ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಾಂಶ ಕೇಳಿದ್ದಕ್ಕೆ ಪ್ರೇಯಸಿಯನ್ನೇ ಕೊಂದ !

ನಾಪತ್ತೆಯಾಗಿದ್ದ ಮಹಿಳೆ ಶವವಾಗಿ ಪತ್ತೆ * ‘ಲೀವಿಂಗ್ ಟುಗೆದರ್‌’ ಇದ್ದು ಮಗು ಕೊಟ್ಟಿದ್ದ
Last Updated 7 ಜೂನ್ 2019, 19:03 IST
ಅಕ್ಷರ ಗಾತ್ರ

ಬೆಂಗಳೂರು: ತನ್ನ ಜೊತೆ ‘ಲೀವಿಂಗ್ ಟುಗೆದರ್‌’ ಇದ್ದ ಸುನೀತಾ (25) ಎಂಬುವರನ್ನು ಕೊಲೆ ಮಾಡಿದ್ದ ಆರೋಪದಡಿ ಡೇವಿಡ್ ಕುಮಾರ್ (28) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಪಾದರಾಯನಪುರದ ನಿವಾಸಿಯಾದ ಆರೋಪಿ, ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ. ಸುನೀತಾ ಅವರನ್ನು ಮೇ 12ರಂದು ಅಪಹರಿಸಿ ಸಕಲೇಶಪುರಕ್ಕೆ ಕರೆದೊಯ್ದು ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದ. ಮೃತದೇಹವನ್ನು ಸಕಲೇಶಪುರದ ಅರಣ್ಯ ಪ್ರದೇಶದಲ್ಲಿ ಎಸೆದು ಬಂದಿದ್ದ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆ.ಜಿ.ಹಳ್ಳಿ ನಿವಾಸಿ ಆಗಿದ್ದ ಸುನೀತಾ ಅವರನ್ನು ತಮಿಳುನಾಡಿನ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಕಲಹದಿಂದಾಗಿ ಅವರು ಪತಿಯನ್ನು ತೊರೆದು ತವರು ಮನೆಗೆ ಬಂದು ವಾಸವಿದ್ದರು. ಅವರಿಗೆ ಡೇವಿಡ್‌ನ ಪರಿಚಯವಾಗಿತ್ತು. ಅವರಿಬ್ಬರು ಪ್ರೀತಿಸಲಾರಂಭಿಸಿದ್ದರು. ಪ್ರತ್ಯೇಕವಾಗಿ ಒಂದೇ ಮನೆಯಲ್ಲಿ ‘ಲೀವಿಂಗ್ ಟುಗೇದರ್’ ಆಗಿ ಕೆಲ ವರ್ಷ ವಾಸವಿದ್ದರು’ ಎಂದರು.

‘ಸುನೀತಾ ಅವರು 7 ತಿಂಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು. ‘ಮಗು ನನ್ನದಲ್ಲ’ ಎಂದು ಡೇವಿಡ್‌ ಜಗಳ ಮಾಡಲಾರಂಭಿಸಿದ್ದ. ಎರಡು ವರ್ಷಗಳ ಹಿಂದಷ್ಟೇ ಬೇರೊಂದು ಮದುವೆ ಸಹ ಆಗಿದ್ದ. ಆ ವಿಷಯ ಗೊತ್ತಾಗುತ್ತಿದ್ದಂತೆ, ‘ನನಗೆ ಹಾಗೂ ನನ್ನ ಮಗುವಿಗೆ ಪ್ರತ್ಯೇಕ ಮನೆ ಮಾಡಿಕೊಡಿ. ಜೀವನಾಂಶ ಸಹ ನೀಡಿ’ ಎಂದು ಸುನೀತಾ ಒತ್ತಾಯಿಸಲಾರಂಭಿಸಿದ್ದರು. ಹೀಗಾಗಿ ಆರೋಪಿ, ಕೊಲೆ ಮಾಡಲು ಸಂಚು ರೂಪಿಸಿದ್ದ’ ಎಂದು ಅಧಿಕಾರಿ ಹೇಳಿದರು.

ಸ್ನೇಹಿತನ ಕಾರಿನಲ್ಲಿ ಅಪಹರಣ: ‘ಮಗುವಿನ ಸಮೇತ ಸುನೀತಾ ಅವರನ್ನು ಸಿಲ್ಕ್‌ಬೋರ್ಡ್‌ ಜಂಕ್ಷನ್‌ಗೆ ಕರೆಸಿಕೊಂಡಿದ್ದ ಆರೋಪಿ, ಸ್ನೇಹಿತ ಶ್ರೀನಿವಾಸ್‌ ಎಂಬಾತನ ಕಾರಿನಲ್ಲಿ ಅಪಹರಿಸಿ ಸಕಲೇಶಪುರಕ್ಕೆ ಕರೆದೊಯ್ದು ಕೊಲೆ ಮಾಡಿದ್ದ. ಅರಣ್ಯ ಪ್ರದೇಶದಲ್ಲಿಮೃತದೇಹ ಕಂಡಿದ್ದ ಸ್ಥಳೀಯರಯ ಸಕಲೇಶಪುರ ಠಾಣೆಗೆ ಮಾಹಿತಿ ನೀಡಿದ್ದರು. ಕೊಲೆ ಶಂಕೆ ವ್ಯಕ್ತಪಡಿಸಿದ್ದ ಅಲ್ಲಿಯ ಪೊಲೀಸರು, ಅಪರಿಚಿತ ಶವವೆಂದು ಪ್ರಕರಣ ದಾಖಲಿಸಿಕೊಂಡಿದ್ದರು’ ಎಂದು ಹೇಳಿದರು.

ಕೊಲೆ ನಂತರ ಮಗುವನ್ನು ಅಜ್ಜಿಗೆ ತಂದುಕೊಟ್ಟ

‘ಸುನೀತಾರನ್ನು ಕೊಂದ ನಂತರ ಜೊತೆಗಿದ್ದ ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದ ಆರೋಪಿ, ಅವರ ತಾಯಿ ರಾಣಿ ಕೈಗೆ ಕೊಟ್ಟಿದ್ದ. ‘ನಿಮ್ಮ ಮಗಳು ನೆಲಮಂಗಲದಲ್ಲಿ ಮಗುವನ್ನು ನನಗೆ ಕೊಟ್ಟು ಮಂಗಳೂರಿನ ಬಸ್ ಹತ್ತಿ ಹೋಗಿದ್ದಾಳೆ’ ಎಂದು ತಿಳಿಸಿದ್ದ. ಆಗ ತಾಯಿ, ಮಗಳು ನಾಪತ್ತೆಯಾದ ಬಗ್ಗೆ ಕೆ.ಜಿ.ಹಳ್ಳಿ ಠಾಣೆಗೆ ದೂರು ನೀಡಿದ್ದರು’ ಎಂದು ಸಿಸಿಬಿ ಅಧಿಕಾರಿ ತಿಳಿಸಿದರು.

‘ತಿಂಗಳಾದರೂ ಕೆ.ಜಿ.ಹಳ್ಳಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಂಬಂಧಿಕರೊಬ್ಬರು, ಡೇವಿಡ್‌ ಕುಮಾರ್ ಮೇಲೆ ಅನುಮಾನ ವ್ಯಕ್ತಪಡಿಸಿ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT