ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಜನವಸತಿ ತೆರವಿಗೆ ಎನ್‌ಜಿಟಿ ಆದೇಶ

ಕೈಕೊಂಡ್ರಳ್ಳಿ ಕೆರೆ ಬಫರ್‌ ನಿಯಮ ಉಲ್ಲಂಘಿಸಿ ಮನೆ ನಿರ್ಮಿಸಿರುವ ಪ್ರಕರಣ
Last Updated 10 ಮೇ 2019, 19:33 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನ ಕೈಕೊಂಡ್ರಳ್ಳಿ ಕೆರೆಯ ಬಫರ್‌ ವಲಯದ ನಿಯಮ ಉಲ್ಲಂಘಿಸಿ ಕೆರೆಯ ವ್ಯಾಪ್ತಿಯಲ್ಲಿ ನೆಲೆಯೂರಿರುವ ಅಕ್ರಮ ಜನವಸತಿ ತೆರವಿಗೆ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಗುರುವಾರ ಆದೇಶಿಸಿದೆ.

ಸ್ಥಳ ಪರಿಶೀಲನೆ ನಡೆಸಿರುವ ಜಂಟಿ ಪರಿಶೀಲನಾ ಸಮಿತಿಯು ಜುಲೈ 11ರೊಳಗೆ ಕೆರೆಯ ಸಂರಕ್ಷಣೆಗೆ ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯಲ್‌ ನೇತೃತ್ವದ ಹಸಿರು ಪೀಠ ಸೂಚಿಸಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನೇತೃತ್ವದಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಂಡ ಜಂಟಿ ಸಮಿತಿಯು ನ್ಯಾಯ ಪೀಠದ ಆದೇಶದ ಅನ್ವಯ ಕಳೆದ ಮಾರ್ಚ್‌ 28ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಧ್ಯಂತರ ವರದಿ ಸಲ್ಲಿಸಿತ್ತು.

ಕೆರೆಯ ಬಫರ್‌ ವಲಯದ ನಿಯಮ ಮತ್ತು ಜಲ ಕಾಯ್ದೆಯ ಉಲ್ಲಂಘನೆ ಆಗಿರುವುದು ಕಂಡುಬಂದಿದೆ. ಕೆರೆಯ ಬಫರ್‌ ವಲಯದಲ್ಲಿ ಮನೆಗಳನ್ನು ನಿರ್ಮಿಸಲು ನಕಲಿ ದಾಖಲೆ ಸೃಷ್ಟಿಸಲಾಗಿದೆ. ಈ ಸಂಬಂಧ ಅಗತ್ಯ ಮಾಹಿತಿ ನೀಡುವಂತೆ ಕೋರಿದ್ದು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಚುನಾವಣೆಯ ನಂತರ ಮಾಹಿತಿ ನೀಡಲಿದ್ದಾರೆ ಎಂದು ಜಂಟಿ ಸಮಿತಿಯ ಪರ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ವರದಿಯಲ್ಲಿ ತಿಳಿಸಿದೆ ಎಂದು ಅರ್ಜಿದಾರರ ಪರ ವಕೀಲ ಪಿ.ರಾಮಪ್ರಸಾದ್‌ ನ್ಯಾಯಪೀಠಕ್ಕೆ ತಿಳಿಸಿದರು.

ಸಮಿತಿಯು ಕ್ರಮ ಕೈಗೊಂಡ ಕುರಿತು ವರದಿ ಸಲ್ಲಿಸಬೇಕು ಎಂದು ಸೂಚಿಸಿರುವ ಹಸಿರು ಪೀಠವು, ಅಗತ್ಯ ಶಿಸ್ತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಹಾಗೂ ಇತರ ಪ್ರಾಧಿಕಾರಗಳು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಹಾಯ– ಸಹಕಾರ ನೀಡಬೇಕು. ಜಲ ಮೂಲಗಳಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಅಪರಾಧ ಪ್ರಕರಣಗಳನ್ನು ದಾಖಲಿಸಬೇಕು ಎಂದು ಪೀಠವು ಇದೇ ವೇಳೆ ನಿರ್ದೇಶನ ನೀಡಿದೆ.

ಅಕ್ರಮ ಜನವಸತಿ ತೆರವಿಗೆ ಹಾಗೂ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನು ಬಂದ್‌ ಮಾಡಲು ಕ್ರಮ ಕೈಗೊಳ್ಳುವುದಲ್ಲದೆ, ಕೆರೆಯ ಪರಿಸರ ಪುನಶ್ಚೇತನಕ್ಕೆ ಅಗತ್ಯವಿರುವ ಪರಿಹಾರ ಮಾರ್ಗೋಪಾಯ ಕಂಡುಕೊಳ್ಳಬೇಕು. ಅರ್ಜಿದಾರರು ಸೂಚಿಸುವ ಎಲ್ಲ ರೀತಿಯ ಸಂರಕ್ಷಣಾ ಪ್ರಕ್ರಿಯೆಯನ್ನು ಚಾಚೂತಪ್ಪದೆ ಕೈಗೆತ್ತಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.

ಕೈಕೊಂಡ್ರಳ್ಳಿ ಕೆರೆಯ ಬಫರ್‌ ವಲಯದ ನಿಯಮ ಹಾಗೂ ಕುಡಿಯುವ ನೀರು, ಗಾಳಿ ಮತ್ತು ಪರಿಸರ ಕಾಯ್ದೆಗಳ ಉಲ್ಲಂಘನೆ ಆಗಿರುವ ಕುರಿತು ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಪೀಠವು, ಜಂಟಿ ಸಮಿತಿ ರಚಿಸುವ ಮೂಲಕ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಕಳೆದ ಮಾರ್ಚ್‌ 11ರಂದು ಸೂಚಿಸಿತ್ತು.

ಶ್ರೀನಿವಾಸ ರೆಡ್ಡಿ ಅವರ ಪುತ್ರ ರಮೇಶ್‌ಕುಮಾರ್‌ ಎಂಬುವವರು ಕೈಕೊಂಡ್ರಳ್ಳಿ ಕೆರೆಗೆ ನೀರು ಹರಿಸುವ ಪ್ರಮುಖ ರಾಜ ಕಾಲುವೆಯನ್ನು ಒತ್ತುವರಿ ಮಾಡಿ, ಅಕ್ರಮ ಜನವಸತಿ ಸೌಲಭ್ಯ ಕಲ್ಪಿಸಿದ್ದಾರೆ. ನೂರಾರು ಹಂದಿಗಳನ್ನು ಸಾಕಿಕೊಂಡಿದ್ದರಿಂದ ಕೆರೆಯ ಪರಿಸರ ಹಾಳಾಗುತ್ತಿದೆ. ಅಂತರ್ಜಲದ ಮೇಲೆ ಪ್ರತಿಕೂಲ ಪ್ರಭಾವ ಬೀರುವ, ಚರ್ಮ ರೋಗಕ್ಕೆ ಕಾರಣವಾಗುವ ಕಲುಷಿತ ನೀರನ್ನು ಕೆರೆಗೆ ಹರಿಸಲಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದರು.

ಕೈಕೊಂಡ್ರಳ್ಳಿ ಕೆರೆಯ ಪೂರ್ವ ಭಾಗದಲ್ಲಿರುವ ಬಫರ್‌ ವಲಯದ ನಿಯಮಉಲ್ಲಂಘಿಸುವ ಮೂಲಕ ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡಲಾಗಿದೆ. ಕಸವನಹಳ್ಳಿ ಕೆರೆಯ ಹೆಚ್ಚುವರಿ ನೀರು ಕೈಕೊಂಡ್ರಹಳ್ಳಿ ಕೆರೆಗೆ ಸುಗಮವಾಗಿ ಹರಿದು ಹೋಗಲು ನೈಸರ್ಗಿಕವಾಗಿ ಇರುವ ಸಂಪರ್ಕ ಕಾಲುವೆಗಳಿದ್ದ ಜಾಗೆಯನ್ನೇ ಕಬಳಿಸಿ ಜನವಸತಿಗೆ ಬಳಸಲಾಗಿದೆ ಎಂದೂ ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT