ಪೊಲೀಸರ ವಶದಲ್ಲಿದ್ದ ಆರೋಪಿ ಸಾವು

7
ಪತ್ನಿ ಕೊಂದು ಚಿನ್ನಾಭರಣ ದೋಚಿದ್ದ ಆರೋಪ

ಪೊಲೀಸರ ವಶದಲ್ಲಿದ್ದ ಆರೋಪಿ ಸಾವು

Published:
Updated:
Deccan Herald

ಬೆಂಗಳೂರು: ರಾಮಮೂರ್ತಿನಗರ ಠಾಣೆಯ ಪೊಲೀಸರ ವಶದಲ್ಲಿದ್ದ ಕೊಲೆ ಪ್ರಕರಣದ ಆರೋಪಿ ಕೃಷ್ಣಮೂರ್ತಿ (52) ಎಂಬುವರು ಭಾನುವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ನಗರದ ಸೇನಾ ಎಂಜಿನಿಯರಿಂಗ್ ಸರ್ವೀಸ್ ಕೇಂದ್ರದಲ್ಲಿ ಕೃಷ್ಣಮೂರ್ತಿ, ಲಿಫ್ಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.

‘ಠಾಣೆ ವ್ಯಾಪ್ತಿಯಲ್ಲಿ ನ. 20ರಂದು ಮೇಘಲಾದೇವಿ ಎಂಬುವರ ಕೊಲೆ ಆಗಿತ್ತು. ಅವರ ಪತಿಯಾಗಿದ್ದ ಕೃಷ್ಣಮೂರ್ತಿಯೇ ಕೊಲೆ ಆರೋಪಿ ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವಾಗಲೇ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ’ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆಸ್ಪತ್ರೆಯಲ್ಲಿ ಸಾವು: ‘ಕೃಷ್ಣಮೂರ್ತಿ ಅವರು ಪತ್ನಿ ಮೇಘಲಾದೇವಿ ಜೊತೆ ಬಾಣಸವಾಡಿಯ ಅಬ್ಬಯ್ಯ ರೆಡ್ಡಿ ಬಡಾವಣೆಯಲ್ಲಿ ವಾಸವಿದ್ದರು. ದಂಪತಿಗೆ ಮಕ್ಕಳು ಇರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಪತ್ನಿ ಮೇಘಲಾದೇವಿಯವರ ಕೊಲೆ ಬಳಿಕ, ಕೃಷ್ಣಮೂರ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯಾರೋ ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನಾಭರಣ ದೋಚಿಕೊಂಡು ಹೋಗಿರುವುದಾಗಿ ಹೇಳಿದ್ದರು. ಸ್ಥಳ ಪರಿಶೀಲನೆ ನಡೆಸಿದಾಗ, ಮನೆ ಸಮೀಪದಲ್ಲೇ ಇದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಆರೋಪಿಯ ಸುಳಿವು ನೀಡಿತ್ತು. ಅದನ್ನು ಆಧರಿಸಿ ಕೃಷ್ಣಮೂರ್ತಿ ಅವರನ್ನು ಭಾನುವಾರ ಬೆಳಿಗ್ಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡಿದ್ದರು’ ಎಂದು ಮಾಹಿತಿ ನೀಡಿದರು.

‘ಚಾಕುವಿನಿಂದ ಪತ್ನಿಯನ್ನು ಕೊಂದಿರುವುದಾಗಿ ಹೇಳಿಕೆ ನೀಡಿದ್ದ ಆರೋಪಿ, ಕಲ್ಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಚಾಕು ಬಚ್ಚಿಟ್ಟಿರುವುದಾಗಿ ಹೇಳಿದ್ದರು. ಆ ಚಾಕು ಜಪ್ತಿ ಮಾಡಲೆಂದು ಆರೋಪಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಅದೇ ಸ್ಥಳದಲ್ಲೇ ಆರೋಪಿ, ದಿಢೀರ್ ಕುಸಿದು ಬಿದ್ದಿದ್ದರು’ 

‘ಜೀಪಿನಲ್ಲೇ ಅವರನ್ನು ಸಮೀಪದ ಕೌಶಿಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದರು’ ಎಂದು ಪೊಲೀಸರು ವಿವರಿಸಿದರು.

ಸಿಐಡಿಗೆ ಪ್ರಕರಣ: ಪೊಲೀಸರ ವಶದಲ್ಲಿದ್ದಾಗಲೇ ಆರೋಪಿ ಮೃತಪಟ್ಟಿದ್ದರಿಂದಾಗಿ, ಪ್ರಕರಣದ ತನಿಖೆ ಜವಾಬ್ದಾರಿ ಸಿಐಡಿಗೆ ವರ್ಗಾವಣೆ ಆಗಿದೆ.

‘ತಮ್ಮ ಪತ್ನಿಯನ್ನೇ ಕೊಂದಿದ್ದ ಆರೋಪದಡಿ ಕೃಷ್ಣಮೂರ್ತಿ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಸಾವಿಗೆ ಹೃದಯಾಘಾತ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಘಟನೆ ಸಂಬಂಧ ತನಿಖೆ ಪೂರ್ಣಗೊಂಡ ಬಳಿಕ ನಿಖರ ಕಾರಣ ತಿಳಿಯಲಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಸೀಮಂತ್‌ಕುಮಾರ್‌ ಸಿಂಗ್‌ ಹೇಳಿದರು.

*****

ಪತ್ನಿಯನ್ನು ಕೊಲ್ಲಲು ಕಾರಣವೇನು ಎಂಬುದನ್ನು ಗೊತ್ತಾಗಿಲ್ಲ. ಅದನ್ನು ತಿಳಿದುಕೊಳ್ಳುವ ಮುನ್ನವೇ ಕೃಷ್ಣಮೂರ್ತಿ ಮೃತಪಟ್ಟಿದ್ದಾರೆ.

–ರಾಹುಲ್‌ ಕುಮಾರ್

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !