ಶನಿವಾರ, ಸೆಪ್ಟೆಂಬರ್ 25, 2021
26 °C
ಬೆಳೆಗಾರ- ಗ್ರಾಹಕರ ನೇರ ಸಂಪರ್ಕಕ್ಕೆ ‘ಕಾರ್‌ಸಿರಿ ಮ್ಯಾಂಗೋಸ್‌’ ಪೋರ್ಟಲ್‌ ಆರಂಭಿಸಿದ ಮಾವು ಅಭಿವೃದ್ಧಿ ನಿಗಮ

ಆನ್‌ಲೈನ್‌ನಲ್ಲೇ ಮನೆಗೆ ತರಿಸಿಕೊಳ್ಳಿ ಮಾವು

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾವಿನ ಹಣ್ಣು ಎಂದರೆ ನಿಮಗೆ ಬಲುಪ್ರೀತಿಯೇ? ನಗರದ ಸಂಚಾರ ದಟ್ಟಣೆ ಕಿರಿಕಿರಿಯಿಂದಾಗಿ ಮಾರುಕಟ್ಟೆಗೆ ಹೋಗಿ ಮಾವು ಖರೀದಿಸಲು ಕಷ್ಟವಾಗುತ್ತಿದೆಯೇ? ಹಾಗಿದ್ದರೆ ಇನ್ನು ಮುಂದೆ ಈ ಸಮಸ್ಯೆಗೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ನೀವು ಮನೆಯಲ್ಲೇ ಕುಳಿತು ರೈತರ ತೋಟದಿಂದ ನೇರವಾಗಿ ಮಾವನ್ನು ಮನೆಗೆ ತರಿಸಿಕೊಳ್ಳಬಹುದು.

ಮಾವು ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ‘ಕಾರ್‌ಸಿರಿ ಮ್ಯಾಂಗೋಸ್‌’ ಎಂಬ ಆನ್‌ಲೈನ್‌ ಪೋರ್ಟಲ್‌ (https://karsirimangoes.karnataka.gov.in ) ಆರಂಭಿಸಿದೆ. ರೈತ ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವ ಬ್ಯುಸಿನೆಸ್‌ ಟು ಕಸ್ಟಮರ್‌ (ಬಿ2ಸಿ) ಯೋಜನೆಯಡಿ ನಿಗಮವು ಈ ಸೇವೆ ಆರಂಭಿಸಿದೆ.  ಆನ್‌ಲೈನ್‌ನಲ್ಲಿ ಹಣ ಪಾವತಿಸಿ ತಮಗೆ ಇಷ್ಟದ ತಳಿಯ ಮಾವಿನ ಹಣ್ಣುಗಳನ್ನು ಗ್ರಾಹಕರು ಪಡೆಯಬಹುದು. ಈ ಬಗ್ಗೆ ಗ್ರಾಹಕರ ಗೊಂದಲ ನಿವಾರಣೆ ಮಾಡಲು 76040 92292 ಸಂಖ್ಯೆಯ ಐವಿಆರ್‌ ಸೇವೆಯನ್ನೂ ಒದಗಿಸಲಾಗಿದೆ.

ಮಾವುಗಳನ್ನು ಮಾರಲು ಆಸಕ್ತಿಯುಳ್ಳ ರೈತರು ಕೂಡ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಂಡು ವ್ಯಾಪಾರ ಆರಂಭಿಸಬಹುದು. ಇದು ಸಂಪೂರ್ಣ ಶುಲ್ಕರಹಿತ ಸೇವೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳ 30ಕ್ಕೂ ಅಧಿಕ ರೈತರು ಈಗಾಗಲೇ ಈ ಸೇವೆಯ ಪ್ರಯೋಜನ ಪಡೆಯಲು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. 

‘ಮಾರುಕಟ್ಟೆಯಲ್ಲಿ ಉತ್ತಮವಾದ ಮಾವು ಸಿಗುತ್ತಿಲ್ಲ. ಆರೋಗ್ಯಕರ ಮತ್ತು ರುಚಿಕರ ಮಾವುಗಳನ್ನು ನೀಡುವಂತೆ ಗ್ರಾಹಕರು ನಮ್ಮ ಬಳಿ ವಿಚಾರಿಸುತ್ತಿದ್ದರು. ಇನ್ನೊಂದೆಡೆ ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ದೂರುತ್ತಿದ್ದರು. ಇಬ್ಬರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಪೋರ್ಟಲ್‌ ಸಿದ್ಧಪಡಿಸ‌ಲಾಗಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜು ಮಾಹಿತಿ ನೀಡಿದರು.

‘ವಿವಿಧ ತಳಿಗಳ ಮಾವುಗಳನ್ನು ಈ ಪೋರ್ಟಲ್‌ ಮೂಲಕ ಖರೀದಿಸಬಹುದು. ಒಂದೇ ತಳಿಯ ಮಾವಿನ ಹಣ್ಣುಗಳು ವಿವಿಧ ದರಗಳಲ್ಲಿ ಲಭ್ಯವಿದೆ. ಇದರಿಂದ ಮಾವು ಬೆಳೆಗಾರರಿಗೆ ಹೊಸ ಮಾರುಕಟ್ಟೆ ಸಿಕ್ಕಂತಾಗಿದೆ’ ಎಂದರು.

‘ತೋಟಕ್ಕೆ ತೆರಳಿ ಮಾವು ಕೊಳ್ಳಿರಿ’

ಗ್ರಾಹಕರು ಮಾವಿನ ತೋಪಿಗೇ ತೆರಳಿ ಹಣ್ಣು ಖರೀದಿಸಲು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ವ್ಯವಸ್ಥೆ ಮಾಡಿದೆ.

ಬೆಂಗಳೂರು ನಗರದ 200 ಗ್ರಾಹಕರನ್ನು ನೇರವಾಗಿ ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳ ಮಾವಿನ ತೋಟಗಳಿಗೆ ಕರೆದೊಯ್ಯಲು 4 ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಮೇ 19 ರಂದು ಬೆಳಿಗ್ಗೆ 8ಗಂಟೆಗೆ ಎಂ.ಎಸ್‌.ಬಿಲ್ಡಿಂಗ್‌ ಆವರಣದಿಂದ ಬಸ್‌ಗಳು ಹೊರಡಲಿವೆ.

ನೋಂದಣಿ ಪ್ರಕ್ರಿಯೆ ಮೇ 12ರಿಂದ ಆರಂಭವಾಗಿವೆ. ಆಸಕ್ತರು www.ksmdmcl.org ಮೂಲಕ ನೋಂದಾಯಿಸಿಕೊಳ್ಳಬಹುದು. ಗ್ರಾಹಕರು ಆನ್‌ಲೈನ್‌ನಲ್ಲಿ ₹100 ರೂಪಾಯಿ ಪಾವತಿಸಬೇಕು. ಪಾವತಿ ವಿವರಗಳನ್ನು mangopickingtourism@gmail.comಗೆ ಕಡ್ಡಾಯವಾಗಿ ಕಳುಹಿಸಬೇಕು.

ವಿವರಗಳಿಗಾಗಿ:080–22236837.

**

ಪೋರ್ಟಲ್‌ನ ಅನುಕೂಲಗಳೇನು?

* ರೈತ–ಗ್ರಾಹಕರ ನಡುವೆ ನೇರ ಸಂಪರ್ಕ

* ಮಧ್ಯವರ್ತಿಗಳ ಹಾವಳಿಗೆ ತಡೆ

* ಗ್ರಾಹಕರ ಕೈಗೆ ನೈಸರ್ಗಿಕ ಮಾವು

* ರೈತರಿಗೆ ಮಾರುಕಟ್ಟೆ ವೆಚ್ಚವಿಲ್ಲ

* ನೇರ ಮಾರಾಟದಿಂದ ರೈತರಿಗೆ ಲಾಭ

***

ಮಾವಿನ ತಳಿ; ದರ (ಪ್ರತಿ ಕೆ.ಜಿ.ಗೆ ₹ ಗಳಲ್ಲಿ)

ರಸಪುರಿ; ₹80

ಮಲ್ಲಿಕಾ;₹90

ದಾಶೇರಿ;₹120

ಬಂಗನ್‌ಪಲ್ಲಿ;₹100

ಬಾದಾಮಿ;₹150

 **

ಮಾರುಕಟ್ಟೆಗಳಲ್ಲಿ ಸಿಗುವ ಮಾವನ್ನು ರಾಸಾಯನಿಕ ಬಳಸಿ ಹಣ್ಣು ಮಾಡಲಾಗಿರುತ್ತದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಪೋರ್ಟಲ್‌ನಿಂದ ಇಷ್ಟವಾದ ಮಾವುಗಳನ್ನು ತರಿಸಿಕೊಳ್ಳುತ್ತೇನೆ
- ಸಂತೋಷ್‌, ಮಾವು ಪ್ರಿಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು