ಅಲ್ಲಲ್ಲಿ ಹೊರಬಿದ್ದಿರುವ ಕೇಬಲ್‌ಗಳ ಸ್ಥಳಾಂತರದ ಕೆಲಸ ಬಾಕಿಯಿದೆ.

ದಟ್ಟಣೆಗೆ ಪರಿಹಾರವಾಗಲಿದೆಯೇ?: ‘ಕೆಲಸದ ದಿನಗಳಂದು ಬೆಳಿಗ್ಗೆ ಮತ್ತು ಸಂಜೆ ಹಾಗೂ ಮಳೆಬಂದ ಸಂದರ್ಭಗಳಲ್ಲಿ ಹಳೆ ಸೇತುವೆ ಕೆಳಗೆ ದಟ್ಟಣೆ ಉಂಟಾಗುತ್ತಿತ್ತು. ಹಾಗಾಗಿ ಬಹುತೇಕ ವಾಹನ ಸವಾರರು ಮಹಾಕವಿ ಕುವೆಂಪು ರಸ್ತೆ ಮೂಲಕ ರಾಜಾಜಿನಗರ ತಲುಪುತ್ತಿದ್ದರು. ಈ ಹೊಸ ಸೇತುವೆಯಿಂದ ಶ್ರೀರಾಮಪುರದ ಮೂಲಕ 10–15 ನಿಮಿಷ ಮುಂಚಿತವಾಗಿ ರಾಜಾಜಿನಗರ ಸೇರಬಹುದು’ ಎಂದು ಆಟೋ ಚಾಲಕ ಕುಮಾರೇಶ್‌ ಹೇಳಿದರು.

‘ಸಂಪಿಗೆ ರಸ್ತೆಯಿಂದ ಸೇತುವೆ ಕೆಳಗೆ ಹಾದುಹೋಗುವ ರಸ್ತೆ ನೇರವಾಗಿಲ್ಲ. ಮಂತ್ರಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಕೌಂಪೌಂಡ್‌ಗೆ ಹೊಂದಿಕೊಂಡಂತೆ ಸ್ವಲ್ಪ ಎಡಕ್ಕೆ ತಿರುಗಿ ಸಾಗಬೇಕು. ಅಲ್ಲದೇ, ಸೇತುವೆಯ ದಾರಿಗೆ ನೇರವಾಗಿ ಶ್ರೀರಾಂಪುರ ಭಾಗದಲ್ಲಿ ವೀರಾಂಜನೇಯ ದೇವಸ್ಥಾನವಿದೆ. ಅಲ್ಲಿಯೂ ವಾಹನಗಳನ್ನು ಸ್ವಲ್ಪ ಬಲಕ್ಕೆ ತಿರುಗಿಸಿ ಸಾಗಬೇಕಾಗುತ್ತದೆ. ಎರಡು ಭಾರಿ ವಾಹನಗಳು ಒಟ್ಟಿಗೆ ಇಲ್ಲಿ ಸಾಗಿಬಂದರೆ, ದಟ್ಟಣೆ ಉಂಟಾಗುವುದು ಖಚಿತ’ ಎಂದು ಸ್ಥಳೀಯರಾದ ಕೃಷ್ಣಮೂರ್ತಿ ತಿಳಿಸಿದರು.

ರಸ್ತೆ ನಿರ್ಮಿಸಲು ರೈಲ್ವೆ ಅಡ್ಡಗಾಲು

ನಿವಾಸಿಗಳಿಗೆ ಅನುಕೂಲವಾಗಲು ಮಂತ್ರಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಪ್ರವೇಶ ದ್ವಾರವನ್ನು ಸಂಪಿಗೆ ರಸ್ತೆಯ ಕಡೆ ನಿರ್ಮಿಸಿಕೊಳ್ಳಲು ಪಾಲಿಕೆ ಅನುಮತಿ ನೀಡಿದೆ. ಅದರ ಬದಲಿಗೆ, ಸಂಪಿಗೆ ರಸ್ತೆ ಮೆಟ್ರೊ ನಿಲ್ದಾಣದಿಂದ ಹೊಸ ಕೆಳಸೇತುವೆವರೆಗೂ ಮಂತ್ರಿ ಅಪಾರ್ಟ್‌ಮೆಂಟ್‌ ಸಮುಚ್ಛಯದ ಹಿಂಭಾಗದಲ್ಲಿ ನಾಲ್ಕು ಪಥದ ರಸ್ತೆ ನಿರ್ಮಾಣ ಮಾಡಿಕೊಡಲು ಮಂತ್ರಿ ಡೆವಲಪರ್ಸ್‌ ಪಾಲಿಕೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ರಸ್ತೆ ನಿರ್ಮಾಣದ ಜಾಗ ತಮಗೆ ಸೇರಿದ್ದು, ಇಲ್ಲಿ ರಸ್ತೆ ನಿರ್ಮಿಸುವಂತಿಲ್ಲ ಎಂದು ರೈಲ್ವೆ ಇಲಾಖೆ ವಾದಿಸುತ್ತಿದೆ.

* ಸದ್ಯ ಅಂಡರ್‌ಪಾಸ್‌ ರಸ್ತೆಯ ಕ್ಯೂರಿಂಗ್‌ ನಡೆಯುತ್ತಿದೆ. ಇನ್ನು ಎರಡು–ಮೂರು ವಾರಗಳಲ್ಲಿ ಜನಬಳಕೆಗೆ ಮುಕ್ತಮಾಡಲು ಯೋಗ್ಯವಾಗಲಿದೆ.

-ಆರ್‌.ಮಾಲತೇಶ್‌, ಕಾರ್ಯನಿರ್ವಾಹಕ ಎಂಜಿನಿಯರ್‌ (ಪಶ್ವಿಮ), ಬಿಬಿಎಂಪಿ

ಅಂಕಿ–ಅಂಶ

* ₹ 1.30 ಕೋಟಿ ಕೆಳಸೇತುವೆ ನಿರ್ಮಾಣ ವೆಚ್ಚ

* 430 ಮೀಟರ್‌ ಕೆಳಸೇತುವೆ ಉದ್ದ

* 6 ಮೀಟರ್‌ ಸೇತುವೆಯ ಅಗಲ

* 4.1 ಅಡಿ ಕೆಳಸೇತುವೆಯ ಎತ್ತರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು