ಮೆಟ್ರೊ ಹಳಿಯಲ್ಲಿ ‘ರೈಲು ತರಬೇತುದಾರರು’!

ಬುಧವಾರ, ಮೇ 22, 2019
29 °C

ಮೆಟ್ರೊ ಹಳಿಯಲ್ಲಿ ‘ರೈಲು ತರಬೇತುದಾರರು’!

Published:
Updated:
Prajavani

ಬೆಂಗಳೂರು: ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಮೆಟ್ರೊಗಾಗಿ ಕಾಯುತ್ತಿದ್ದ ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು.

ಇತ್ತ ಪ್ರಯಾಣಿಕರು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದರೆ, ರೈಲುಗಳ ಬಗ್ಗೆ ಮಾಹಿತಿ ನೀಡುವ ಡಿಜಿಟಲ್‌ ಮಾಹಿತಿ ಫಲಕವು ‘ರೈಲು ತರಬೇತುದಾರರು’ ಎಂದು ತೋರಿಸುತ್ತಿತ್ತು. ‘ಇದೇನಪ್ಪಾ... ಹಳಿಯಲ್ಲಿ ರೈಲು ಬೋಗಿಗಳು ಬರುವುದು ಗೊತ್ತು. ಈ ತರಬೇತು
ದಾರರು ಏಕೆ ಬರುತ್ತಾರೆ’ ಎಂಬ ಕುತೂಹಲ ಅವರನ್ನು ಕಾಡುತ್ತಿತ್ತು.

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಮೂಲ ಮಾಹಿತಿಯನ್ನು ಇಂಗ್ಲಿಷ್‌ನಲ್ಲಿ ಸಿದ್ಧಪಡಿಸಿ, ಅದನ್ನು ಕನ್ನಡಕ್ಕೆ ಭಾಷಾಂತರ ಮಾಡುವುದರಿಂದ ಆಗಿರುವ ಪ್ರಮಾದ ಇದು. ಇಂಗ್ಲಿಷ್‌ನ ‘ಕೋಚ್‌’ ಎಂಬ ಪದವನ್ನು ಕನ್ನಡಕ್ಕೆ ‘ಬೋಗಿ’ ಎಂದು ಅನುವಾದ ಮಾಡುವ ಬದಲು ‘ತರಬೇತುದಾರರು’ ಎಂದು ತಪ್ಪಾಗಿ ಅನುವಾದ ಮಾಡಲಾಗಿತ್ತು.

‘ಗೂಗಲ್ ಅನುವಾದದ ಮೊರೆ ಹೋದರೆ ಹೀಗೆಯೇ ಆಗುವುದು. ಕೋಚ್‌ಗೆ ಬೋಗಿ ಎಂದು ಕರೆಯುತ್ತಾರೆ ಎನ್ನುವಷ್ಟೂ ಜ್ಞಾನ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವ ಮೆಟ್ರೊ ಅಧಿಕಾರಿಗಳಿಗೆ ಇಲ್ಲವೇ’ ಎಂದು ಪ್ರಯಾಣಿಕರೊಬ್ಬರು ಪ್ರಶ್ನಿಸಿದರು.

‘ಮೆಟ್ರೊದಲ್ಲಿ ಇಂಥ ಅಭ್ಯಾಸಗಳು ಹೊಸತೇನಲ್ಲ. ಕೆಲವು ನಿಲ್ದಾಣಗಳಲ್ಲಿ ‘ಮೆಟ್ಟಿಲು ಬಳಸಿ ಸ್ವಾಸ್ಥ್ಯಕಾಪಾಡಿ’ ಎಂದು ಬರೆಯುವ ಬದಲು ‘ಸ್ವಾಸ್ತ್ಯ’ ಎಂದು ಬರೆದ ಉದಾಹರಣೆ ಇದೆ. ಮಹಾಕವಿ ಕುವೆಂಪು ಅವರ ಹೆಸರಿನ ನಿಲ್ದಾಣದಲ್ಲೇ ಕನ್ನಡವನ್ನು ಈ ರೀತಿ ತಪ್ಪಾಗಿ ಬರೆಯಲಾಗಿದೆ’ ಎನ್ನುತ್ತಾರೆ ಪ್ರಯಾಣಿಕ ರಾಘವೇಂದ್ರ.

‘ಬೋಗಿಯು ಕಣ್ಗಾವಲಿನಲ್ಲಿದೆ’ ಎಂದು ಸರಳವಾಗಿ ಬರೆಯುವ ಬದಲು ಸಾಮಾನ್ಯ ಜನರಿಗೆ ಅರ್ಥವಾಗದಂತೆ ‘ಕೋಚ್‌ ನಿಗ್ರಾಹಣೆಯಲ್ಲಿದೆ’ ಎಂಬ ಪದ ಬಳಸುತ್ತಾರೆ. ಇಂಥ ಅನೇಕ ಉದಾಹರಣೆಗಳು ಸಿಗುತ್ತವೆ’ ಎನ್ನುತ್ತಾರೆ ಅವರು. 

 ‘ನಿಗಮವು ಜನರನ್ನು ತಲುಪಲು ಬಳಸುವ ಮಾಹಿತಿಯನ್ನು ಕನ್ನಡದಲ್ಲೇ ಸಿದ್ಧಪಡಿಸಿ ನಂತರ ಇಂಗ್ಲಿಷ್‌ಗೆ ಭಾಷಾಂತರ ಮಾಡಿದರೆ ಇಂತಹ ಅಭಾಸಗಳನ್ನು ತಪ್ಪಿಸಬಹುದು’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಕನ್ನಡ ಕಳಕಳಿಗೆ ಮೆಚ್ಚುಗೆ: ‘ಮೆಟ್ರೊ ರೈಲುಗಳಲ್ಲಿ ಇತ್ತೀಚೆಗೆ ಕನ್ನಡದ ಉಕ್ತಿಗಳನ್ನು ಪ್ರಕಟಿಸಲಾಗುತ್ತಿದೆ. ಕನ್ನಡದ ಕವಿಗಳ ಜನಪ್ರಿಯ ಕವಿತೆಗಳ ಸಾಲುಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕನ್ನಡದ ಕವಿಗಳ ಹೆಸರು ಹಾಗೂ ಭಾವಚಿತ್ರಗಳನ್ನು ಬೋಗಿಗಳ ಒಳಗಿನ ಸೂಚನಾಫಲಕಗಳಲ್ಲಿ ಪ್ರಕಟಿಸಲಾಗುತ್ತಿದೆ. ಕನ್ನಡ ನಾಡಿನ ಜನಾಕರ್ಷಣೀಯ ಪ್ರವಾಸಿ ತಾಣಗಳ ಬಗ್ಗೆ ಸಚಿತ್ರ ಮಾಹಿತಿ ನೀಡಲಾಗುತ್ತಿದೆ. ಈ ಎಲ್ಲ ಕನ್ನಡ ಕಾಯಕಗಳಿಗಾಗಿ ನಿಗಮವು ಅಭಿನಂದನಾರ್ಹ’ ಎಂದು ಇನ್ನೊಬ್ಬ ಪ್ರಯಾಣಿಕ ಸುಜಯ್‌ ಹೇಳುತ್ತಾರೆ.

‘ರೈಲು ಈಗ ... ನಿಲ್ದಾಣಕ್ಕೆ ಬರಲಿದೆ’ ಎಂಬ ಉದ್ಘೋಷಣೆಯನ್ನು ಈಗ ‘ರೈಲು ... ನಿಲ್ದಾಣವನ್ನು ತಲುಪಲಿದೆ’ ಎಂದು ಬದಲಿಸಿಕೊಂಡಿರುವ ನಿಗಮದ ಕ್ರಮ ಕೂಡ ಮೆಚ್ಚುವಂತಹದ್ದು’ ಎಂದು ಅವರು ವಿವರಿಸುತ್ತಾರೆ. 

ಮೆಟ್ರೊದಲ್ಲಿ ಮತ್ತೆ ಹಿಂದಿ ಬಳಕೆ

ನಮ್ಮ ಮೆಟ್ರೊ ರೈಲುಗಳಲ್ಲಿ ಹಾಗೂ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಬಳಕೆ ಬಗ್ಗೆ ಎರಡು ವರ್ಷಗಳ ಹಿಂದೆ ನಗರದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಮೆಟ್ರೊದಲ್ಲಿ ಹಿಂದಿ ಹೇರಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಆ ಬಳಿಕ ಹಿಂದಿ ನಾಮಫಲಕ ಹಾಗೂ ಸೂಚನಾ ಫಲಕಗಳನ್ನು ಬಿಎಂಆರ್‌ಸಿಎಲ್‌ನವರು ತೆಗೆಸಿದ್ದರು.

‘ಕೆಲವು ಹಳೆಯ ಬೋಗಿಗಳಲ್ಲಿ ಹಿಂದಿ ಬಳಕೆ ಹಾಗೆಯೇ ಮುಂದುವರಿದಿದೆ. ಆರು ಬೋಗಿಗಳ ಹೊಸ ರೈಲುಗಳಲ್ಲೂ ಕೆಲವೊಂದು ಮಾಹಿತಿ ಫಲಕಗಳು ಹಿಂದಿಯಲ್ಲಿವೆ. ಇದರ ಅಗತ್ಯ ಏನು’ ಎಂದು ಪ್ರಶ್ನಿಸುತ್ತಾರೆ ರಾಘವೇಂದ್ರ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !