ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಸಂಪುಟ ಒಪ್ಪಿಗೆ: ನಮ್ಮ ಮೆಟ್ರೊ 2ನೇ ಹಂತ, ತೊಡಕು ನಿವಾರಣೆಗೆ ಕ್ರಮ

ಉನ್ನತಾಧಿಕಾರ ಸಮಿತಿಗೆ ಮತ್ತಷ್ಟು ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ' ಯೋಜನೆಯ ಎರಡನೇ ಹಂತದ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ಉದ್ಭವಿಸಬಹುದಾದ ಸಮಸ್ಯೆಗಳ ನಿವಾರಣೆಗಾಗಿ ರಚಿಸಿರುವ ಉನ್ನತಾಧಿಕಾರ ಸಮಿತಿಗೆ ಹೆಚ್ಚಿನ ಅಧಿಕಾರ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

‘ನಮ್ಮ ಮೆಟ್ರೊ’ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಉನ್ನತಾಧಿಕಾರ ಸಮಿತಿ ರಚಿಸಲಾಗಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಈ ಸಮಿತಿಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ನಗರಾ
ಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆ, ಕಂದಾಯ ಇಲಾಖೆ ಹಾಗೂ ಪರಿಸರ ಇಲಾಖೆಗಳ ಉನ್ನತ ಅಧಿಕಾರಿಗಳೂ ಈ ಸಮಿತಿಯಲ್ಲಿರುತ್ತಾರೆ.

‘ನಮ್ಮ ಮೆಟ್ರೊ ಕಾಮಗಾರಿಗೆ ಎದುರಾಗುವ ತೊಡಕು ನಿವಾರಣೆ ಈ ಸಮಿತಿಯ ಪ್ರಮುಖ ಕಾರ್ಯ. ಮೆಟ್ರೊ ಯೋಜನೆಗೆ ಸರ್ಕಾರಿ ಇಲಾಖೆಗಳ ಜಮೀನಿನ ಅಗತ್ಯಬಿದ್ದರೆ, ಅದರ ಹಸ್ತಾಂತರಕ್ಕೆ ಸಂಬಂಧಿಸಿದ ತೊಡಕುಗಳನ್ನು ನಿವಾರಿಸುವ ತೀರ್ಮಾನ ಕೈಗೊಳ್ಳಲು ಸಮಿತಿಗೆ ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾವವಿತ್ತು. ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಮೆಟ್ರೊ ಕಾಮಗಾರಿ
ಗಳಿಗೆ ವೇಗ ಒದಗಿಸಲು ಇದು ಅತ್ಯಂತ ಮುಖ್ಯವಾದುದು’ ಎಂದು ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊ ಕಾಮಗಾರಿಗಾಗಿ ಅಗತ್ಯವಿರುವ ಕಡೆ ಬೆಸ್ಕಾಂ ವಿದ್ಯುತ್‌ ಮಾರ್ಗ, ಕೇಬಲ್‌ಗಳು, ಜಲಮಂಡಳಿ ಕೊಳವೆಮಾರ್ಗಗಳನ್ನು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ತ್ವರಿತ ನಿರ್ಧಾರ ಕೈಗೊಳ್ಳಲು ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಇತರ ಮೂಲಸೌಕರ್ಯ ಬಳಸುವುದಕ್ಕೆ ಸಂಬಂಧಿಸಿದಂತೆ ಸಮನ್ವಯ ಸಾಧಿಸುವುದಕ್ಕೂ ಇದು ನೆರವಾಗಲಿದೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ವ್ಯವಹರಿಸುವ ನಿಟ್ಟಿನಲ್ಲೂ ಈ ಸಮಿತಿ ಪ್ರಮುಖ ಪಾತ್ರ ವಹಿಸಲಿದೆ’ ಎಂದು ಅವರು ತಿಳಿಸಿದರು.

₹ 573.58 ಕೋಟಿ ಯೋಜನೆಗೆ ಅನುಮೋದನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲು ₹ 573.58 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ನಗರದ ಶಿವಾಜಿನಗರ ಬ್ರಾಡ್‌ವೇ ರಸ್ತೆಯಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಐಪಿಎಸ್ ಅಧಿಕಾರಿಗಳಿಗೆ 24 ಫ್ಲ್ಯಾಟ್‌ಗಳಿರುವ ವಸತಿ ಸಮುಚ್ಚಯ ನಿರ್ಮಾಣ ಹಾಗೂ ಪೂರ್ವ ವಿಭಾಗದ ಎಸಿಪಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ₹38.93 ಕೋಟಿ ಮೊತ್ತದಲ್ಲಿ ಕೈಗೊಳ್ಳಲು ಒಪ್ಪಿಗೆ ನೀಡಿದೆ.

ಸಂಪುಟ ಸಭೆಯ ನಿರ್ಧಾರಗಳು

* ಮೊದಲ ಬಾರಿ ಆಯ್ಕೆಯಾದ ಶಾಸಕರು ಜೂನ್‌ 30ರೊಳಗೆ ತಮ್ಮ ಆಸ್ತಿ ವಿವರಗಳನ್ನು ಲೋಕಾಯಕ್ತಕ್ಕೆ ಸಲ್ಲಿಸಬೇಕು. ಈ ನಿಯಮಕ್ಕೆ ತಿದ್ದುಪಡಿ ತಂದು, ಮೂರು ತಿಂಗಳ ಹೆಚ್ಚುವರಿ ಅವಧಿಯನ್ನು ನೀಡಲು ಒಪ್ಪಿಗೆ.

* ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ (ತಿದ್ದುಪಡಿ) ನಿಯಮಗಳಿಗೆ ಅನುಮೋದನೆ.

* ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಮಟ್ಟದ ಆಸ್ಪತ್ರೆ ಮೇಲ್ದರ್ಜೆಗೇರಿಸಲು ₹ 10.92 ಕೋಟಿ ಪರಿಷ್ಕೃತ ಅಂದಾಜು ಪಟ್ಟಿಗೆ ಒಪ್ಪಿಗೆ.

* ನಬಾರ್ಡ್‌ ಯೋಜನೆಯ ಆರ್‌ಐಡಿಎಫ್‌–23ರ ಅಡಿ ದಾಂಡೇಲಿಯ ಕೌಶಲ ಅಭಿವೃದ್ಧಿ ಕಾಮಗಾರಿಗಳಿಗೆ ಹಂಚಿಕೆಯಾಗಿರುವ ₹ 21.27 ಕೋಟಿಯ ಅಂದಾಜಿಗೆ ಅನುಮೋದನೆ.

* ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಕೊಲ್ಲೂರು ಕ್ಷೇತ್ರಕ್ಕೆ ನೀರು ಸರಬರಾಜು ಮಾಡುವ ಯೋಜನೆಯ ₹ 33.40 ಕೋಟಿ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.

* ಮಂಗಳೂರಿನ ಕೊಡಿಯಾಲಬೈಲ್‌ ‘ಎ’ ಗ್ರಾಮದ ಪೊರಂಬೋಕು ಜಮೀನನ್ನು ದಕ್ಷಿಣ ಕನ್ನಡ ಜಿಲ್ಲಾ ಜೋಗಿ ಸುಧಾರಕ ಸಂಘದವರಿಗೆ ಜೋಗಿ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಲು ಒಪ್ಪಿಗೆ.

* ನಗರೋತ್ಥಾನ 3ನೇ ಹಂತದಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಕ್ಕೆ ಭಕ್ತರಹಳ್ಳಿ ಅರಸೀಕೆರೆ ಮೂಲದಿಂದ ನೀರು ಸರಬರಾಜು ಮಾಡುವ ₹ 10.95 ಕೋಟಿ ವೆಚ್ಚದ ಕಾಮಗಾರಿಗೆ ಅನುಮತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು