ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಬಗೆಹರಿಸುವುದು ನನ್ನ ಹೊಣೆ; ಮೇಯರ್‌ ಗಂಗಾಂಬಿಕೆ ವಾಗ್ದಾನ

ಕಸದ ಸಮಸ್ಯೆಗೆ ಶೀಘ್ರ ಪರಿಹಾರ
Last Updated 13 ಅಕ್ಟೋಬರ್ 2018, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ಜನರು ‘ಪ್ರಜಾವಾಣಿ’ ಪತ್ರಿಕೆ ಮೂಲಕ ಹೇಳಿಕೊಂಡಿರುವ ಅಹವಾಲುಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ. ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸುತ್ತೇನೆ’

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ನೀಡಿರುವ ವಾಗ್ದಾನವಿದು. ಮೇಯರ್‌ ಜೊತೆ ಅಹವಾಲು ಹೇಳಿಕೊಳ್ಳಲು ‘ಪ್ರಜಾವಾಣಿ’ ವೇದಿಕೆಯನ್ನು ಕಲ್ಪಿಸುತ್ತಿದ್ದಂತೆಯೇ ಸಾರ್ವಜನಿಕರು ಸಮಸ್ಯೆಗಳ ಸರಮಾಲೆಯನ್ನೇ ಮುಂದಿಟ್ಟಿದ್ದರು.

‘ಪ್ರತಿಯೊಂದು ಸಮಸ್ಯೆಯ ಬಗ್ಗೆಯೂ ಪರಿಶೀಲಿಸಿ ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕೆಲವು ಸಮಸ್ಯೆಗಳನ್ನು ಈಗಾಗಲೇ ಬಗೆಹರಿಸಲಾಗಿದೆ. ಇನ್ನುಳಿದವುಗಳನ್ನು ಒಂದೆರಡು ವಾರದಲ್ಲಿ ಪರಿಹರಿಸಲಿದ್ದೇವೆ’ ಎಂದು ಮೇಯರ್‌ ಭರವಸೆ ನೀಡಿದರು.

ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕುರಿತು ಮೇಯರ್‌ ನೀಡಿರುವ ಆಶ್ವಾಸನೆಗಳಿವು.

ಕಸ ವಿಲೇವಾರಿ ಸಮಸ್ಯೆ: ಈ ಹಿಂದೆ ಕಸ ವಿಲೇವಾರಿ ಗುತ್ತಿಗೆಯನ್ನು ವಲಯ ಮಟ್ಟದಲ್ಲಿ ನೀಡಲಾಗಿತ್ತು. ಈ ಗುತ್ತಿಗೆಯ ಅವಧಿ ಮುಗಿದ ಬಳಿಕವೂ ಅಲಿಖಿತ ಒಪ್ಪಂದದ ರೀತಿ ಹೇಗೋ ವ್ಯವಸ್ಥೆ ಮುಂದುವರಿಯುತ್ತಿದೆ. ಹಾಗಾಗಿ ಅನೇಕ ಕಡೆ ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿರಲಿಲ್ಲ. ನಾವೀಗ ಕಸ ವಿಲೇವಾರಿ ವ್ಯವಸ್ಥೆಯನ್ನು ಸಮಗ್ರವಾಗಿ ಬದಲಿಸಲಿದ್ದೇವೆ. ವಾರ್ಡ್‌ ಮಟ್ಟದಲ್ಲಿ ಗುತ್ತಿಗೆ ನೀಡಲಿದ್ದು, ಈ ತಿಂಗಳ ಒಳಗೆ ಟೆಂಡರ್ ಆಹ್ವಾನಿಸಲಿದ್ದೇವೆ. ಹೊಸ ಟೆಂಡರ್ ವ್ಯವಸ್ಥೆ ಜಾರಿಯಾದ ಬಳಿಕ ಕಸ ಸಂಗ್ರಹ ಸಮಸ್ಯೆ ಬಗೆಹರಿಯಲಿದೆ.

ಮನೆಮನೆಯಿಂದ ಹಾಗೂ ವಾಣಿಜ್ಯ ಮಳಿಗೆಗಳ ಕಸ ಸಂಗ್ರಹಿಸಲು ಒಂದೇ ವಾಹನ ಬಳಸಲಾಗುತ್ತಿತ್ತು. ಇನ್ನು ಮನೆ ಮನೆಯಿಂದ ಕಸ ಸಂಗ್ರಹಿಸಲು ಹಸಿರು ಬಣ್ಣದ ವಾಹನ ಹಾಗೂ ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಿಸಲು ಹಳದಿ ಬಣ್ಣದ ವಾಹನ ವ್ಯವಸ್ಥೆ ಮಾಡುತ್ತೇವೆ.

ರಾಜಕಾಲುವೆ:ಮಳೆಗಾಲದಲ್ಲಿ ರಾಜಕಾಲುವೆ ಉಕ್ಕಿ ಹರಿದು ಸಮಸ್ಯೆ ಉಂಟಾಗುತ್ತಿರುವುದು ನಿಜ. ಇದೊಂದು ಜಟಿಲ ಸಮಸ್ಯೆ. ಒತ್ತುವರಿ ತೆರವುಗೊಳಿಸುವ ಮೂಲಕ ರಾಜಕಾಲುವೆಯಲ್ಲಿ ನೀರು ಸಹಜವಾಗಿ ಹರಿದುಹೋಗುವಂತೆ ಮಾಡಬೇಕಿದೆ. ಒತ್ತುವರಿ ಆಗಿರುವ ಕಡೆ ಭೂಸರ್ವೇಕ್ಷಣಾ ಇಲಾಖೆಯವರು ಸರ್ವೆ ನಡೆಸಿದ್ದಾರೆ. ಅವರು ಗಡಿಗುರುತು ಮಾಡಿಕೊಟ್ಟ ತಕ್ಷಣವೇ ಒತ್ತುವರಿ ತೆರವು ಮತ್ತೆ ಆರಂಭವಾಗಲಿದೆ. ಮುಂದಿನ ಮಳೆಗಾಲದಲ್ಲಿ ಖಂಡಿತಾ ಈ ಸಮಸ್ಯೆ ಮರುಕಳಿಸುವುದಿಲ್ಲ.

ರಸ್ತೆ ಗುಂಡಿ:ನಗರವನ್ನು ರಸ್ತೆಗುಂಡಿಗಳಿಂದ ಮುಕ್ತಗೊಳಿಸುತ್ತೇವೆ ಎಂಬ ಭರವಸೆಯನ್ನು ನಾನು ನೀಡುವುದಿಲ್ಲ. ಒಂದು ಕಡೆ ಗುಂಡಿ ಮುಚ್ಚಿದಾಗ ಇನ್ನೊಂದು ಕಡೆ ಗುಂಡಿ ಸೃಷ್ಟಿಯಾಗುತ್ತದೆ. ಅನೇಕ ಕಡೆ, ಜಲಮಂಡಳಿ ಅಳವಡಿಸಿರುವ ನೀರಿನ ಕೊಳವೆ ಸೋರಿಕೆಯಿಂದ ರಸ್ತೆ ಗುಂಡಿ ಬೀಳುತ್ತದೆ. ಯಾವುದೇ ರಸ್ತೆಯಲ್ಲಿ ಗುಂಡಿ ಕಂಡುಬಂದರೂ ಗಮನಕ್ಕೆ ತನ್ನಿ. ಅದನ್ನು ತಕ್ಷಣವೇ ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇನೆ.

ಬೀದಿನಾಯಿ ಹಾವಳಿ:ಈ ಸಮಸ್ಯೆಗೆ ಸೂಕ್ಷ್ಮವಾಗಿ ಪರಿಹಾರ ಕಂಡುಕೊಳ್ಳಬೇಕಾಗಿದೆ. ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಇದೆ. ಅದರ ಪ್ರಕಾರ ಶಸ್ತ್ರಚಿಕಿತ್ಸೆ ಬಳಿಕ ನಾಯಿಗಳನ್ನು ಮೂರು ದಿನ ಆರೈಕೆ ಮಾಡಿ ಅದೇ ಸ್ಥಳದಲ್ಲಿ ಬಿಡಬೇಕು. ಮಾಂಸದ ತ್ಯಾಜ್ಯ ಬಿಸಾಡುವ ಸ್ಥಳಗಳಲ್ಲಿ ನಾಯಿಗಳು ವ್ಯಗ್ರವಾಗುವುದು ಹೆಚ್ಚು ಎಂಬ ದೂರು ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಂಸದ ತ್ಯಾಜ್ಯ ಬಿಸಾಡುವುದನ್ನು ತಡೆಯಲು ಕ್ರಮಕೈಗೊಂಡಿದ್ದೇವೆ.

ಮಾರುಕಟ್ಟೆ ನಿರ್ವಹಣೆ:ನಾನು ಯಾವುದೇ ಕ್ಷಣದಲ್ಲಿ ಬೇಕಾದರೂ ಮಾರುಕಟ್ಟೆಗಳಿಗೆ ಭೇಟಿ ನೀಡಬಹುದು. ಅಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ಕಠಿಣ ಕ್ರಮ ನಿಶ್ಚಿತ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದೇನೆ.

ಕೆರೆ ಅಭಿವೃದ್ಧಿ:ಬಿಬಿಎಂಪಿ ವ್ಯಾಪ್ತಿಯ ಕೆರೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇವುಗಳ ಸಮಗ್ರ ಅಭಿವೃದ್ಧಿಗೆ ಈಗಾಗಲೇ ಕಾರ್ಯಯೋಜನೆ ರೂಪಿಸಿದ್ದೇವೆ.

‘ಕನ್ನಡ ಅನುಷ್ಠಾನ ಕಟ್ಟುನಿಟ್ಟು’

ನಗರದಲ್ಲಿ ಕನ್ನಡ ಮರೆಯಾಗುತ್ತಿರುವ ಕುರಿತು ಹಾಗೂ ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸುವ ಕುರಿತು ಅನೇಕರು ಕಳಕಳಿ ವ್ಯಕ್ತಪಡಿಸಿದ್ದರು.

‘ಇದನ್ನು ನಾನೂ ಒಪ್ಪುತ್ತೇನೆ. ನಾಡಿನ ರಾಜಧಾನಿಯಲ್ಲಿ ಕನ್ನಡದ ಕಂಪನ್ನು ಎತ್ತಿಹಿಡಿಯಲು ಬೇಕಾದ ಎಲ್ಲ ಕ್ರಮ ಕೈಗೊಳ್ಳುತ್ತೇನೆ. ಇದರ ಮೊದಲ ಹೆಜ್ಜೆಯಾಗಿ ಎಲ್ಲ ಫಲಕಗಳಲ್ಲೂ ಕನ್ನಡ ಕಡ್ಡಾಯವಾಗಿ ಬಳಸುವುದು ಕಟ್ಟುನಿಟ್ಟಾಗಿ ಜಾರಿ ಆಗುವಂತೆ ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದು ಗಂಗಾಂಬಿಕೆ ತಿಳಿಸಿದರು.

ಪ್ರಕಟವಾದ ದಿನವೇ ಮ್ಯಾನ್‌ಹೋಲ್‌ ದುರಸ್ತಿ

ಚಾಮರಾಜಪೇಟೆಯ ಒಂದನೇ ಮುಖ್ಯರಸ್ತೆಯ ಒಂದನೇ ಅಡ್ಡ ರಸ್ತೆಯ ಮ್ಯಾನ್‌ಹೋಲ್‌ ಸರಿಪಡಿಸುವಂತೆ ರವೀಂದ್ರ ಕುಮಾರ್‌ ಅವರು ಕೋರಿದ್ದರು. ಅವರ ಈ ಅಹವಾಲು ‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ಪ್ರಕಟವಾಗಿತ್ತು.

‘ಆ ದಿನವೇ ಜಲಮಂಡಳಿ ಸಿಬ್ಬಂದಿ ಈ ಮ್ಯಾನ್‌ಹೋಲ್‌ ದುರಸ್ತಿ ಪಡಿಸಿದರು’ ಎಮದು ರವೀಂದ್ರ ತಿಳಿಸಿದರು.

‘ತೆರಿಗೆ ಪಾವತಿಸದವರ ವಿವರ ವೆಬ್‌ಸೈಟ್‌ನಲ್ಲಿ’

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ವಿವರಗಳನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಶರ್ವಾಣಿ ಅವರು ಸಲಹೆ ನೀಡಿದ್ದರು.

‘ಈ ಸಲಹೆಯನ್ನು ಸ್ವೀಕರಿಸುತ್ತೇನೆ. ಬಿಬಿಎಂಪಿಯಿಂದ ಭಾರಿ ಸೌಲಭ್ಯ ಪಡೆದು ಕೋಟಿಗಟ್ಟಲೆ ಲಾಭ ಪಡೆಯುತ್ತಿರುವ ಕಾರ್ಪೊರೇಟ್‌ ಕಂಪನಿಗಳೂ ಸರಿಯಾಗಿ ತೆರಿಗೆ ಪಾವತಿಸುತ್ತಿಲ್ಲ. ಇಂತಹವರ ಬಂಡವಾಳ ಬಯಲು ಮಾಡಬೇಕಿದೆ’ ಎಂದು ಮೇಯರ್‌ ಹೇಳಿದರು.

ಅಂಕಿ ಅಂಶ

645

ಸಾರ್ವಜನಿಕರಿಂದ ಬಂದ ಅಹವಾಲುಗಳು

110

‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ಅಹವಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT