ಭಾನುವಾರ, ಏಪ್ರಿಲ್ 5, 2020
19 °C
‘ಅಭಿವೃದ್ಧಿ ಹಕ್ಕು ವರ್ಗಾವಣೆ’ ವಂಚನೆ ಪ್ರಕರಣ * 15 ಸಂತ್ರಸ್ತರ ದೂರು

ದೂರು ನೀಡದಂತೆ ಕಂಪನಿಗಳ ಆಮಿಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಅಭಿವೃದ್ಧಿ ಹಕ್ಕು ವರ್ಗಾವಣೆ‘ (ಟಿಡಿಆರ್‌) ಪ್ರಕರಣದಲ್ಲಿ ವಂಚನೆಗೆ ಒಳಗಾಗಿದ್ದಾರೆನ್ನಲಾದ ಕೆಲವು ನಿವೇಶನ– ಕಟ್ಟಡಗಳ ಮಾಲೀಕರು ‘ಭ್ರಷ್ಟಾಚಾರ ನಿಗ್ರಹ ದಳ’ಕ್ಕೆ (ಎಸಿಬಿ) ದೂರು ನೀಡದಂತೆ ರಿಯಲ್‌ ಎಸ್ಟೇಟ್‌ ಕಂಪೆನಿಗಳು ತಡೆಯುತ್ತಿರುವ ಸಂಗತಿ ಬಯಲಿಗೆ ಬಂದಿದೆ.

ಟಿಡಿಆರ್‌ ವಂಚನೆ ಪ್ರಕರಣ ಕುರಿತು ನಡೆಯುತ್ತಿರುವ ತನಿಖೆಯಿಂದ ಸಂಕಷ್ಟಕ್ಕೆ ಸಿಕ್ಕಿರುವ ಕೆಲವು ರಿಯಲ್‌ ಎಸ್ಟೇಟ್‌ ಕಂಪೆನಿಗಳು ತಮ್ಮಿಂದ ವಂಚನೆಗೊಳಗಾದ ಜನರಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ.
ಒತ್ತಡಕ್ಕೆ ಮಣಿದರೆ ಮತ್ತೊಮ್ಮೆ ಮೋಸ ಹೋಗುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

‘ಎಸಿಬಿಯಲ್ಲಿ ದೂರು ದಾಖಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಲು ಬಹಳ ಕಾಲಾವಕಾಶ ಹಿಡಿಯಲಿದೆ. ಅಲ್ಲದೆ, ‍ಹಣವೂ ಕಡಿಮೆ ಸಿಗುತ್ತದೆ. ಹೀಗಾಗಿ, ಈಗಲೇ ನಮ್ಮಿಂದ ಹಣ ತೆಗೆದುಕೊಂಡು ರಾಜಿ ಮಾಡಿಕೊಳ್ಳುವುದು ಸೂಕ್ತ’ ಎಂದು ಕಂಪನಿಗಳು ಸಂತ್ರಸ್ತರ ಮೇಲೆ
ಒತ್ತಡ ಹೇರುತ್ತಿವೆ ಎಂದು ಮೂಲಗಳು ಹೇಳಿವೆ.

ರಿಯಲ್‌ ಎಸ್ಟೇಟ್‌ ಕಂಪನಿಗಳ ಒತ್ತಡದ ನಡುವೆಯೂ ಸುಮಾರು 15 ಸಂತ್ರಸ್ತರು ಎಸಿಬಿ ಸಂಪರ್ಕಿಸಿ ದೂರು ನೀಡಿದ್ದಾರೆ. ಅವರೆಲ್ಲರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಅವರನ್ನು ಸಾಕ್ಷಿಗಳೆಂದು ಪರಿಗಣಿಸಲಾಗಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಇದು ಕೇವಲ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಕರಣವಲ್ಲ. ಈ ಪ್ರಕರಣದಲ್ಲಿ ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಕೆಲ ದಾಖಲೆಗಳನ್ನು ತಿದ್ದಲಾಗಿದೆ. ಹೀಗಾಗಿ, ಇದೊಂದು ಗಂಭೀರ ಪ್ರಕರಣವಾಗಿದ್ದು, ತಪ್ಪಿತಸ್ಥರ ಜೊತೆ ಕೈ ಜೋಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದೂ ಎಸಿಬಿ ಅಧಿಕಾರಿಗಳು ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಇಲ್ಲಿನ ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಕೆಲವು ಕಟ್ಟಡಗಳು ಮತ್ತು ನಿವೇಶನಗಳಿಗೆ ಪರ್ಯಾಯವಾಗಿ ನೀಡಿರುವ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ವಂಚನೆ ಎಸಗಿದ ಸಂಬಂಧ ಎಸಿಬಿ ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣದಲ್ಲಿ ಬಿಡಿಎ ಎಇಇ ಕೃಷ್ಣಲಾಲ್‌ ಸೇರಿದಂತೆ ಅನೇಕರು ಆರೋಪಿಗಳಾಗಿದ್ದಾರೆ. ಕೃಷ್ಣಲಾಲ್‌ ತಲೆ ಮರೆಸಿಕೊಂಡಿದ್ದಾರೆ.

‘ಮಲ್ಲೇಶ್ವರದಲ್ಲೂ ಟಿಡಿಆರ್‌ ದುರ್ಬಳಕೆ’

ಮಲ್ಲೇಶ್ವರದಲ್ಲಿ ಮೂಲಸೌಕರ್ಯ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಂಡ ಪ್ರಕರಣದಲ್ಲೂ ಟಿಡಿಆರ್‌ ಹಕ್ಕು ದುರ್ಬಳಕೆ ಮಾಡಿರುವ ಪ್ರಕರಣ ಎಸಿಬಿ ಅಧಿಕಾರಿಗಳ ಗಮನಕ್ಕೆ ಬಂದಿದೆ.

ವಿವಿಧ ಇಲಾಖೆಗಳ ಐವರು ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಲು ಸಕ್ಷಮ ಪ್ರಾಧಿಕಾರದಿಂದ ಒಪ್ಪಿಗೆ ಕೇಳಲಾಗಿದೆ. ಉದ್ದೇಶಪೂರ್ವಕವಾಗಿ ಅನುಮತಿ ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ.

ವಿಚಾರಣೆಗೆ ಹಾಜರಾದ ದೇವರಾಜ್‌

ಭಟ್ಟರಹಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡಿರುವ ಕಟ್ಟಡ–ನಿವೇಶನಗಳ ಟಿಡಿಆರ್‌ ವಂಚನೆ ಪ್ರಕರಣದಲ್ಲಿ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ ದೇವರಾಜ್‌ ಶನಿವಾರ ಎಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

ಈ ಪ್ರಕರಣದ ತನಿಖಾಧಿಕಾರಿಗಳು ವಿಚಾರಣೆಗೆ ಕರೆಯುವ ಮೊದಲೇ ದೇವರಾಜ್‌ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ‘ಸನಿಹದಲ್ಲೇ ನನಗೆ ಬಡ್ತಿ ಸಿಗಲಿರುವುದರಿಂದ ವಕೀಲರ ಸಲಹೆ ಮೇರೆಗೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಎಂಟಿಎಫ್‌ ಮುಂದಿರುವ ಎರಡು ಪ್ರಕರಣಗಳಲ್ಲಿ ‘ಬಿ’ ರಿಪೋರ್ಟ್‌ ಸಲ್ಲಿಕೆಯಾಗಿದೆ ಎಂದೂ ದೇವರಾಜ್‌ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು