ಮಂಗಳವಾರ, ಸೆಪ್ಟೆಂಬರ್ 22, 2020
22 °C
ಉಡುಪಿ ಮಠವೊಂದರಲ್ಲಿ ಆಶ್ರಯ ಪಡೆದಿರುವ ಶಂಕೆ

ಅಧ್ಯಾತ್ಮ ಸೆಳೆತ; ಮಠ ಸೇರಿದ ಟೆಕಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ನಗರದಿಂದ ಅಪಹರಣಕ್ಕೀಡಾಗಿದ್ದಾರೆ ಎನ್ನಲಾದ ಸಾಫ್ಟ್‌ವೇರ್‌ ಎಂಜಿನಿಯರ್ ಪ್ರಸನ್ನ ರಾಮಚಂದ್ರ (39) ಎಂಬುವರು ಉಡುಪಿಯ ಮಠವೊಂದರಲ್ಲಿ ಆಶ್ರಯ ಪಡೆದಿರುವುದಾಗಿ ಬನಶಂಕರಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬನಶಂಕರಿ ನಿವಾಸಿ ಪ್ರಸನ್ನ, ಪತ್ನಿ ಹಾಗೂ ಮಕ್ಕಳ ಜೊತೆ ವಾಸವಿದ್ದರು. ನ. 9ರಂದು ವಾಯುವಿಹಾರಕ್ಕೆ ಮನೆಯಿಂದ ಹೋಗಿದ್ದರು. ವಾಪಸ್‌ ಬಂದಿರಲಿಲ್ಲ. ಗಾಬರಿಗೊಂಡ ಪತ್ನಿ, ‘ನನ್ನ ಪತಿಯನ್ನು ಯಾರೋ ಅಪಹರಣ ಮಾಡಿದ್ದಾರೆ’ ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರಿಗೆ, ಆಧ್ಮಾತ್ಮಿಕ ಒಲುವು ಹೊಂದಿದ್ದ ಪ್ರಸನ್ನ ಉಡುಪಿಯಲ್ಲಿರುವ ಮಠವೊಂದಕ್ಕೆ ಸೇರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರ ವಿಶೇಷ ತಂಡ ಉಡುಪಿಗೆ ಹೋಗಿದೆ.

ಲಂಡನ್‌ನಿಂದ ಬೆಂಗಳೂರಿಗೆ

‘ಟಿ.ಸಿ.ಎಸ್ ಕಂಪನಿಯ ಲಂಡನ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಸನ್ನ, ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಸ್ವಂತ ವ್ಯವಹಾರ ಮಾಡಿ ನಷ್ಟ ಅನುಭವಿಸಿ ಮಾನಸಿಕವಾಗಿ ನೊಂದಿದ್ದರು. ಆ ಬಗ್ಗೆ ಕುಟುಂಬದವರು ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ವರ್ಷದಿಂದ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದ ಪ್ರಸನ್ನ, ಅದರ ನಿವಾರಣೆಗಾಗಿ ಆಧ್ಯಾತ್ಮಿಕ ಚಿಂತನೆಗಳ ಕಡೆ ವಾಲಿದ್ದರು. ಕಣ್ಣಿನ ಸಮಸ್ಯೆ ಕ್ರಮೇಣ ದೂರವಾಗಿತ್ತು. ಬಳಿಕ, ಅವರ ಆಧ್ಯಾತ್ಮಿಕ ಒಲವು ಹೆಚ್ಚಾಗಿತ್ತು. ಪ್ರವಚನದ ವಿಡಿಯೊಗಳನ್ನು ಸಹ ಅವರು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾರಂಭಿಸಿದ್ದರೆಂದು ಕುಟುಂಬದವರು ಹೇಳಿದ್ದಾರೆ’ ಎಂದು ಪೊಲೀಸರು ವಿವರಿಸಿದರು.

ಮಠದಲ್ಲಿ ಸಂಬಂಧಿಕರಿಗೆ ಸಿಕ್ಕಿದ್ದರು

‘ಅಪಹರಣ ಸಂಬಂಧ ಠಾಣೆಯಲ್ಲಿ ದೂರು ದಾಖಲಾಗಿದ್ದ ಮೂರ್ನಾಲ್ಕು ದಿನಗಳ ಬಳಿಕ, ಪ್ರಸನ್ನ ಅವರ ಸಂಬಂಧಿಕರಿಬ್ಬರು ಉಡುಪಿ ಮಠವೊಂದಕ್ಕೆ ಹೋಗಿದ್ದರು. ಅಲ್ಲಿಯೇ ಪ್ರಸನ್ನ ಅವರನ್ನು ನೋಡಿದ್ದ ಸಂಬಂಧಿಕರು, ‘ಒಬ್ಬನೇ ಬಂದಿದ್ದಿಯಲ್ಲ. ಪತ್ನಿ ಎಲ್ಲಿ’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸದೇ ಪ್ರಸನ್ನ, ಹೊರಟು ಹೋಗಿದ್ದರು. ಈ ವಿಷಯವನ್ನು ಸಂಬಂಧಿಕರು ನಮಗೆ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು