ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಗುಲವಾದ ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿ ಸ್ಥಳ

ಶ್ರೀಗಳ ಭಾವಚಿತ್ರಕ್ಕೆ ತಲೆಬಾಗುತ್ತಿರುವ ಭಕ್ತರು
Last Updated 23 ಜನವರಿ 2019, 15:14 IST
ಅಕ್ಷರ ಗಾತ್ರ

ತುಮಕೂರು: ಸಿದ್ಧಗಂಗಾ ಮಠದ ಆವರಣದಿಂದ ಭಕ್ತರು ಹಂತ ಹಂತವಾಗಿ ಕರಗುತ್ತಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಬಂದಿದ್ದ ಭಕ್ತರು ಮಂಗಳವಾರ ರಾತ್ರಿ ಮಠದಲ್ಲಿಯೇ ಉಳಿದಿದ್ದರು. ಬುಧವಾರ ಬೆಳಿಗ್ಗೆ ನಿತ್ಯ ಕರ್ಮಗಳನ್ನು ಪೂರೈಸಿ ಪ್ರಸಾದ ಸ್ವೀಕರಿಸಿ ಕ್ರಿಯಾ ಸಮಾಧಿಯ ಸ್ಥಳಕ್ಕೆ ನಮಿಸಿ ತಮ್ಮ ಊರುಗಳಿಗೆ ತೆರಳಿದರು.

ಮತ್ತಷ್ಟು ಮಂದಿ ಬುಧವಾರ ಸಮಾಧಿ ದರ್ಶನಕ್ಕಾಗಿಯೇ ಬರುತ್ತಿದ್ದರು. ‘ನಡೆದಾಡುವ ದೇವರು’ ಭಕ್ತರಿಗೆ ದರ್ಶನ ನೀಡಲು ಕುಳಿತುಕೊಳ್ಳುತ್ತಿದ್ದ ಸ್ಥಳದಲ್ಲಿ ಅವರ ಭಾವಚಿತ್ರವನ್ನು ಇಡಲಾಗಿತ್ತು.

ಶ್ರೀಗಳ ಕ್ರಿಯಾ ಸಮಾಧಿಯಾದ ಭವನಕ್ಕೆ ಬಂದ ಭಕ್ತರು ಅಲ್ಲಲ್ಲಿ ಇರುವ ಸ್ವಾಮೀಜಿ ಭಾವಚಿತ್ರಕ್ಕೂ ನಮನ ಸಲ್ಲಿಸಿದರು. ಮಕ್ಕಳಿಂದ ಹಿಡಿದು ವಯಸ್ಕರು ಸಹ ಕ್ರಿಯಾ ಸಮಾದಿ ಹಾಗೂ ಭಾವಚಿತ್ರ ಮುಂದೆ ನಿಂತು ಸೆಲ್ಫಿ ತೆಗೆದುಕೊಳುತ್ತಿದ್ದರು. ಕೆಲವರು ಕುಟುಂಬ ಸಮೇತ ಬಂದವರು ಅಲ್ಲೆ ಕೆಲ ಕಾಲ ನಿಂತುಕೊಂಡು ಸೆಲ್ಫಿ ತೆಗೆದುಕೊಂಡರು. ಆಗ ಅಲ್ಲಿ ಗುಜು ಗುಜು ಸದ್ದು ಆರಂಭವಾಗುತ್ತಿತ್ತು. ಒಂದೇ ಕಡೆ ಜನರು ಗುಂಪುಗೂಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಜೋರು ಮಾಡುತ್ತಿದ್ದರು.

ಅಟವೀ ಸ್ವಾಮೀಜಿ ಅವರ ಗದ್ದುಗೆಯ ಮುಂದೆ ಭಜನೆ ನಡೆಯುತ್ತಿತ್ತು. ಶಿವಕುಮಾರ ಸ್ವಾಮೀಜಿ ಅವರು ಶಿವೈಕ್ಯರಾದ ದಿನದಿಂದಲೂ ನಡೆಯುತ್ತಿರುವ ಈ ಭಜನೆಗಳಿಗೆ ಭಕ್ತರು ತಲೆದೂಗುತ್ತಿದ್ದಾರೆ. ವಚನಗಳು ಹಾಗೂ ಶಿವಕುಮಾರ ಸ್ವಾಮೀಜಿ ಅವರ ಸಾಧನೆ, ಬದುಕಿನ ಕುರಿತು ಪದಗಳನ್ನು ಗಾಯಕರು ಹಾಡಿದರು.

ಶಿವಕುಮಾರ ಸ್ವಾಮೀಜಿ ಅವರ ನೆಲೆಯಾಗಿದ್ದ ಹಳೇ ಮಠದಲ್ಲಿ ಮಠಾಧೀಶರು ಉಳಿದುಕೊಂಡಿದ್ದರು. ಮಕ್ಕಳ ಕಲರವವೂ ಹೆಚ್ಚಿತ್ತು. ಮಠದ ಆವರಣದಲ್ಲಿ ಅಳವಡಿಸಿದ್ದ ಶಾಮೀಯಾನವನ್ನು ಕಳಚಲಾಗುತ್ತಿತ್ತು. ಆವರಣದಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳು ಇನ್ನೂ ಇದ್ದವು. ಪೊಲೀಸರು ಈಗಾಗಲೇ ಆದಷ್ಟು ಕಡಿಮೆಯಾಗಿದ್ದು ಎರಡು ಮೂರು ದಿನಗಳಲ್ಲಿ ಎಲ್ಲರೂ ಖಾಲಿಯಾಗುವ ಸಾಧ್ಯತೆ ಇದೆ.

ಅಲ್ಲಲ್ಲಿ ಬಿದ್ದ ಕಸ, ಜನರ ಕಾಲಿನಿಂದ ಬಂದ ದೂಳು, ಮಣ್ಣನ್ನು ವಿದ್ಯಾರ್ಥಿಗಳು ಸ್ವಚ್ಛ ಮಾಡಿದರು. ಶಿಕ್ಷಕರು ಅವರಿಗೆ ಮಾರ್ಗದರ್ಶನ ನೀಡಿದರು.

ಪ್ರಶಂಸೆಗೆ ಪಾತ್ರವಾದ ಜಿಲ್ಲಾಧಿಕಾರಿ ನಡೆ
ಅಂತ್ಯಕ್ರಿಯೆಯ ವೇಳೆ ಲಕ್ಷಾಂತರ ಜನರು ಬಂದರೂ ಸ್ವಲ್ಪವೂ ಗೊಂದಲಕ್ಕೆ ಕಾರಣವಾಗಲಿಲ್ಲ. ಸಾಮಾನ್ಯವಾಗಿ ಹೆಚ್ಚು ಜನರು ಸೇರಿದಾಗ ಸಣ್ಣ ಪುಟ್ಟ ಅಹಿತಕರ ಘಟನೆಗಳು ನಡೆಯುತ್ತವೆ. ಅಂತ್ಯಕ್ರಿಯೆ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆದುದ್ದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಕಾರ್ಯಗಳು ಸುಗಮ ಮತ್ತು ಸುಸೂತ್ರವಾಗಿ ನಡೆಯಲು ಕಾರಣರಾದ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಈಗ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಸ್ವಾಮೀಜಿ ಅವರು ಅನಾರೋಗ್ಯಕ್ಕೆ ತುತ್ತಾದ ದಿನದಿಂದಲೂ ಜಿಲ್ಲಾಧಿಕಾರಿ ಅವರು ಪರಿಸ್ಥಿತಿಗಳನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಸ್ವಾಮೀಜಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮತ್ತು ಮಠಕ್ಕೆ ಕರೆತರುವಾಗ ಅವರೇ ಮುಂದೆ ನಿಂತಿದ್ದಾರೆ.

ಅಂತ್ಯಕ್ರಿಯೆಯ ಸಂದರ್ಭದಲ್ಲಿ ಎಲ್ಲ ಆಡಳಿತಗಳ ಉಸ್ತುವಾರಿಯನ್ನು ಖುದ್ದು ವಹಿಸಿಕೊಂಡಿದ್ದರು. ಮಠದ ಆವರಣದಲ್ಲಿ ಅವರು ಓಡುತ್ತಿರುವ ಚಿತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ನಮ್ಮ ಜಿಲ್ಲಾಧಿಕಾರಿ ನಮ್ಮ ಹೆಮ್ಮೆ’ ಎಂದು ಯುವಜನರು ಪ್ರಶಂಸಿಸುತ್ತಿದ್ದಾರೆ.

ಸಿದ್ಧಲಿಂಗ ಸ್ವಾಮೀಜಿ ಕಚೇರಿ ಮುಂದೆ ಭಕ್ತರ ಸಾಲು
ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಕಾರಣ ಸಿದ್ಧಲಿಂಗ ಸ್ವಾಮೀಜಿ ದುಃಖದಲ್ಲಿ ಇದ್ದಾರೆ. ಅವರು ಧೈರ್ಯದಿಂದ ಇರಬೇಕು. ಮಕ್ಕಳಿಗೂ ಧೈರ್ಯವನ್ನು ತುಂಬಬೇಕು ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದರು. ಸಿದ್ಧಲಿಂಗ ಸ್ವಾಮೀಜಿ ಅವರು ತಮ್ಮ ಕಚೇರಿಯಲ್ಲಿ ಕುಳಿತ್ತಿದ್ದರು. ಆಗಾಗ್ಗೆ ಬರುತ್ತಿದ್ದ ಗಣ್ಯರು ಹಾಗೂ ಮಠಾಧೀಶರ ಜೊತೆ ಮಾತುಕತೆ ನಡೆಸುತ್ತಿದ್ದರು. ಭಕ್ತರು ಅವರಿಗೆ ನಮಿಸಿ ತೆರಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT