ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯವಾಗಿ ರೇಬಿಸ್ ನಿರೋಧಕ ಲಸಿಕೆ ಖರೀದಿಗೆ ಸೂಚನೆ

2 ಬಾರಿ ಟೆಂಡರ್ ಕರೆದರೂ ಆಸಕ್ತಿ ತೋರದ ಪೂರೈಕೆದಾರರು
Last Updated 16 ಜುಲೈ 2019, 19:39 IST
ಅಕ್ಷರ ಗಾತ್ರ

ಬೆಂಗಳೂರು: ರೇಬಿಸ್ ನಿರೋಧಕ ಲಸಿಕೆ ಖರೀದಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ, ಸ್ಥಳೀಯವಾಗಿಯೇ ಈ ಲಸಿಕೆ ಖರೀದಿಸಿ, ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ಕರ್ನಾಟಕ ಸ್ಟೇಟ್‌ ಡ್ರಗ್ಸ್‌ ಲಾಜಿಸ್ಟಿಕ್ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ (ಕೆಡಿಎಲ್ ಡಬ್ಲ್ಯುಎಸ್) ಸುತ್ತೋಲೆ ಹೊರಡಿಸಿದೆ.

‘ರೇಬಿಸ್ ನಿರೋಧಕ ಲಸಿಕೆ (ಎಆರ್‌ವಿ) ಖರೀದಿಗೆ ಈಗಾಗಲೇ ಎರಡು ಬಾರಿ ಟೆಂಡರ್ ಕರೆಯಲಾಗಿದೆ. ಯಾವುದೇ ಪೂರೈಕೆದಾರರು ಭಾಗವಹಿಸಿಲ್ಲ. ಹೀಗಾಗಿ ಲಸಿಕೆ ಕೊರತೆ ಎದುರಾಗಿದೆ. ಮರುಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು 4 ತಿಂಗಳು ಬೇಕಾಗುತ್ತದೆ. ಆದ್ದರಿಂದ ಸ್ಥಳೀಯವಾಗಿ ಲಸಿಕೆ ಖರೀದಿ ಅನಿವಾರ್ಯ.ಈಗಾಗಲೇ ಕೇರಳ ಸರ್ಕಾರದಿಂದ 10 ಸಾವಿರ ವಯಲ್ಸ್‌ಗಳನ್ನು ಪಡೆದು, ಜಿಲ್ಲೆಗಳಿಗೆ ವಿತರಿಸಲಾಗಿದೆ. ತಮಿಳುನಾಡು ಸರ್ಕಾರದಿಂದಲೂ ಎಆರ್‌ವಿ ಪಡೆಯುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಔಷಧ ನಿಯಂತ್ರಕರು ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರಚಿಕಿತ್ಸಕರು, ತಾಲ್ಲೂಕು ವೈದ್ಯಾಧಿಕಾರಿಗಳು, ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಲಭ್ಯವಿರುವ ಅನುದಾನದಲ್ಲಿ (ಇಂಜ್ ಆ್ಯಂಟಿ ರೇಬಿಸ್ ವ್ಯಾಕ್ಸಿನ್/ಇಂಜೆಕ್ಷನ್, 2.51ಯು 1 ಎಂಎಲ್ ) ಸ್ಥಳೀಯವಾಗಿ ಲಸಿಕೆ ಖರೀದಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಇದು ಸಾಧ್ಯವಾಗದಿದ್ದಲ್ಲಿ ಔಷಧ ನಿಯಂತ್ರಕರನ್ನು ಸಂಪರ್ಕಿಸಿ, ಯಾವ ವಿತರಕರಲ್ಲಿ ಲಸಿಕೆ ಲಭ್ಯವಿದೆ ಎಂಬ ಮಾಹಿತಿ ಪಡೆದು ನಿಯಮಾನುಸಾರ ಔಷಧ ಖರೀದಿಸಬೇಕು. ಚಿಕಿತ್ಸೆ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆಯಾ ಜಿಲ್ಲಾ ಆರೋಗ್ಯ ಸಂಸ್ಥೆಗಳುದಾಸ್ತಾನು ಲಭ್ಯತೆ ಕುರಿತ ವರದಿಯನ್ನು ಮೂರು ದಿನಗಳಲ್ಲಿಕೆಡಿಎಲ್ ಡಬ್ಲ್ಯುಎಸ್‌ಗೆ ಸಲ್ಲಿಸಬೇಕು. ತಪ್ಪಿದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT