ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪತರು ನಾಡಿನ ಕೀರ್ತಿ ಬೆಳಗಿದ ಚೇತನ ಸಿದ್ಧಗಂಗಾಶ್ರೀ

ತುಮಕೂರು ಜಿಲ್ಲೆಯ ಕೀರ್ತಿ ದೇಶದ ಎಲ್ಲೆಡೆ ಬೆಳಗಿಸಿದ ಮಹಾಪುರುಷ
Last Updated 22 ಜನವರಿ 2019, 10:10 IST
ಅಕ್ಷರ ಗಾತ್ರ

ತುಮಕೂರು: ತುಮಕೂರಿನ ಹೆಸರನ್ನು ದೇಶದಾದ್ಯಂತ ಪಸರಿಸಿದವರು ಶಿವಕುಮಾರ ಸ್ವಾಮೀಜಿ. ಸಾಮಾಜಿಕ, ಶೈಕ್ಷಣಿಕವಾಗಿ ಜಿಲ್ಲೆಯ ಬೆಳವಣಿಗೆಯಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು. ಜಿಲ್ಲೆಯ ಮುಕುಟ ಮಣಿಯಂತೆ ಸ್ವಾಮೀಜಿ ಇದ್ದರು.

ತುಮಕೂರು ಅಂದರೆ ಸಿದ್ಧಗಂಗಾ ಮಠ, ಶಿವಕುಮಾರ ಸ್ವಾಮೀಜಿ ಎನ್ನುವಷ್ಟರ ಮಟ್ಟಿಗೆ ಅವರ ಗುರುತು ದೇಶದಲ್ಲಿ ಇತ್ತು. ಕಲ್ಪತರು ನಾಡು ಎನ್ನುವ ಹೆಗ್ಗಳಿಕೆಯ ತುಮಕೂರಿನಲ್ಲಿ ಸ್ವಾಮೀಜಿ ಮಕ್ಕಳ ಮತ್ತು ಬಡಜನರಿಗೆ ಕಾಮಧೇನುವಿನಂತೆ ಇದ್ದವರು. ಮಠದಿಂದ ಆರಂಭವಾಗಿರುವ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನವು ಜಿಲ್ಲೆಯಲ್ಲಿಯೇ ಇವೆ. ಅಲ್ಲದೆ ರಾಜ್ಯದಲ್ಲಿ ತುಮಕೂರು ಶೈಕ್ಷಣಿಕವಾಗಿ ಪ್ರಮುಖವಾಗಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣ ಸ್ವಾಮೀಜಿ.

ನಗರದಲ್ಲಿ ಎಂಜಿನಿಯರಿಂಗ್ ಕಾಲೇಜಿನಿಂದ ಹಿಡಿದು ಪ್ರಾಥಮಿಕ ಶಾಲೆಯನ್ನು ತೆರೆದು ಶಿಕ್ಷಣಕ್ಕೆ ಸೌಲಭ್ಯ ಒದಗಿಸಿದರು. ನಗರದಲ್ಲಿ ಹಲವು ಕಾಲೇಜುಗಳನ್ನು ಆರಂಭಿಸಿದರು. ಆ ಮೂಲಕ ತುಮಕೂರನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸಿದ್ಧಗಂಗಾ ಮಠವೂ ಇದೆ.

ಮಾಗಡಿ ತಾಲ್ಲೂಕಿನ ವೀರಾಪುರ ಸ್ವಾಮೀಜಿ ಅವರ ಹುಟ್ಟೂರು. ಆದರೆ ಇಡೀ ಅವರ ಬದುಕಿನ ಕರ್ಮ ಕ್ಷೇತ್ರ ತುಮಕೂರು. ಪ್ರಾಥಮಿಕ ವಿದ್ಯಾಭ್ಯಾಸದ ನಂತರ ಅವರು ತುಮಕೂರು ತಾಲ್ಲೂಕು ನಾಗವಲ್ಲಿಯ ರೂರಲ್ ಎ.ವು.ಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ನಂತರ ವಿದ್ಯಾಭ್ಯಾಸ ತುಮಕೂರಿನಲ್ಲಿ ನಡೆಯಿತು.

ನಗರಕ್ಕೆ ರಾಜ್ಯ, ದೇಶದ ಯಾವುದೇ ಗಣ್ಯರು ಭೇಟಿ ನೀಡಿದರೂ ಅವರು ಮಠಕ್ಕೆ ತೆರಳಿ ಸ್ವಾಮೀಜಿ ಆಶೀರ್ವಾದ ಪಡೆಯುತ್ತಿದ್ದರು. ಒಂದು ರೀತಿಯಲ್ಲಿ ಜಿಲ್ಲೆಯ ಶಕ್ತಿ ಕೇಂದ್ರವಾಗಿ ಮಠ ಗುರುತಾಗಿತ್ತು.

‘ಮಠದಿಂದ ಘಟ ಅಲ್ಲ, ಘಟದಿಂದ ಮಠ’ ಎನ್ನುವ ಮಾತಿಗೆ ಅನ್ವರ್ಥ ಎನ್ನುವಂತಿದ್ದರು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ. ಅವರ ನಿಷ್ಕಾಮ ಕಾರ್ಯಗಳು ಸಿದ್ಧಗಂಗೆಯ ಪ್ರಭೆಯನ್ನು ತುಮಕೂರಿನಿಂದ ಆಚೆಗೆ ನಾಡಿನ ಎಲ್ಲೆಡೆ ದೈದೀಪ್ಯವಾಗಿ ಬೆಳಗಿಸಿತು.

ಸ್ವಾಮೀಜಿ ಅವರ ಆರೋಗ್ಯ ಕೊಂಚ ಏರುಪೇರಾದರೆ ಇಡೀ ಜಿಲ್ಲೆಯ ಜನರಲ್ಲಿಯೇ ಶೋಕದ ಭಾವ ಮುಡುಗಟ್ಟುತ್ತಿತ್ತು. ಜನರು ಮಠದತ್ತ ಧಾವಿಸುತ್ತಿದ್ದರು. ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ಅವರ ಹೆಜ್ಜೆಯ ಗುರುತುಗಳಿವೆ.

ಅಕ್ಷರ ಜ್ಞಾನದ ಶಿಕ್ಷಣವಷ್ಟೇ ಅಲ್ಲ ಬದುಕಿಗೆ ಅಗತ್ಯವಾದ ಶಿಕ್ಷಣವನ್ನೂ ಸ್ವಾಮೀಜಿ ಮಕ್ಕಳಿಗೆ ಕಲಿಸಿದ್ದಾರೆ. ಮಠದ ಹೊಲ ತೋಟಗಳಲ್ಲಿ ಮತ್ತು ಕೃಷಿ ಚಟುವಟಿಕೆಗಳಲ್ಲಿ ಮಕ್ಕಳನ್ನೂ ತೊಡಗಿಸುವ ಮೂಲಕ ಅವರಿಗೆ ಕಾಯಕ ಮತ್ತು ಶ್ರಮ ಸಂಸ್ಕೃತಿಯ ಪಾಠಗಳನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟಿದ್ದಾರೆ.

ಜ್ಞಾನಕ್ಕೆ ಜಾತಿ ಮತದ ಹಂಗಿಲ್ಲ ಎನ್ನುವುದನ್ನು ಅರಿತಿದ್ದ ಅವರು ಜಾತಿ, ಮತದ ಬೇಲಿಗಳನ್ನು ಕಿತ್ತೆಸೆದು ಬಸವತತ್ವದ ಅಡಿಯಲ್ಲಿ ನಡೆದವರು. ಆ ಕಾರಣಕ್ಕೆ ಸಿದ್ಧಗಂಗೆ ಎಲ್ಲರೂ ಪ್ರವೇಶಿಸುವ ಸ್ಥಳವಾಗಿದೆ.

ಸಮಾನತೆಗೆ ಬಸವ ಜಯಂತಿ: ರಾಜ್ಯದಲ್ಲಿ ಮೊದಲ ಬಾರಿಗೆ ಬಸವ ಜಯಂತಿಯನ್ನು ಹಳ್ಳಿ ಹಳ್ಳಿಗಳಿಗೆ ಕೊಂಡೊಯ್ದ ಕೀರ್ತಿ ಶಿವಕುಮಾರ ಶ್ರೀಗಳದ್ದು. ಮೊದಲಿಗೆ ಈ ಕಾರ್ಯಕ್ರವನ್ನು ಜಿಲ್ಲೆಯಿಂದಲೇ ಆರಂಭಿಸಿದರು. 1979ರಲ್ಲಿ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಶ್ರೀಗಳು ಸಂಘಟಿಸಿದರು. ಕಾರ್ಯಕ್ರಮದಲ್ಲಿ ಭಾಷಣ ಅಷ್ಟೇ ಅಲ್ಲ ಕಾವ್ಯವಾಚನವೂ ಇರಬೇಕು ಎಂದು ತೀರ್ಮಾನಿಸಿದರು. ತುಮಕೂರು, ಗುಬ್ಬಿ, ತಿಪಟೂರು, ಚಿಕ್ಕನಾಯಕಹಳ್ಳಿ, ಮಧುಗಿರಿ, ನೆಲಮಂಗಲ ಹೀಗೆ ಜಿಲ್ಲೆ ಹಾಗೂ ಪಕ್ಕದ ಜಿಲ್ಲೆಗಳಲ್ಲಿಯೂ ಗ್ರಾಮಾಂತರ ಬಸವ ಜಯಂತಿ ಸಂಘಟಿಸಿದರು ಸ್ವಾಮೀಜಿ.

ರಾತ್ರಿ ಬಸವೇಶ್ವರರ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದರು. ಇದರಿಂದ ತತ್ವಬೋಧನೆಯ ಜೊತೆಯಲ್ಲಿಯೇ ಜನರಲ್ಲಿ ಸಾಮಾಜಿಕ ಪ್ರಜ್ಞೆಯೂ ಬೆಳೆಯಿತು. ಶ್ರೀಗಳ ಬದುಕಿನ ಪ್ರಮುಖ ಸಾಧನೆಯು ಘಟ್ಟವಾಗಿಯೂ ಈ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮವನ್ನು ಕಾಣಬಹುದು. ಅಂದು ಶ್ರೀಗಳು ಹಾಕಿದ ಬುನಾದಿ ಇಂದಿಗೂ ಮುಂದುವರಿದಿದೆ.

ಶ್ರೀಗಳು ಹಾಕಿದ ಈ ಬುನಾದಿ ಜಿಲ್ಲೆಯ ಜನರನ್ನು ಅಕ್ಷರ ಮತ್ತು ಸಮಾನತೆಯ ಅರಿವಿನತ್ತ ಕೊಂಡೊಯ್ದಿರುವುದು ಅಕ್ಷರಶಃ ನಿಜ. ಕಲ್ಪತರು ನಾಡಿನ ನೆಲದಲ್ಲಿ ಒಂದಿಷ್ಟು ಮಂದಿ ಬಸವ ತತ್ವವನ್ನು ಬದುಕಿನಲ್ಲಿ ಅನುಷ್ಠಾನಗೊಳಿಸಿ ಬದುಕುತ್ತಿದ್ದರೆ ಅದಕ್ಕೆ ಕಾರಣ ಶಿವಕುಮಾರ ಸ್ವಾಮೀಜಿ.

ಉದ್ದಾನ ಶಿವಯೋಗಿಗಳ ಕಾಲದಲ್ಲಿ ಅಂದರೆ 1940–41ರಲ್ಲಿ ಮಠದಲ್ಲಿ 60 ವಿದ್ಯಾರ್ಥಿಗಳು ಮಾತ್ರ ಇದ್ದರು. ಈ ಸಂಖ್ಯೆಯನ್ನು ಸ್ವಾಮೀಜಿ ಹೆಚ್ಚಿಸುತ್ತಲೇ ಹೋದರು. ಜಿಲ್ಲೆ ಹೊರ ಜಿಲ್ಲೆಗಳ ವಿದ್ಯಾರ್ಥಿಗಳು ಮಠದಲ್ಲಿ ಆಶ್ರಯ ಪಡೆದರು. 1979ರಲ್ಲಿ ಮಠಕ್ಕೆ ಸಂಜೆಯ ಪ್ರಾರ್ಥನೆ ವೇಳೆಗೆ ಬಂದಿದ್ದ ಪ್ರಧಾನ ಮಂತ್ರಿ ಮೊರಾರ್ಜಿ ದೇಸಾಯಿ, ‘ಇಷ್ಟೊಂದು ಅಧಿಕ ಸಂಖ್ಯೆಯ ಮಕ್ಕಳನ್ನು ಒಂದೇ ಮಠದ ಆಶ್ರಯದಲ್ಲಿ ಉಚಿತ ಊಟ, ವಸತಿ ಪಡೆದು ಓದುತ್ತಿರುವುದನ್ನು ನಾನು ಇಲ್ಲಿಯೇ ಮೊದಲು ಕಂಡಿದ್ದು’ ಎಂದು ಉದ್ಗಾರಿಸಿದ್ದರು. ಆಗ 3800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.

ಶಿವಕುಮಾರ ಸ್ವಾಮೀಜಿ ಅಸ್ತಂಗತವಾಗುವ ಮೂಲಕ ಜಿಲ್ಲೆಯ ಹೆಸರನ್ನು ಜಗದಲ್ಲಿ ಎತ್ತಿ ಹಿಡಿದ ಮಹಾಪುರುಷ ಕಣ್ಮರೆಯಾಗಿದ್ದಾರೆ. ನಾಡಿನಲ್ಲಿ ಯಾವ ರೀತಿ ಬಹುದೊಡ್ಡ ನಿರ್ವಾತ ನಿರ್ಮಾಣವಾಗಿದೆಯೋ ಅದೇ ರೀತಿ ಜಿಲ್ಲೆಯ ಭಕ್ತರು ಹಾಗೂ ಜನರಲ್ಲಿಯೂ ನಿರ್ವಾತದ ಭಾವ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT