ಕಾಟಕೇರಿ ರಸ್ತೆಯಲ್ಲಿ ಗುಂಡಿ ದರ್ಬಾರ್‌

ಭಾನುವಾರ, ಜೂಲೈ 21, 2019
23 °C
ಯುವಕರಿಂದಲೇ ಗುಂಡಿ ಮುಚ್ಚುವ ಕಾರ್ಯ, ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ

ಕಾಟಕೇರಿ ರಸ್ತೆಯಲ್ಲಿ ಗುಂಡಿ ದರ್ಬಾರ್‌

Published:
Updated:
Prajavani

ಮಡಿಕೇರಿ: ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವ ಕಾಟಕೇರಿ ಸಂಪರ್ಕ ರಸ್ತೆ ತೀರ ಹದಗೆಟ್ಟಿದೆ. ಯಾರೂ ಗುಂಡಿ ಮುಚ್ಚುವ ಕಾರ್ಯ ಮಾಡದ ಕಾರಣ ಕಾಟಕೇರಿ ಗ್ರಾಮಸ್ಥರೇ, ಸ್ವಂತ ರಸ್ತೆಯಲ್ಲಿ ಬಿದ್ದ ಗುಂಡಿಗಳಿಗೆ ಕಲ್ಲು–ಮಣ್ಣು ಹಾಕುವ ಮೂಲಕ ತಮ್ಮ ರಸ್ತೆಯನ್ನೇ ತಾವೇ ದುರಸ್ತಿ ಮಾಡಿಕೊಂಡಿದ್ದಾರೆ.

ರಸ್ತೆಯ ದುಸ್ಥಿತಿ ಕಂಡ 10ಕ್ಕೂ ಹೆಚ್ಚು ಯುವಕರು ಅಪಾಯಕ್ಕೆ ಮುನ್ಸೂಚನೆ ನೀಡುವ ಗುಂಡಿ ಬಿದ್ದ ರಸ್ತೆಗೆ ತಮ್ಮ ನಿತ್ಯ ಕೆಲಸ ಬಿಟ್ಟು ಮಣ್ಣು ಹಾಕಿ ಸಮತಟ್ಟು ಮಾಡಿ ಸಂಚಾರಕ್ಕೆ ಯೋಗ್ಯ ರಸ್ತೆ ಮಾಡಿಕೊಂಡಿದ್ದಾರೆ. ಜೋರು ಮಳೆ ಬಂದರೆ ಮತ್ತೆ ಎಲ್ಲಿ ಅಧ್ವಾನ ಆಗುವುದೋ ಎಂಬ ಆತಂಕ ಈ ಭಾಗದ ಗ್ರಾಮಸ್ಥರದ್ದು.

ಕಾಟಕೇರಿ ಗ್ರಾಮಕ್ಕೆ ಸೇರುವ 4 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ರಸ್ತೆಯನ್ನು ಸರಿಪಡಿಸುವಂತೆ ಅನೇಕ ಬಾರಿ ಜಿಲ್ಲಾಡಳಿತ ಹಾಗೂ ಸಂಬಂಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಪ್ರಯೋಜನವಾಗಿಲ್ಲ ಎಂದು ಯುವಕರು ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ದುಸ್ಥಿತಿಯ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಅರಿವಿದ್ದರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಣ್ಣ ಮಾರ್ಗದಲ್ಲಿ ಬಸ್‌, ಲಾರಿಗಳೇ ಹೆಚ್ಚು ಸಂಚರಿಸುತ್ತವೆ. ರಾತ್ರಿ ಸಮಯದಲ್ಲಿ ರಸ್ತೆಗಳಲ್ಲಿ ಗುಂಡಿ ಕಾಣದೇ ಅಪಘಾತಗಳು ಕೂಡ ಹೆಚ್ಚು ಸಂಭವಿಸಿವೆ. ಇನ್ನು ನಿತ್ಯ ಸಂಚರಿಸುವ ಶಾಲೆ ಮಕ್ಕಳು, ಕೂಲಿ ಕಾರ್ಮಿಕರು ಹಾಗೂ ವೃದ್ಧರಿಗೆ ಈ ಮಾರ್ಗದಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ ಎಂದು ಗ್ರಾಮಸ್ಥ ಪವನ್ ಹೇಳುತ್ತಾರೆ.

ಬಸ್‌ಗಳೇ ಮಾರ್ಗ ಬದಲಾಯಿಸಿವೆ:

ಕಾಟಕೇರಿ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ಗಳು ರಸ್ತೆ ಸರಿಯಿಲ್ಲದ ಕಾರಣ ಮಾರ್ಗವನ್ನು ಬದಲಾಯಿಸಿಕೊಂಡಿವೆ. ಕೆಲವು ಬಸ್‌ಗಳು ಸಂಚಾರವನ್ನೇ ಸ್ಥಗಿತ ಮಾಡಿವೆ. ರಸ್ತೆ ದುಸ್ಥಿತಿ ಕಂಡು ಆಟೋ ಚಾಲಕರೂ ಇತ್ತ ಬರುತ್ತಿಲ್ಲ. ಬಂದರೂ ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ಇದರಿಂದ ಮಡಿಕೇರಿ ನಗರಕ್ಕೆ ಸರಿಯಾಗಿ ಬರಲು ಸಾಧ್ಯವಾಗುವುದಿಲ್ಲ ಎಂದು ಯುವಕರು ಅಲವತ್ತುಕೊಂಡರು.

ವಿದ್ಯಾರ್ಥಿಗಳಿಗೆ ಸಹಕಾರಿ ಆಗುವಂತೆ ಸರ್ಕಾರಿ ಓಡಿಸಬೇಕು. ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಸ್‌ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !