ಪ್ರಕೃತಿಯೊಂದಿಗೆ ಬಾಳುವ ಕಲೆ ಕಲಿಯೋಣ...

ಬುಧವಾರ, ಮಾರ್ಚ್ 20, 2019
26 °C
ಛಾಯಾಗ್ರಾಹಕಿ ರಮ್ಯಾ ರೆಡ್ಡಿ ಅವರ ‘ಸೋಲ್‌ ಆಫ್‌ ದಿ ನೀಲಗಿರೀಸ್‌’ ಕೃತಿ ಬಿಡುಗಡೆ

ಪ್ರಕೃತಿಯೊಂದಿಗೆ ಬಾಳುವ ಕಲೆ ಕಲಿಯೋಣ...

Published:
Updated:
Prajavani

ಬೆಂಗಳೂರು: ‘ಪುರಾತನ ಕಾಲದ ಬುದ್ಧಿಮತ್ತೆ, ಆಲೋಚನಾ ಶಕ್ತಿಗಳನ್ನು ಆದಿವಾಸಿಗಳು ಈಗಲೂ ಕಾಪಾಡಿಕೊಂಡಿದ್ದಾರೆ. ಪ್ರಕೃತಿಯೊಂದಿಗೆ ಒಂದಾಗಿ ಬಾಳುವುದನ್ನು ಅವರಿಂದಲೇ ಕಲಿಯಬೇಕು...’

ಇದು ಲೇಖಕಿ, ಛಾಯಾಗ್ರಾಹಕಿ ರಮ್ಯಾರೆಡ್ಡಿ ಅವರ ಮಾತು. 

ತಾವು ರಚಿಸಿದ ‘ಸೋಲ್‌ ಆಫ್‌ ದಿ ನೀಲಗಿರೀಸ್‌’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.

‘ನೀಲಗಿರಿ ತಪ್ಪಲಿನಲ್ಲಿರುವ ಆದಿವಾಸಿಗಳಾದ ಕುರುಂಬಾಸ್‌, ಬಡಗಹಟ್ಟಿ, ತೋಡಾಸ್‌ ಜನಾಂಗದವರ ಬದುಕಿನ ರೀತಿ ವಿಶಿಷ್ಟವಾದದ್ದು. ಪ್ರಕೃತಿಗೆ ಹಾನಿ ಮಾಡುವುದು ಮಹಾಪಾಪ ಎಂದೇ ಬಡಗಹಟ್ಟಿ ಜನಾಂಗ ಭಾವಿಸಿದೆ’ ಎಂದು ಹೇಳಿದರು.

‘ಜೇನು ಹುಳುಗಳು ಯಾರಿಗೂ ಕಡಿಯಬಾರದು. ಹಾಗೆ ಕಡಿದರೆ ಅವೂ ಸಾಯುತ್ತವೆ. ಹೀಗಾಗಿ ಅವುಗಳಿಗೆ ನೋವಾಗದಂತೆ ಜೇನು ತೆಗೆಯಬೇಕು ಎಂಬುದು ಕುರುಂಬಾಸ್‌ ಜನರ ಸಿದ್ಧಾಂತ. ಬೀಳಲುಗಳಿಂದ ಸಿದ್ಧಪಡಿಸಿದ ಏಣಿ ಬಳಸಿ ಕಡಿದಾದ ಪರ್ವತ ಪ್ರದೇಶ ಏರಿ ಸೊಪ್ಪಿನ ಹೊಗೆ ಹಾಕಿ ಜೇನು ತೆಗೆಯುತ್ತಾರೆ. ಹೀಗೆ ಪ್ರತಿ ಕಾರ್ಯ, ಬದುಕಿನ ಸಂಸ್ಕೃತಿ ಭಿನ್ನವಾಗಿದ್ದರೂ ಪ್ರಕೃತಿಗೆ ಪೂರಕವಾಗಿದೆ’ ಎಂದು ಅವರು ವಿವರಿಸಿದರು. 

ಪುಸ್ತಕದ ಕುರಿತು ರೋಹಿಣಿ ನಿಲೇಕಣಿ ಅವರು ಸಂವಾದ ನಡೆಸಿದರು. ‘ಈ ಆದಿವಾಸಿಗಳ ಮುಂದಿನ ಜನಾಂಗದ ಭವಿಷ್ಯವೇನು’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮ್ಯಾ, ‘ಆದಿವಾಸಿಗಳ ಒಂದು ವರ್ಗ ಅಲ್ಲಿಯೇ ಇದ್ದು ತಮ್ಮ ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವತ್ತ ಸಾಗಿದೆ. ಇನ್ನೊಂದು ವರ್ಗದವರು ನಗರಗಳಿಗೆ ಹೋಗಿ ಕೆಲಸ ಹುಡುಕಿಕೊಂಡಿದ್ದಾರೆ. ಮೂರನೇ ವರ್ಗಕ್ಕೆ ಇಲ್ಲಿನ ಸಂಸ್ಕೃತಿಯ ಅರಿವೇ ಇಲ್ಲ. ನಗರ ಸೇರಿ ಗೊಂದಲದಲ್ಲಿದ್ದಾರೆ. ಆದರೆ, ನಾವೆಲ್ಲರೂ ಸೇರಿ ಅವರಿಗೊಂದು ವೇದಿಕೆ ಕಲ್ಪಿಸಿಕೊಡಬೇಕು’ ಎಂದು ತಿಳಿಸಿದರು.

ಏಕೆ ಈ ಆಸಕ್ತಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮ್ಯಾ, ‘ನಿಖರ ಕಾರಣ ನನಗಿನ್ನೂ ಗೊತ್ತಾಗಿಲ್ಲ. ಸುಮ್ಮನೆ ಮುಂದುವರಿದೆ. ಹಲವು ಸವಾಲುಗಳಿದ್ದವು. ಹೇಗೋ ಎದುರಿಸಿದೆ. ನಾಡಿನಲ್ಲಿ ಹಲವು ಸಂಸ್ಕೃತಿಗಳು ನಾಶವಾಗುತ್ತಿವೆ. ಉದಾಹರಣೆಗೆ ಕಾವೇರಿ ಪೊನ್ನಪ್ಪ ಅವರು ಬರೆದ ‘ವ್ಯಾನಿಷಿಂಗ್‌ ಕೊಡವಾಸ್‌’ ಕೃತಿಯೂ ಸಂಸ್ಕೃತಿ ನಾಶವನ್ನು ಕಟ್ಟಿಕೊಟ್ಟಿದೆ. ಹಾಗಾಗಿ ಅಪರೂಪದ ಸಂಸ್ಕೃತಿಗಳ
ದಾಖಲೀಕರಣಕ್ಕೆ ಇದೇ ಸರಿಯಾದ ಸಮಯ ಎಂದು ಭಾವಿಸಿ ಹೊರಟೆ’ ಎಂದರು. 

ಮಕ್ಕಳಿಗೆ ಗಿಡಮರಗಳ ಪರಿಚಯ, ನಮ್ಮ ಆಹಾರದ ಮೂಲ, ಸಂಸ್ಕೃತಿಯ ಬೇರು ಪರಿಚಯ ಆಗಬೇಕು. ಸ್ಥಳೀಯ ಹೀರೊಗಳು (ಸ್ಥಳೀಯವಾಗಿಯೇ ವಿಶೇಷ ಕೌಶಲವುಳ್ಳವರು, ಆಸುಪಾಸಿನ ವ್ಯಕ್ತಿಗಳು) ಪರಿಚಯವಾಗಬೇಕು. ಆದಿವಾಸಿ ಮಕ್ಕಳಿಗೂ ಮುಖ್ಯವಾಹಿನಿ ಶಿಕ್ಷಣ ಸಿಗಬೇಕು ಎಂಬ ಆಶಯ ಸಂವಾದದಲ್ಲಿ ವ್ಯಕ್ತವಾಯಿತು. 

ಆದಿವಾಸಿಗಳಿಂದಲೇ ಅರಣ್ಯ ಉಳಿವು

ಕೆಲವು ಪರಿಸರವಾದಿಗಳು ಮನುಷ್ಯ ಪ್ರವೇಶದಿಂದಲೇ ಅರಣ್ಯ ನಾಶ ಎಂದು ಭಾವಿಸಿದ್ದಾರೆ. ಸುಪ್ರೀಂ ಕೋರ್ಟ್‌ ಕೂಡಾ ಇತ್ತೀಚೆಗೆ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಬೇಕು ಎಂಬ ತೀರ್ಪು ನೀಡಿದೆ. ಆದರೆ, ಇಲ್ಲಿ ಆದಿವಾಸಿಗಳಿಂದಲೇ ಅರಣ್ಯ, ನಿಸರ್ಗ ಸಂಪತ್ತು  ಉಳಿದಿದೆ. ಇದು ಭಾರತದ ವಿಶೇಷ ಗುಣ ಎಂದು ರೋಹಿಣಿ ನಿಲೇಕಣಿ ವಿಶ್ಲೇಷಿಸಿದರು. 

ಪುಸ್ತಕದಲ್ಲೇನಿದೆ?

ನೀಲಗಿರಿ ಪರ್ವತ ಶ್ರೇಣಿಗಳಲ್ಲಿರುವ ಆದಿವಾಸಿ ಜನಾಂಗದ ಬದುಕಿನ ಚಿತ್ರಣ, ಅವರ ವಿಧಿ ವಿಧಾನಗಳು, ಆಹಾರ ಪದ್ಧತಿ, ಔಷಧ ಪದ್ಧತಿಗಳು, ವಿಶೇಷ ಕೌಶಲಗಳ ಬಗ್ಗೆ ವಿವರಗಳಿವೆ. 

ಸುಂದರವಾದ ಪ್ರಕೃತಿ ಚಿತ್ರಗಳು, ಕಾಡುಗಳಲ್ಲಿರುವ ಜೀವ ವೈವಿಧ್ಯ, ಭೂದೃಶ್ಯದ ಚಿತ್ರಗಳು ಇವೆ. ಪುಸ್ತಕದ ಹೊದಿಕೆಯೂ ಆದಿವಾಸಿಗಳ ಕಸೂತಿ ಬಟ್ಟೆಯಿಂದ ಸಿದ್ಧವಾಗಿದೆ. 

ಪುಟಗಳು: 300, ಬೆಲೆ: ₹ 3,800 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !