ಗುರುವಾರ , ಏಪ್ರಿಲ್ 15, 2021
21 °C

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದಕ್ಕೆ ಬಡ್ತಿಗೆ ಶಿಕ್ಷಕರ ಸಂಘ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದಕ್ಕೆ ತಮ್ಮನ್ನು (6–8) ಸೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಸದಸ್ಯರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪದವಿ ವಿದ್ಯಾರ್ಹತೆ ಹಾಗೂ ಸೇವಾ ಅನುಭವ ಇರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ವೃಂದಕ್ಕೆ ಸೇರಿಸಬೇಕು. ಇಲ್ಲವಾದರೆ 6 ಮತ್ತು 7ನೇ ತರಗತಿಗೆ ಯಾವುದೇ ಕಾರಣಕ್ಕೂ ಬೋಧನೆ ಮಾಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

6ರಿಂದ 8ನೇ ತರಗತಿಗೆ ಬೋಧನೆ ಮಾಡುವ ಅರ್ಹತೆ ಇರುವ 82 ಸಾವಿರ ಜನ ಶಿಕ್ಷಕರು ರಾಜ್ಯದಲ್ಲಿದ್ದಾರೆ. ಇವರಿಗೆ ಬಡ್ತಿ ನೀಡುವ ಬದಲು ಹೊಸದಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ 10–15 ವರ್ಷ ಸೇವೆ ಸಲ್ಲಿಸಿರುವ ಅನುಭವಿ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಅನುಭವ ಹಾಗೂ ಅರ್ಹತೆ ಇರುವವರು ಅವಕಾಶ ವಂಚಿತರಾಗಿದ್ದಾರೆ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಶೋಕ್ ಎಂ ಸಜ್ಜನ್ ಹೇಳಿದರು.

ಹೊಸ ನೇಮಕಾತಿ ಆರಂಭಿಸಿದ ನಂತರ ಆಗುತ್ತಿರುವ ಅನ್ಯಾಯದ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲಾಗಿದೆ. ಆದರೂ ಯಾರೊಬ್ಬರೂ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಕರಿಗೆ ನ್ಯಾಯ ನೀಡಬೇಕು. ಇಲ್ಲವಾದರೆ ನಮ್ಮ ನೇಮಕಾತಿ ಆದೇಶದಂತೆ ಕೇವಲ 5 ತರಗತಿ ವರೆಗೆ ಮಾತ್ರ ಬೋಧನೆ ಮಾಡುತ್ತೇವೆ ಎಂದು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಎಂ. ಕುಂದರಗಿ ಹೇಳಿದರು.

ದೈಹಿಕ ಶಿಕ್ಷಣಾಧಿಕಾರಿ ಎ.ಎಸ್. ಮಠ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು