ನಿತೇಶ್ ಕನ್‌ಸ್ಟ್ರಕ್ಷನ್‌’ ಮೇಲೆ ಸಿಸಿಬಿ ದಾಳಿ

ಮಂಗಳವಾರ, ಏಪ್ರಿಲ್ 23, 2019
31 °C
ಫ್ಲ್ಯಾಟ್ ನೀಡುವುದಾಗಿ 50ಕ್ಕೂ ಹೆಚ್ಚು ಮಂದಿಗೆ ವಂಚಿಸಿದ ಆರೋಪ

ನಿತೇಶ್ ಕನ್‌ಸ್ಟ್ರಕ್ಷನ್‌’ ಮೇಲೆ ಸಿಸಿಬಿ ದಾಳಿ

Published:
Updated:
Prajavani

ಬೆಂಗಳೂರು: ಕಡಿಮೆ ಬೆಲೆಗೆ ಫ್ಲ್ಯಾಟ್‌ಗಳನ್ನು ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪದಡಿ ‘ನಿತೇಶ್ ಕನ್‌ಸ್ಟ್ರಕ್ಷನ್‌’ ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕರ ಕಚೇರಿ ಹಾಗೂ ಎರಡು ಮನೆಗಳ ಮೇಲೆ ಮಂಗಳವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಭೂವ್ಯವಹಾರಕ್ಕೆ ಸಂಬಂಧಿಸಿದ ಕೋಟ್ಯಂತರ ರೂಪಾಯಿ ಮೌಲ್ಯದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

‘ಎಂ.ಜಿ.ರಸ್ತೆಯ ಟ್ರಿನಿಟಿ ಜಂಕ್ಷನ್‌ ಬಳಿ ಕಚೇರಿ ಹೊಂದಿರುವ ಸಂಸ್ಥೆಯ ಮಾಲೀಕ ನಿತೇಶ್ ಶೆಟ್ಟಿ, ಸಂಜಯನಗರ ಹಾಗೂ ಲ್ಯಾವೆಲ್ಲೆ ರಸ್ತೆಯಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ. ಇವರ ಕಂಪನಿ ವಿರುದ್ಧ 15ಕ್ಕೂ ಹೆಚ್ಚು ಮಂದಿ ದೂರು ಕೊಟ್ಟಿದ್ದರು. ಹೀಗಾಗಿ, ಮಧ್ಯಾಹ್ನ 2 ಗಂಟೆಗೆ ದಾಳಿ ನಡೆಸಿದ್ದೇವೆ. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದರು.

‘ಈ ಸಂಸ್ಥೆಯ ಅಧಿಕಾರಿಗಳು ವಿಲ್ಲಾ ಹಾಗೂ ಫ್ಲ್ಯಾಟ್‌ಗಳನ್ನು ನೀಡುವುದಾಗಿ 50ಕ್ಕೂ ಹೆಚ್ಚು ಮಂದಿಯಿಂದ ₹ 120 ಕೋಟಿಯಷ್ಟು ಹಣ ಸಂಗ್ರಹಿಸಿದೆ. ಈಗ ಫ್ಲ್ಯಾಟ್‌ಗಳನ್ನು ಕೊಡದೆ, ಹಣವನ್ನೂ ಮರಳಿಸಿದೆ ಸತಾಯಿಸುತ್ತಿದ್ದಾರೆ’ ಎಂದು ಜಕ್ಕೂರು ನಿವಾಸಿ ಚೈತನ್ಯ ಶಿರೂರ್ ಆರೋಪಿಸಿದ್ದಾರೆ.

ಇನ್ನೊಂದು ಎಫ್‌ಐಆರ್: ‘ಲ್ಯಾಪ್‌ಟಾಪ್‌ಗಳನ್ನು ಬಾಡಿಗೆ ಪಡೆದು ಹಣ ಪಾವತಿಸದೆ ವಂಚಿಸಿದ ಆರೋಪದಡಿಯೂ ಸಂಸ್ಥೆಯ ಮಾಲೀಕ ನಿತೇಶ್ ಶೆಟ್ಟಿ, ಅಲ್ಲಿನ ಅಧಿಕಾರಿಗಳಾದ ಅರುಣ್ ಕುಮಾರ್ ಹಾಗೂ ಗಣೇಶ್ ವಿರುದ್ಧ ಹಲಸೂರು ಠಾಣೆಯಲ್ಲಿ ಮಾರ್ಚ್ 26ರಂದು ಎಫ್‌ಐಆರ್ ದಾಖಲಾಗಿದೆ.

ಈ ಸಂಬಂಧ ‘ಡಿಎನ್‌ಎಸ್ ಕಂಪ್ಯೂಟರ್ಸ್’ ಮಾಲೀಕ ಗೋವಿಂದಸ್ವಾಮಿ ದೂರು ಕೊಟ್ಟಿದ್ದರು. ‘ಲ್ಯಾ‍ಪ್‌ಟಾಪ್‌ಗಳ ಬಾಡಿಗೆ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದರು. ಆ ಪ್ರಕರಣದ ತನಿಖೆಯೂ ಶುರುವಾಗಿದೆ ಎಂದು ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !