ಶುಕ್ರವಾರ, ಸೆಪ್ಟೆಂಬರ್ 20, 2019
22 °C

ರಸೆಲ್ ಮಾರುಕಟ್ಟೆ ಎದುರು ವಾಹನ ನಿಲುಗಡೆಗೆ ಅವಕಾಶ

Published:
Updated:
Prajavani

ಬೆಂಗಳೂರು: ಶಿವಾಜಿನಗರದ ರಸೆಲ್ ಮಾರುಕಟ್ಟೆ ಬಳಿ ವಾಹನಗಳ ನಿಲುಗಡೆ ನಿಷೇಧ ವಿರೋಧಿಸಿ ವ್ಯಾಪಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕೆ ಬಂದ ಶಾಸಕರು, ಪೊಲೀಸ್ ಅಧಿಕಾರಿಗಳು ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದರು.

ಅಂಗಡಿಗಳನ್ನು ಮುಚ್ಚಿ ಮಾರುಕಟ್ಟೆ ಎದುರು ಜಮಾಯಿಸಿದ ವ್ಯಾಪಾರಿಗಳು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. 

‘ದಿನಬಳಕೆ ವಸ್ತುಗಳು ಒಂದೇ ಕಡೆ ಸಿಗುವ ಸ್ಥಳ ಎಂದರೆ ರಸೆಲ್ ಮಾರುಕಟ್ಟೆ. ಮಾರುಕಟ್ಟೆ ಸುತ್ತಮುತ್ತ ಒತ್ತುವರಿಯನ್ನು ಬಿಬಿಎಂಪಿ ಅಧಿಕಾರಿಗಳು ತೆರವು ಮಾಡಿರುವುದು ಸ್ವಾಗತಾರ್ಹ ಕ್ರಮ. ಆದರೆ, ಅಂದಿನಿಂದ ವಾಹನ ನಿಲುಗಡೆ ನಿಷೇಧಿಸಿರುವುದು ಸರಿಯಲ್ಲ. ಇದರಿಂದಾಗಿ ವ್ಯಾಪಾರದ ಮೇಲೆ ಪರಿಣಾಮ ಬೀರಿದೆ. ರಂಜಾನ್ ಹಬ್ಬದ ಸಂದರ್ಭದಲ್ಲಿ ವ್ಯಾಪಾರವೇ ಇಲ್ಲವಾಗಿದೆ’ ಎಂದು ವರ್ತಕರು ಅಳಲು ತೋಡಿಕೊಂಡರು.

‘ವಾಹನ ನಿಲುಗಡೆಗೆ ‍ಪಾಲಿಕೆ ಅಧಿಕಾರಿಗಳು ಅನುಮತಿ ನೀಡಬೇಕು. ಇಲ್ಲದಿದ್ದರೆ ಮಾರುಕಟ್ಟೆಯಲ್ಲಿ ವ್ಯಾಪಾರ ಸ್ಥಗಿತಗೊಳಿಸಿ ರಸ್ತೆಯಲ್ಲೇ ವ್ಯಾಪಾರ ಆರಂಭಿಸಲಾಗುವುದು’ ಎಂದು ರಸೆಲ್ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಮೊಹಮದ್ ಇದ್ರೆಸ್‌ ಚೌಧರಿ ಎಚ್ಚರಿಸಿದರು.

ಬಳಿಕ ಸ್ಥಳಕ್ಕೆ ಬಂದ ಶಾಸಕ ಆರ್‌. ರೋಷನ್ ಬೇಗ್‌, ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಪಿ. ಹರಿಶೇಖರನ್‌, ಪಾಲಿಕೆ ಸದಸ್ಯ ಶಕೀಲ್ ಅಹಮದ್ ಅವರು ವರ್ತಕರ ಸಮಸ್ಯೆ ಆಲಿಸಿದರು. ಮಾರುಕಟ್ಟೆ ಎದುರಿನ ಖಾಲಿ ಜಾಗದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದರು. ಬಳಿಕ ವರ್ತಕರು ಪ್ರತಿಭಟನೆ ಹಿಂದಕ್ಕೆ ಪಡೆದರು.

Post Comments (+)