ಸೋಮವಾರ, ಏಪ್ರಿಲ್ 19, 2021
23 °C
ರಾಜೀವ್ ಗಾಂಧಿ ವಿಶ್ವವಿದ್ಯಾಲಯ ತಾಕೀತು

ಇತರ ವಿವಿಗಳಲ್ಲಿ ಆರೋಗ್ಯ ಕೋರ್ಸ್‌ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ಮತ್ತು ಅವುಗಳಿಗೆ ಒಳಪಟ್ಟ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಆರೋಗ್ಯ ವಿಜ್ಞಾನ ಕೋರ್ಸ್‌ಗಳನ್ನು ಬೋಧಿಸುವುದಕ್ಕೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಆಕ್ಷೇಪ ವ್ಯಕ್ತಪಡಿಸಿದೆ.

ಸದ್ಯ ಬೆಂಗಳೂರು, ಮಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಆಡಿಯೊ ಆ್ಯಂಡ್‌ ಸ್ಪೀಚ್‌ ಪೆಥಾಲಜಿ ಕೋರ್ಸ್‌ ಇದೆ.ಇದೀಗ ಈ ಕೋರ್ಸ್‌ಗಳನ್ನು ರದ್ದುಪಡಿಸಲು ಆರ್‌ಜಿಯುಎಚ್‌ಎಸ್‌ ಕೇಳಿಕೊಂಡಿದೆ.

‘ಈಗಾಗಲೇ ಮಾಡಲಾದ ಕಾಯ್ದೆಯಂತೆ ಆರೋಗ್ಯಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಆರೋಗ್ಯ ವಿಶ್ವವಿದ್ಯಾಲಯ ಮಾತ್ರ ನೀಡಬೇಕು. ಆದರೆ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಅದನ್ನು ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ’ ಎಂದು ಕುಲಪತಿ ಡಾ.ಸಚ್ಚಿದಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂದಿನ ಶೈಕ್ಷಣಿಕ ವರ್ಷದಿಂದ ಆರೋಗ್ಯ ವಿಶ್ವವಿದ್ಯಾಲಯದಿಂದಲೂ ಆಡಿಯೊ ಆ್ಯಂಡ್‌ ಸ್ಪೀಚ್‌ ಪೆಥಾಲಜಿ ಕೋರ್ಸ್‌ ಆರಂಭವಾಗಲಿದೆ. ಇದಕ್ಕಾಗಿಯೇ ಇತರ ವಿಶ್ವವಿದ್ಯಾಲಯಗಳು ಈ ಕೋರ್ಸ್‌ ನೀಡದಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಹಾಲಿ ಬ್ಯಾಚ್‌ಗಳಿಗೆ ವಿಶ್ವವಿದ್ಯಾಲಯಗಳು ಪದವಿ ನೀಡಲಿ, ಆದರೆ ಮುಂದಿನ ವರ್ಷದಿಂದ ಈ ಕೋರ್ಸ್‌ಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಕುಲಪತಿ ಸಚ್ಚಿದಾನಂದ ತಿಳಿಸಿದರು.

ಆದರೆ ಬೆಂಗಳೂರು ವಿಶ್ವವಿದ್ಯಾಲಯ ಈ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ವಿಧಿವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಆರಂಭಿಸಲಿರುವುದನ್ನು ಪುನರುಚ್ಚರಿಸಿದೆ. ಈ ಕೋರ್ಸ್‌ಗೆ ಸಹ ತೆರೆ ಬೀಳುವ ಲಕ್ಷಣ ಕಾಣಿಸುತ್ತಿದೆ.

ಎಂಬಿಬಿಎಸ್: ನಾಲ್ಕು ವರ್ಷಗಳಲ್ಲಿ ವಿದ್ಯಾರ್ಥಿನಿಯರ ಪ್ರವೇಶವೇ ಅಧಿಕ

ಈ ಶೈಕ್ಷಣಿಕ ವರ್ಷದ ಎಂಬಿಬಿಎಸ್‌ ಕೋರ್ಸ್‌ಗೆ ಪ್ರವೇಶಾತಿ ಸದ್ಯ ಪ್ರಗತಿಯಲ್ಲಿದ್ದು, ಕಳೆದ ನಾಲ್ಕು ವರ್ಷಗಳನ್ನು ಗಮನಿಸಿದರೆ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿ ಪ್ರವೇಶಾತಿ ಪಡೆದಿದ್ದಾರೆ.

2015–16ರಲ್ಲಿ 2,544 ವಿದ್ಯಾರ್ಥಿಗಳು ಹಾಗೂ 2,524 ವಿದ್ಯಾರ್ಥಿನಿಯರು ಎಂಬಿಬಿಎಸ್‌ ಪ್ರವೇಶ ಪಡೆದಿದ್ದರು. 2016–17ರಲ್ಲಿ 3,282 ವಿದ್ಯಾರ್ಥಿಗಳು, 3,329 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದರು. ಅಲ್ಲಿಂದಲೇ ವಿದ್ಯಾರ್ಥಿನಿಯರು ಅಧಿಕ ಪ್ರಮಾಣದಲ್ಲಿ ಕಾಲೇಜು ಸೇರುವ ಪರಂಪರೆ ಆರಂಭವಾಗಿತ್ತು. 2017–18ರಲ್ಲಿ 3,397 ವಿದ್ಯಾರ್ಥಿಗಳು, 3,669 ವಿದ್ಯಾರ್ಥಿನಿಯರು ಹಾಗೂ 2018–19ರಲ್ಲಿ 3,029 ವಿದ್ಯಾರ್ಥಿಗಳು, 3,164 ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸಿದ್ದಾರೆ.

‘ನೀಟ್‌ನಲ್ಲಿ ಅಧಿಕ ಅಂಕ ಗಳಿಸುವವರು ವಿದ್ಯಾರ್ಥಿನಿಯರು. ಹೀಗಾಗಿ ಸಜವಾಗಿಯೇ ಅವರೇ ಅಧಿಕ ಸಂಖ್ಯೆಯಲ್ಲಿ ವೈದ್ಯಕೀಯ ಕಾಲೇಜು ಸೇರುವುದು ಸಾಧ್ಯವಾಗುತ್ತಿದೆ’ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಸಚ್ಚಿದಾನಂದ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು