ಕೆರೆಯಂಗಳದಲ್ಲೇ ಮ್ಯಾನ್‌ಹೋಲ್‌!

7
ವರದಿ ಕೇಳಿದ ಲೋಕಾಯುಕ್ತ

ಕೆರೆಯಂಗಳದಲ್ಲೇ ಮ್ಯಾನ್‌ಹೋಲ್‌!

Published:
Updated:
Deccan Herald

ಬೆಂಗಳೂರು: ಯಲಹಂಕದ ಪುಟ್ಟೇನಹಳ್ಳಿ ಕೆರೆಯಂಗಳದಲ್ಲೇ ಜಲಮಂಡಳಿ ನಿರ್ಮಿಸಿರುವ ಮ್ಯಾನ್‌ಹೋಲ್‌ಗಳಿಂದ ಅದರ ನೈಜ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ. ಕೆರೆಯ ಒಡಲಿಗೆ ಕೊಳಚೆ ನೀರು ಸೇರುತ್ತಿದೆ ಎಂದು ಸ್ಥಳೀಯರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ದಾರೆ.

ಈ ಕೆರೆ ಅಭಿವೃದ್ಧಿಯ ಸಂಪೂರ್ಣ ವರದಿ ನೀಡುವಂತೆ ಲೋಕಾಯುಕ್ತ ಸಂಸ್ಥೆ ವರದಿ ಕೇಳಿದೆ. ಅಲ್ಲದೆ ಕೆರೆಯನ್ನು ಪರಿ
ಶೀಲಿಸಲು ಲೋಕಾಯುಕ್ತರು ನಿರ್ಧರಿಸಿದ್ದಾರೆ. ಕೆರೆಯಂಗಳದಲ್ಲಿ ಮ್ಯಾನ್‌ಹೋಲ್‌ ನಿರ್ಮಿಸುವ ಮೂಲಕ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಆದೇಶಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸ್ಥಳೀಯರು ಮತ್ತು ಪರಿಸರ ತಜ್ಞರ ಆರೋಪ. ಪಕ್ಷಿಗಳ ಸಂರಕ್ಷಣೆಗಾಗಿ ಮೀಸಲಿಟ್ಟಿರುವ ಈ ಕೆರೆ ವಿರೂಪಗೊಳ್ಳುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜಲಮಂಡಳಿ ಕೆರೆಯ ಪರಿಧಿಯಲ್ಲಿಯೇ ಕೊಳಚೆ ನೀರು ಹರಿಯಲು 12 ಅಡಿ ಅಗಲದ ಕಾಲುವೆ ಮತ್ತು ಒಳಚರಂಡಿ ಮಾರ್ಗವನ್ನು ನಿರ್ಮಿಸಿದೆ. ಕೆರೆಯ ಜಾಗದಲ್ಲೇ ಈ ಹಿಂದೆ ಆರು ಮ್ಯಾನ್‌ಹೋಲ್‌ಗಳಿದ್ದವು. ಈಗ ಮತ್ತೆ ಒಂಬತ್ತನ್ನು ಕಟ್ಟಲಾಗಿದೆ.

‘ಒತ್ತುವರಿಯಿಂದ ಕೆರೆ ಪ್ರದೇಶ ಕುಗ್ಗಿದೆ. ಕೆರೆಯ ಒಡಲಿಗೆ ಕೊಳಚೆ ನೀರು ಸೇರುವುದನ್ನು ತಡೆಯುತ್ತಿಲ್ಲ. ಈ ನೀರಿನೊಂದಿಗೆ ಕಸವು ಹರಿದು ಬರುತ್ತಿರುವುದರಿಂದ ಕೆರೆಯಲ್ಲಿ ಹೂಳು ಹೆಚ್ಚುತ್ತಿದೆ’ ಎಂದು ಪುಟ್ಟೇನಹಳ್ಳಿ ಕೆರೆ ಮತ್ತು ಪಕ್ಷಿಗಳ ಸಂರಕ್ಷಿತ ಪ್ರದೇಶ ಟ್ರಸ್ಟ್‌ನ ಅಧ್ಯಕ್ಷ ಕೆ.ಎಸ್‌.ಸಂಗುಣ್ಣಿ ದೂರಿದರು. 

‘ಕೆರೆಯ ಬಳಿಯ ಒಳಚರಂಡಿ ಮಾರ್ಗವನ್ನು ಸ್ಥಳಾಂತರಿಸಲು ಜಲಮಂಡಳಿ ಒಪ್ಪಿತ್ತು. ಈಗ ಮ್ಯಾನ್‌ಹೋಲ್‌ಗಳನ್ನು ನಿರ್ಮಿಸಿ ಮತ್ತೆ ತಪ್ಪುಮಾಡಿದೆ. ಕೆರೆಗಳ ಬದಿಯಲ್ಲೂ ಒಳಚರಂಡಿ ನಿರ್ಮಿಸಬಾರದು’ ಎಂದುಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸುಸ್ಥಿರ ತಂತ್ರಜ್ಞಾನ ಕೇಂದ್ರದ ಪ್ರಾಧ್ಯಾಪಕ ಎಚ್‌.ಎನ್‌.ಚಾಣಕ್ಯ ಅಭಿಪ್ರಾಯಪಟ್ಟರು. 

‘ಎಲ್ಲ ಮ್ಯಾನ್‌ಹೋಲ್‌ಗಳನ್ನು ತೆರವುಗೊಳಿಸುವಂತೆ ಜಲಮಂಡಳಿಗೆ ಸೂಚಿಸಲಾಗಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್‌ ತಿಳಿಸಿದರು. 

‘ಸಂರಕ್ಷಿತ ಪ್ರದೇಶಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನ್ವಯವಾಗುತ್ತದೆ. ಕೆರೆಯ ಸ್ವರೂಪವನ್ನು ಬದಲಿಸುವುದು ಕಾಯ್ದೆಯ ನಿಯಮಗಳ ಉಲ್ಲಂಘನೆ’ ಎಂದು ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವನಿ ಕುಮಾರ್‌ ವರ್ಮಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !