ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ನೇಮಕಾತಿ: ಪಾರದರ್ಶಕತೆಗೆ ಒತ್ತು

ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಂದರ್ಶನ ರದ್ದು; ಸುರೇಶ ಅಂಗಡಿ
Last Updated 17 ಡಿಸೆಂಬರ್ 2019, 15:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರೈಲ್ವೆ ನೇಮಕಾತಿ ಪಾರದರ್ಶಕವಾಗಿ ನಡೆಯುತ್ತದೆ. ಸಂದರ್ಶನ ರದ್ದು ಪಡಿಸುವ ಮೂಲಕ ಭ್ರಷ್ಟಾಚಾರ ನಿರ್ಮೂಲನ ಮಾಡಲಾಗಿದೆ. ಅಭ್ಯರ್ಥಿಗಳು ಅವಕಾಶದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಮಂಗಳವಾರ ರೈಲ್ವೆ ನೇಮಕಾತಿ ಮಂಡಳಿಯ ಸ್ಯಾಟ್‌ಲೈಟ್‌ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ 21 ವಲಯಗಳಿದ್ದು, ಈ ಮೊದಲು ಎಲ್ಲ ವಲಯಗಳಲ್ಲಿ ಪರೀಕ್ಷೆ ಬರೆಯಬಹುದಾಗಿತ್ತು. ಈಗ ಒಂದೇ ಕಡೆ ಬರೆಯಬೇಕು. ಎಲ್ಲವೂ ಕಂಪ್ಯೂಟರ್‌ಮಯವಾಗಿರುವುದರಿಂದ ಭ್ರಷ್ಟಾಚಾರ ಇಲ್ಲವಾಗಿದೆ’ ಎಂದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ನೇಮಕಾತಿ ಪಾರದರ್ಶಕವಾಗಿರುವುದರಿಂದ ಮಧ್ಯವರ್ತಿಗಳ ಮೊರೆ ಹೋಗಿ ಮೋಸಕ್ಕೊಳಗಾಗಬೇಡಿ. ಹುಬ್ಬಳ್ಳಿಯಲ್ಲಿಯೇ ಮಂಡಳಿಯ ಕಚೇರಿಯಾಗಿರುವುದರಿಂದ ಅಭ್ಯರ್ಥಿಗಳು ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ರೈಲ್ವೆ ಸರಕು ಸಾಗಾಣೆ ಪ್ರಮಾಣ ಶೇ 31 ರಷ್ಟಿದೆ. 2020ರ ವೇಳೆ ಶೇ 50 ರಷ್ಟು ಸರಕು ಸಾಗಾಣೆ ಗುರಿ ಹೊಂದಲಾಗಿದೆ. ಮುಂದಿನ 10 ವರ್ಷಗಳಲ್ಲಿ ರೈಲ್ವೆ ಅಭಿವೃದ್ಧಿಗೆ ₹ 50 ಲಕ್ಷ ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ, ‘ಇಲ್ಲಿ ಪೂರ್ಣ ಪ್ರಮಾಣದ ಮಂಡಳಿ ರಚನೆಯಾಗಬೇಕು. ನಾಲ್ಕು ಗಂಟೆಯಲ್ಲಿ ಹೋಗುವಂತಹ ಹುಬ್ಬಳ್ಳಿ–ಬೆಂಗಳೂರು ನಡುವೆ ತಡೆ ರಹಿತ ರೈಲು ಆರಂಭಿಸಬೇಕು. ಹುಬ್ಬಳ್ಳಿ–ಬೆಳಗಾವಿಗೆ ಕಿತ್ತೂರು ಮೂಲಕ ರೈಲು ಮಾರ್ಗವಾಗಬೇಕು. ಹುಬ್ಬಳ್ಳಿ–ಅಂಕೋಲಾ ಮಾರ್ಗಕ್ಕಿರುವ ಸಮಸ್ಯೆ ಪರಿಹರಿಸಬೇಕು’ ಎಂದರು.

‘ಉದ್ಯಮಿದಾರರು ಉತ್ಪನ್ನಗಳನ್ನ ರಫ್ತಿಗೆ ಗೋವಾ ಹಾಗೂ ಮುಂಬೈಗೆ ಹೋಗುವುದನ್ನು ತಪ್ಪಿಸಲು ಬೇಲಿಕೇರಿ ಬಂದರು ಅಭಿವೃದ್ಧಿ ಪಡಿಸಬೇಕು. ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಈ ಬಗ್ಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಹೇಳಿದರು.

ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್ ಸಿಂಗ್‌ ಮಾತನಾಡಿ, ಮಂಡಳಿ ಕಚೇರಿ ಆರಂಭವಾಗಿರುವುದರಿಂದ ಉತ್ತರ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನುಕೂಲ ಆಗಲಿದೆ. ಕನ್ನಡದಲ್ಲಿಯೇ ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ನೀಡಲಾಗುವುದು. ಈ ಮೊದಲು ಪ್ರಮಾಣಪತ್ರಗಳ ಪರಿಶೀಲನೆಗೆ ಬೆಂಗಳೂರಿಗೆ ಹೋಗಬೇಕಾಗುತ್ತಿತ್ತು. ಇನ್ನು ಮುಂದೆ ಇಲ್ಲಿಯೇ ಆಗಲಿದೆ’ ಎಂದರು.

ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌ ಮಾತನಾಡಿದರು. ರೈಲ್ವೆ ನೇಮಕಾತಿ ಮಂಡಳಿಯ ಚೇರ್ಮನ್‌ ಕಾಶಿ ವಿಶ್ವನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT