ಬುಧವಾರ, ಏಪ್ರಿಲ್ 8, 2020
19 °C

‘ಭಾಷಾ ವಿಷಯಕ್ಕೂ ಸಮಯ ಕೊಡಿ’: ಫೋನ್‌–ಇನ್ ಕಾರ್ಯಕ್ರಮದಲ್ಲಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಭಾಷಾ ವಿಷಯಕ್ಕೆ ಪರೀಕ್ಷಾ ಸಮಯ ಕೇವಲ 2 ಗಂಟೆ ಇದೆ. ಈ ಸಮಯ ಸಾಕಾಗುವುದಿಲ್ಲ. ಬರೆಯಲು ನಮಗೆ ಸಮಯ ಬೇಕು ಅಲ್ಲವೇ? ನಮ್ಮಂತಹ ಹಳ್ಳಿಯವರಿಗೆ ಇಂಗ್ಲಿಷ್‌ ಕಷ್ಟ ಆಗುತ್ತದೆ. ಆದ್ದರಿಂದ ಬೇರೆ ವಿಷಯಗಳಿಗೆ ನೀಡುವಷ್ಟೇ ಸಮಯ ನೀಡಬೇಕು’ ಎಂದು ಕೊಪ್ಪಳದಿಂದ ಕರೆಮಾಡಿದ ಭಾಗ್ಯಶ್ರೀ ಮನವಿ ಮಾಡಿದರು.

‘ಅದು ಹಾಗಲ್ಲ. ಗಣಿತದ ಲೆಕ್ಕವನ್ನು ಬಿಡಿಸಲು, ವಿಜ್ಞಾನ ವಿಷಯದಲ್ಲಿ ಅನ್ವಯಿಕ ಪ್ರಶ್ನೆಗಳು ಇರುವುದರಿಂದ ಹೆಚ್ಚು ಸಮಯ ನೀಡಲಾಗಿದೆ. ಜೊತೆಗೆ ಪ್ರಶ್ನೆ ಪತ್ರಿಕೆಗಳು ಸುಲಭವಾಗಿ ಇರುತ್ತವೆ. ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್‌ ಬರುವುದಿಲ್ಲ, ಪಟ್ಟಣದವರಿಗೆ ಬರುತ್ತದೆ ಎಂದೆಲ್ಲ ಆಲೋಚನೆ ಮಾಡಬೇಡಿ. ಅಭ್ಯಾಸ ಮಾಡಿದರೆ, ಎಲ್ಲರಿಗೂ ಎಲ್ಲವೂ ಸುಲಭವಾಗುತ್ತದೆ’ ಎಂದು ಸಮಾಧಾನ ಪಡಿಸಿದರು.‌

ಇದನ್ನೂ ಓದಿ: ‘ಆಲ್‌ ದಿ ಬೆಸ್ಟ್‌ ಮಕ್ಕಳೇ. ಆತಂಕ ಬೇಡ, ಪರೀಕ್ಷೆ ಚೆನ್ನಾಗಿ ಬರೆಯಿರಿ’

‘ಈ ವಿಷಯ ಹಲವು ದಿನಗಳಿಂದ ಚರ್ಚೆ ಇದೆ. ಕಾಲಾವಕಾಶ ಹೆಚ್ಚಿಸುವಂತೆ ಬೇಡಿಕೆ ಬರುತ್ತಲೇ ಇದೆ. ಈ ಬಗ್ಗೆ ತಜ್ಞರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

ಬಾಲಿಕಾ ವಸತಿ ಸೌಲಭ್ಯ

‘ಹಿಂದುಳಿದ ಜಾತಿ/ ವರ್ಗ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿನಿಯರಿಗಾಗಿ ಇಲಾಖೆಯು ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯವು (ವಸತಿ ನಿಲಯ) ಸದಾ ತೆರೆದಿರುತ್ತದೆ. 6ನೇ ತರಗತಿಯಿಂದ 10ನೇ ತರಗತಿವರೆಗೆ ವಿದ್ಯಾರ್ಥಿನಿಯರು ಇಲ್ಲಿ ವಸತಿ ಸೌಲಭ್ಯ ಪಡೆಯಬಹುದಾಗಿದೆ. ವರ್ಷದ ಯಾವುದೇ ದಿನ ವಸತಿ ನಿಲಯವನ್ನು ಸೇರಿಕೊಳ್ಳಬಹುದು. ಇಲ್ಲಿ ಉತ್ತಮ ಸೌಕರ್ಯಗಳಿದ್ದು, ಟ್ಯೂಷನ್‌, ಯೋಗ, ಕರಾಟೆ, ಕಂಪ್ಯೂಟರ್‌ ತರಬೇತಿ ಜತೆಗೆ ವಾರಕ್ಕೊಮ್ಮೆ ಆರೋಗ್ಯ ತಪಾಸಣೆಯನ್ನೂ ಮಾಡಲಾಗುತ್ತದೆ’ ಎಂದು ಸುಮಂಗಲಾ ಮಾಹಿತಿ ನೀಡಿದರು.

ವಿಶೇಷ ಗುರುತಿಗೆ ಸ್ಟಿಕ್ಕರ್‌

ವಿಶೇಷ ಮಕ್ಕಳ ಉತ್ತರ ಪತ್ರಿಕೆಗಳನ್ನು ಆ ಕ್ಷೇತ್ರದ ಅನುಭವಿ ಶಿಕ್ಷಕರೇ ಮೌಲ್ಯಮಾಪನ ಮಾಡಬೇಕು ಎಂಬ ಆಗ್ರಹವನ್ನು ಮೈಸೂರಿನ ಪದ್ಮನಾಭ ಮುಂದಿಟ್ಟರು.

ಇದಕ್ಕೆ ಉತ್ತರಿಸಿದ ನಿರ್ದೇಶಕಿ, ‘ವಿಶೇಷ ಮಕ್ಕಳ ಉತ್ತರ ಪತ್ರಿಕೆಗಳಿಗೆ ವಿಶೇಷ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತದೆ. ಮೌಲ್ಯಮಾಪಕರಿಗೆ ಪ್ರತ್ಯೇಕ ಮಾನದಂಡ ನೀಡಲಾಗಿರುತ್ತದೆ. ಈ ಮಕ್ಕಳ ಪರೀಕ್ಷೆಗೆ ತರಬೇತಿ ಪಡೆದ ಶಿಕ್ಷಕರೇ ಇದ್ದಾರೆ. ಹಾಗಾಗಿ ಆತಂಕ ಬೇಡ’.

ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೊಂದಲಗಳಿಗೆ ಫಟಾಪಟ್‌ ಪರಿಹಾರ

‘ನನ್ನ ಮಗಳಿಗೆ ಡಿಸ್ಲೆಕ್ಸಿಯಾ ಸಮಸ್ಯೆ ಇದೆ. ಅವಳಿಗೆ ಗೈಡ್‌ ಬೇಕಾಗಿರುವುದಾಗಿ ಹೇಳಿದ್ದಾರೆ. ಬರೆಯಲು ಗೈಡ್‌ ಸಹಾಯ ತೆಗೆದುಕೊಳ್ಳಬಹುದೇ‘ ಎಂಬುದು ಬೆಂಗಳೂರಿನ ಲಕ್ಷ್ಮೀ ಅವರ ಪ್ರಶ್ನೆ. ‘ಡಿಸ್ಲೆಕ್ಸಿಯಾ ಸಮಸ್ಯೆಯುಳ್ಳ ವಿದ್ಯಾರ್ಥಿಯು ಪಶ್ನೆಪತ್ರಿಕೆಯನ್ನು ಓದಲು ಮಾತ್ರ ಗೈಡ್‌ ಸಹಾಯ ಪಡೆಯಬಹುದು. ಬರೆಯಲು ಸಹಾಯದ ಅವಕಾಶ ಇಲ್ಲ‘ ಎಂದು ಸುಮಂಗಲಾ ಉತ್ತರಿಸಿದರು. 

ಚಿತ್ರದುರ್ಗದ ಪೋಷಕರೊಬ್ಬರು ‘ಅಂಗವಿಕಲ ಮಕ್ಕಳಿಗೆ ಪ್ರತ್ಯೇಕ ಪ್ರವೇಶಪತ್ರ ಇರುತ್ತದೆಯೇ’ ಎಂದು ಕೇಳಿದರು. ‘ಪ್ರತ್ಯೇಕ ಪ್ರವೇಶಪತ್ರ ಇಲ್ಲ. ಈ ಮಕ್ಕಳಿಗಾಗಿ ನೀಡಿರುವ ಪಠ್ಯ ವಿಷಯವನ್ನು ಪ್ರವೇಶಪತ್ರದಲ್ಲಿ ನೀಡಲಾಗಿರುತ್ತದೆ ಅಷ್ಟೆ’ ಎಂಬ ಉತ್ತರ ಅವರಿಗೆ ಸಿಕ್ಕಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು