ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ನಜ್ಜುಗುಜ್ಜಾಗಿಸಿದೆ ಪಬ್‌ಜಿ... ಮಕ್ಕಳ ವರ್ತನೆಗೆ ಪೋಷಕರಲ್ಲಿ ವಿಪರೀತ ಆತಂಕ

Last Updated 10 ಫೆಬ್ರುವರಿ 2019, 2:42 IST
ಅಕ್ಷರ ಗಾತ್ರ

ಬೆಂಗಳೂರು: ಲೀಗ್ ಆಫ್‌ ಲೆಜೆಂಡ್‌, ಕ್ಯಾಂಡಿ ಕ್ರಷ್‌, ಐವರಿ ವಾಚ್‌... ಇಂಥ ಹಲವು ಬಗೆಯ ಆನ್‌ಲೈನ್‌ ಆಟಗಳ ಬಳಿಕ ಪಬ್‌ಜಿ ಗೇಮ್‌ ನಗರದ ಯುವಕರನ್ನು ನರಕಕ್ಕೆ ತಳ್ಳುತ್ತಿದೆ.

‘ಶೂಟ್‌ ಹಿಮ್‌,’ ‘ಕಿಲ್‌ ಹಿಮ್‌...’ ಎಂಬ ಹಿಂಸೆಯ ಮಾತುಗಳು, ನಿದ್ರಾಹೀನತೆಯಿಂದ ಮಾನಸಿಕ ಸಮತೋಲನ ಕಳೆದುಕೊಂಡಿರುವುದು, ಅಸಹನೆ, ಮುಂತಾದ ಆರೋಗ್ಯ ಏರುಪೇರಾದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ.

ನಿಮ್ಹಾನ್ಸ್‌ನ ಷಟ್‌ ಕ್ಲಿನಿಕ್‌ ಈವ್ಯಸನ ಮುಕ್ತಗೊಳಿಸುವತ್ತ ಗಮನ ಕೇಂದ್ರೀಕರಿಸಿದೆ. ಈ ವ್ಯಸನಕ್ಕೊಳಗಾದವರಲ್ಲಿ 15ರಿಂದ 20ರ ಹರೆಯದ ಗಂಡುಮಕ್ಕಳೇ ಹೆಚ್ಚು ಇದ್ದಾರೆ. 2014ರಲ್ಲಿ ಈ ಕ್ಲಿನಿಕ್‌ ಆರಂಭವಾದಾಗ ವಾರದಲ್ಲಿ ಒಂದು ಅಥವಾ ಎರಡು ಪ್ರಕರಣಗಳು ಬರುತ್ತಿದ್ದವು. ಈಗ 6ರಿಂದ 8ಕ್ಕೆ ಏರಿದೆ ಎನ್ನುತ್ತಾರೆ ಷಟ್‌ ಕ್ಲಿನಿಕ್‌ನ ಮುಖ್ಯಸ್ಥ ಡಾ.ಮನೋಜ್‌ ಕುಮಾರ್‌ ಶರ್ಮಾ.

‘ನಗರದ ಮನೋರೋಗ ಚಿಕಿತ್ಸಕರ ಬಳಿಯೂ ಇಂಥ ಪ್ರಕರಣಗಳು ಹೆಚ್ಚು ಬರುತ್ತಿವೆ. ಆದರೆ, ಈ ಪ್ರಮಾಣದ ಬಗ್ಗೆ ಲೆಕ್ಕವಿಟ್ಟವರಿಲ್ಲ. ಏಕೆಂದರೆ ಯಾರೂ ಕೂಡಾ ಇದನ್ನು ಒಂದು ಸಮಸ್ಯೆ ಎಂದು ಪರಿಗಣಿಸಿಯೇ ಇಲ್ಲ’ ಎನ್ನುತ್ತಾರೆ ಡಾ.ಮನೋಜ್‌.

‘ಸಮಸ್ಯೆ ಮುಂದೆ ವ್ಯಸನವಾಗಿ ಇನ್ನಷ್ಟು ಗಂಭೀರವಾಗುವ ಅಪಾಯವನ್ನು ಹಲವರು ಗಣನೆಗೇ ತೆಗೆದುಕೊಳ್ಳುವುದಿಲ್ಲ. ಇದೇ ಆಟದಲ್ಲಿ ಗೆಲ್ಲುತ್ತಾ. ಮುಂದೆ ತಾವೇ ಗೇಮರ್‌ಗಳಾಗುವ, ಅದನ್ನೇ ವೃತ್ತಿಯಾಗಿ ಸ್ವೀಕರಿಸುವ ಮನೋಸ್ಥಿತಿಗೆ ಬದಲಾಗುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇತರ ಸಾಮಾಜಿಕ ಜಾಲತಾಣಗಳು, ಅಶ್ಲೀಲ ವಿಡಿಯೊ ವೀಕ್ಷಣೆ ಚಾಳಿ, ಈ ಸಮಸ್ಯೆ ಇನ್ನಷ್ಟು ಉಲ್ಬಣವಾಗಲು ನೀರೆರೆಯುತ್ತಿದೆ’ ಎಂದು ಅವರು ತಿಳಿಸಿದರು.

ಸರದಿಯಲ್ಲಿದೆ ಯೂಟ್ಯೂಬ್‌, ನೆಟ್‌ಫ್ಲಿಕ್ಸ್‌: ‘ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಿಸುವ ಚಟ ಅಂಟಿಸಿಕೊಂಡ ಇಬ್ಬರು, ಯೂಟ್ಯೂಬ್‌ ವ್ಯಸನಕ್ಕೊಳಗಾದ ಮೂವರನ್ನು ಚಿಕಿತ್ಸೆಗೊಳಪಡಿಸುತ್ತಿದ್ದೇವೆ. ವಿಪರೀತ ವಿಡಿಯೊ ವೀಕ್ಷಣೆ, ಹೊಸ ವಿಡಿಯೊಗಳ ಹುಡುಕಾಟದಲ್ಲಿ ಕಾಲಕಳೆಯುವುದು ಯುವಜನರ ಜೈವಿಕ ಗಡಿಯಾರವನ್ನು ಏರುಪೇರುಗೊಳಿಸುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಚಿಕಿತ್ಸೆಯೇನು?: ‘ಸಮಸ್ಯೆಯ ಅವಲೋಕನ ಮಾಡಬೇಕು. ಸಮತೋಲಿತ ಮತ್ತು ಆರೋಗ್ಯಕರವಾಗಿ ತಂತ್ರಜ್ಞಾನವನ್ನು ಬಳಸುವ ಬಗ್ಗೆ ಅವರಿಗೆ ತಿಳಿಹೇಳಬೇಕು. ಜೀವನಶೈಲಿಯನ್ನು ಬದಲಾಯಿಸುವುದು ಸುಲಭವಲ್ಲ. ನಿದ್ರೆಗೆ ಅಣಿಯಾಗುವ ವೇಳೆಯಲ್ಲಿ ಆನ್‌ಲೈನ್‌ ಚಟುವಟಿಕೆ ಸ್ಥಗಿತಗೊಳಿಸಬೇಕು. ಆಟವಾಡುವ ಸಮಯದಲ್ಲಿ ಕೆಲಕಾಲ ವಿರಾಮ ತೆಗೆದುಕೊಳ್ಳಬೇಕು. ಕ್ಷಣಕಾಲ ಕಣ್ಣುಗಳಿಗೆ ವಿಶ್ರಾಂತಿ ಕೊಡಬೇಕು. ಮಣಿಕಟ್ಟು ತಿರುಗಿಸುವುದು, ಕತ್ತು ತಿರುಗಿಸುವ ಲಘು ವ್ಯಾಯಾಮಗಳನ್ನು ಮಾಡಬೇಕು. ಹೀಗೆ ದೈಹಿಕ ವ್ಯಾಯಾಮಕ್ಕೆ ಒತ್ತು ಕೊಡಬೇಕು. ಕುಟುಂಬದೊಂದಿಗೆ ಕಾಲ ಕಳೆಯುವುದು ಇತ್ಯಾದಿ ಚಟುವಟಿಕೆಯಿಂದ 3ರಿಂದ 6 ತಿಂಗಳ ಅವಧಿಯಲ್ಲಿ ನಿಧಾನಗತಿಯಲ್ಲಿ ಜೀವನ ಶೈಲಿಯನ್ನು ಬದಲಾಯಿಸಬಹುದು' ಎನ್ನುತ್ತಾರೆ ಮನೋಜ್‌.

ಏನಿದು ಪಬ್‌ಜಿ ಗೇಮ್‌?

ಇದೊಂದು ಯುದ್ಧ ಭೂಮಿಯಲ್ಲಿ ನಡೆಯುವ ಆಟ. ಆಟಗಾರನಿಗೆ ಅರಿವಿಲ್ಲದ ಯುದ್ಧಭೂಮಿಯಲ್ಲಿ ನಡೆಯುವ ಹೋರಾಟ (ಪ್ಲೇಯರ್ಸ್‌ ಅನ್‌ನೋನ್ಸ್‌ ಬ್ಯಾಟಲ್‌ ಗ್ರೌಂಡ್ಸ್‌) ಆಟಗಾರರು ವಿಮಾನದ ಮೂಲಕ ಸಾಗಿ ದ್ವೀಪದಂಥ ಪುಟ್ಟ ಯುದ್ಧ ಭೂಮಿಯಲ್ಲಿ ಇಳಿಯುತ್ತಾರೆ. ತಮ್ಮ ವೈರಿಗಳನ್ನು ಸದೆಬಡಿಯುತ್ತಾ ಮುಂದೆ ಹೋಗುತ್ತಾರೆ.

ಭ್ರಮಾ ಜಗತ್ತಿನಲ್ಲಿ ಸಾಗುವ ಯುದ್ಧ ಒಂದು ಪುಟ್ಟ ಪ್ರದೇಶದಿಂದ ಜಗತ್ತಿನಾದ್ಯಂತ ಹಬ್ಬಬಹುದು. ಅಥವಾ ಅಪರಿಚಿತ ಪ್ರದೇಶಕ್ಕೇ ಸೀಮಿತಗೊಳ್ಳಬಹುದು. ಶಸ್ತ್ರಾಸ್ತ್ರಗಳು, ವಾಹನಗಳು, ಚಿತ್ರ ವಿಚಿತ್ರ ಸನ್ನಿವೇಶಗಳು ಪರದೆಯ ಮೇಲೆ ಮೂಡುತ್ತವೆ. ಯುದ್ಧ ಕೌಶಲದ ಮೇಲೆ ಅಂಕಗಳು, ‘ಬಹುಮಾನ’ಗಳು ಸಿಗುತ್ತವೆ. ಗಂಟೆಗಟ್ಟಲೆ ಕಾಲಕಳೆಯುವಂತೆ ಮಾಡುತ್ತದೆ ಈ ಆಟ.

***

ಮಕ್ಕಳ ವರ್ತನೆ ಪೋಷಕರಲ್ಲಿ ವಿಪರೀತ ಆತಂಕ ಸೃಷ್ಟಿಸಿದೆ. ಇಂಥ ಮಕ್ಕಳ ಕಾಳಜಿ ವಹಿಸುವುದು ತ್ರಾಸದಾಯಕ. ಈ ನಿಟ್ಟಿನಲ್ಲಿ ಪೋಷಕರಲ್ಲೂ ಅರಿವು ಮೂಡಿಸುತ್ತಿದ್ದೇವೆ.

- ಡಾ.ಮನೋಜ್‌ ಕುಮಾರ್‌ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT