ಯುವಜನರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಿ

ಶನಿವಾರ, ಏಪ್ರಿಲ್ 20, 2019
29 °C

ಯುವಜನರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಿ

Published:
Updated:

ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ತರವಾದ ಘಟ್ಟ ಚುನಾವಣೆ. ಈ ಚುನಾವಣೆಯ ಹಬ್ಬದಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ವಿಶೇಷವಾಗಿ ಯುವಜನರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಉತ್ತಮ ನಾಯಕರನ್ನು ಚುನಾಯಿಸುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ರಮೇಶ್‌ಬಾಬು ನುಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರು, ಸ್ವೀಪ್ ಸಮಿತಿ ಸಂಚಾಲಕರಿಗೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಎಲ್ಲ ಪದವಿ ಕಾಲೇಜುಗಳಲ್ಲಿ ಯುವ ವಿದ್ಯಾರ್ಥಿ ಸಮೂಹ ಅಧ್ಯಯನ ಮಾಡುತ್ತಿದೆ. ಈ ಯುವ ಪೀಳಿಗೆಯು ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಇದರ ಜೊತೆಗೆ ವಿದ್ಯಾರ್ಥಿಗಳ ಪಾಲಕರು, ಸ್ನೇಹಿತರು ಮತ್ತಿತರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯರಾಗುವಂತೆ ಮನವೊಲಿಸಬೇಕು. ಅಧ್ಯಾಪಕರು ಯುವ ವಿದ್ಯಾರ್ಥಿ ಸಮೂಹಕ್ಕೆ ಮಾರ್ಗದರ್ಶಕರಾಗಿ, ಸಮಾಜದ ಒಳಿತಿಗೆ ಶ್ರಮಿಸಬೇಕು ಎಂದು ಹೇಳಿದರು.

ಅಂಬೇಡ್ಕರ್ ರಚಿತ ಸಂವಿಧಾನದಲ್ಲಿ ಓರ್ವ ಸಾಮಾನ್ಯ ವ್ಯಕ್ತಿಯೂ ದೇಶದ ಅತ್ಯುನ್ನತ ರಾಜಕೀಯ ಅಧಿಕಾರ ಪಡೆಯಲು ಅವಕಾಶ ಕಲ್ಪಿಸಿದೆ. ಇಂತಹ ಸನ್ನಿವೇಶದಲ್ಲಿ ಯುವಜನರಿಗೆ ಮತದಾನದ ಮಹತ್ವ ತಿಳಿಸಬೇಕಿದೆ. ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು ಸಾರ್ವಜನಿಕರಲ್ಲಿ ಮತದಾನದ ಹಕ್ಕನ್ನು ಚಲಾಯಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕಾಲೇಜು ಶಿಕ್ಷಣ ಪ್ರಾದೇಶಿಕ ಕಚೇರಿಯ ವಿಶೇಷಾಧಿಕಾರಿ ಡಾ.ರಮೇಶ್, ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಜನರೇ ಆಯ್ಕೆ ಮಾಡುವ ಅವಕಾಶ ಇದೆ. ಎಲ್ಲ ಅರ್ಹ ಮತದಾರರು ಜವಾಬ್ದಾರಿಯುತವಾಗಿ ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದರು.

ಜನರಿಗೆ ವಿದ್ಯುನ್ಮಾನ ಯಂತ್ರ, ಮತದಾನ ಖಾತರಿ ಯಂತ್ರಗಳ ಬಗ್ಗೆ ಜಾಗೃತಿ ಮೂಡಿಸಿ ತಾವು ಚಲಾಯಿಸಿದ ಮತ ಅರ್ಹರಿಗೆ ತಲುಪುತ್ತದೆ ಎಂಬ ಖಾತರಿಯನ್ನು ಮೂಡಿಸಬೇಕು. ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಬಳಸುವ ಮೂಲಕ ಚುನಾವಣೆಯನ್ನು ನಿಯಮಬದ್ದವಾಗಿ ನಡೆಸಲು ಸಹಕರಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲೀಡ್ ಕಾಲೇಜು ಪ್ರಾಂಶುಪಾಲ ಪ್ರೊ.ಜಗದೀಶ್ ಮಾತನಾಡಿ, ‘ಜಿಲ್ಲೆಯ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಚುನಾವಣಾ ಸಾಕ್ಷರತಾ ಕ್ಲಬ್‌ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ತಾವು ಕೈಗೊಂಡ ಕಾರ್ಯಕ್ರಮಗಳಿಗೆ ವ್ಯಾಪಕ ಪ್ರಚಾರ ನೀಡಿ ಹೆಚ್ಚು ಜನರು ಮತದಾನದ ಬಗ್ಗೆ ಅರಿಯುವಂತೆ ಮಾಡಬೇಕು ಎಂದರು. 

ಜಂಟಿ ನಿರ್ದೇಶಕರ ಕಚೇರಿಯ ವ್ಯವಸ್ಥಾಪಕ ಶಿವಪ್ರಸಾದ್, ಅಧೀಕ್ಷಕ ಶಿವಪ್ರಸಾದ್, ಪ್ರಾಂಶುಪಾಲ ಡಾ.ಎಂ.ಎಸ್.ನರಸಿಂಹನ್ ಪ್ರಾಧ್ಯಾಪಕ ಡಾ.ನಾರಾಯಣಪ್ಪ, ದೊಡ್ಡದುರ್ಗಪ್ಪ, ಮುದ್ದಗಂಗಯ್ಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !