ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಬ್‌ ಕಿರಿಕಿರಿ; ನಿಯಮ ಉಲ್ಲಂಘನೆ ಹೆಚ್ಚಳ

ಓಲಾ, ಉಬರ್ ವಿರುದ್ಧ ಸಾರ್ವಜನಿಕರ ದೂರು * 1.56 ಲಕ್ಷ ಚಾಲಕರ ವಿರುದ್ಧ 4.44 ಲಕ್ಷ ‍ಪ್ರಕರಣ ದಾಖಲು
Last Updated 25 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೊಬೈಲ್‌ ಆ್ಯಪ್ ಆಧಾರಿತ ಕಂಪನಿಗಳ ಕ್ಯಾಬ್ ಬಳಕೆ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಅದರೊಂದಿಗೆ ಕ್ಯಾಬ್ ಚಾಲಕರ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳೂ ಜಾಸ್ತಿ ಆಗುತ್ತಿವೆ.

‘ಕ್ಯಾಬ್ ಚಾಲಕರು ಕಿರಿಕಿರಿ ಉಂಟು ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಸಾರ್ವಜನಿಕರು ನೀಡಿದ್ದ ದೂರಿನನ್ವಯ ಪರಿಶೀಲನೆ ನಡೆಸಿದ್ದಸಂಚಾರ ಪೊಲೀಸರು, 2018ರಲ್ಲಿ ಕ್ಯಾಬ್ ಚಾಲಕರು ಎಸಗಿದ್ದ ನಿಯಮ ಉಲ್ಲಂಘನೆ ಪ್ರಕರಣಗಳ ಮಾಹಿತಿ ಸಿದ್ಧಪಡಿಸಿ ಕಠಿಣ ಕ್ರಮ ಜರುಗಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಗರದ 1.56 ಲಕ್ಷ ಕ್ಯಾಬ್ ಚಾಲಕರು, ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಆ ಚಾಲಕರ ವಿರುದ್ಧ 4.44 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಮದ್ಯಪಾನ ಮಾಡಿ ಚಾಲನೆ ಮಾಡಿದ್ದ ಚಾಲಕರ ಕ್ಯಾಬ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

‘ಬೆಂಗಳೂರಿನಲ್ಲಿ ಕ್ಯಾಬ್‌ಗಳಿಗೆ ಬೇಡಿಕೆ ಹೆಚ್ಚು. ಆರಂಭದಲ್ಲಿ ಓಲಾ, ಉಬರ್‌ ಕಂಪನಿಗಳು ಮಾತ್ರ ನಗರದಲ್ಲಿದ್ದವು. ಈಗ ಹಲವು ಕಂಪನಿಗಳು ಕಾರ್ಯಾರಂಭ ಮಾಡಿವೆ. ಕ್ಯಾಬ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಚಾಲಕರು, ಬೇಕಾಬಿಟ್ಟಿಯಾಗಿ ನಡೆದುಕೊಂಡು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ’ ಎಂದು ಸಂಚಾರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾಬ್‌ಗಳ ತಪ್ಪು ನಿಲುಗಡೆ, ಮದ್ಯ ಕುಡಿದು ವಾಹನ ಚಾಲನೆ ಸೇರಿ ಹಲವು ನಿಯಮ ಉಲ್ಲಂಘನೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆ ಬಗ್ಗೆ ನಿತ್ಯವೂ ನಿಯಂತ್ರಣ ಕೊಠಡಿಗೆ ಕರೆಗಳು ಬರುತ್ತಿವೆ. ಕೆಲವರು ಸಂಚಾರ ನಿರ್ವಹಣಾ ಕೆಂದ್ರಕ್ಕೆ (ಟಿಎಂಸಿ) ಬಂದು ಮನವಿ ಕೊಟ್ಟು ಹೋಗುತ್ತಿದ್ದಾರೆ. ಕ್ಯಾಬ್‌ಗಳ ನಿಯಮ ಉಲ್ಲಂಘನೆ ಬಗ್ಗೆ ನಿಗಾ ವಹಿಸುವಂತೆ ಆಯಾ ಸಂಚಾರ ಠಾಣೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ವಿವರಿಸಿದರು.

ರಸ್ತೆಯಲ್ಲಿ ನಿದ್ದೆ, ನಿತ್ಯಕರ್ಮ: ‘ಬಹುಪಾಲು ಯುವಕರು, ಕ್ಯಾಬ್ ಚಾಲಕರಾಗಲು ಇಷ್ಟಪಡುತ್ತಿದ್ದಾರೆ. ಎಲ್ಲೋ ಮನೆ ಇರುತ್ತದೆ. ಇನ್ನೆಲ್ಲೋ ಇದ್ದುಕೊಂಡು ಕ್ಯಾಬ್ ಓಡಿಸುತ್ತಿದ್ದಾರೆ. ಶೇ 30ರಷ್ಟು ಚಾಲಕರು, ನಿತ್ಯವೂ ರಾತ್ರಿ ರಸ್ತೆ ಬದಿಯಲ್ಲಿ ಕ್ಯಾಬ್ ನಿಲ್ಲಿಸಿಕೊಂಡು ನಿದ್ದೆ ಮಾಡುತ್ತಿದ್ದಾರೆ. ಮರುದಿನ ನಸುಕಿನಲ್ಲಿ ರಸ್ತೆ ಬದಿ ನಿತ್ಯಕರ್ಮ ಮುಗಿಸುತ್ತಿದ್ದು, ಸ್ಥಳೀಯರಿಗೆ ಕಿರಿಕಿರಿ ಆಗುತ್ತಿದೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಜನವಸತಿ ಹಾಗೂ ವಾಹನಗಳ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಕ್ಯಾಬ್‌ ನಿಲ್ಲಿಸಿ ಗುಂಪಾಗಿ ಸೇರುವ ಚಾಲಕರು, ಸ್ಥಳದಲ್ಲಿ ಸಿಗರೇಟು ಹಾಗೂ ಬೀಡಿ ಸೇದುತ್ತಿದ್ದಾರೆ. ಕೆಲವು ಕಡೆ ವಾಹನಗಳ ನಿಲುಗಡೆಗೆ ಅವಕಾಶವಿದ್ದರೂ ರಸ್ತೆಯ ಅಂಚಿನಲ್ಲಿ ಕ್ಯಾಬ್‌ ನಿಲ್ಲಿಸಿ ಸ್ಥಳೀಯರ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ’.

‘ಕ್ಯಾಬ್‌ಗಳನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸುತ್ತಿದ್ದಾರೆ. ಕರ್ಕಶ ಹಾರ್ನ್ ಬಳಸಿ ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಾಲಕರಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ಪಿಕ್‌ ಅಪ್‌’ಗೆ ‘ರಾಂಗ್ ಪಾರ್ಕಿಂಗ್’ ದಂಡ: ‘ಸಂಚಾರ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಕ್ಯಾಬ್ ಚಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸುತ್ತಿರುವುದನ್ನು ಸ್ವಾಗತಿಸುತ್ತೇವೆ’ ಎಂದು ಓಲಾ, ಉಬರ್ ಕ್ಯಾಬ್ ಚಾಲಕರ ಮುಖಂಡ ತನ್ವೀರ್ ಪಾಷಾ ಹೇಳಿದರು.

‘ನಗರದಲ್ಲಿ ನಿತ್ಯ ವಾಹನಗಳ ದಟ್ಟಣೆ ಇರುತ್ತದೆ. ಅದರ ನಡುವೆಯೇ ಚಾಲಕರು, ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ‘ಪಿಕ್‌ಅಪ್‌’ಗೆ ಹೋದಾಗ ರಸ್ತೆ ಬದಿ ಕ್ಯಾಬ್‌ ನಿಲ್ಲಿಸಬೇಕಾಗುತ್ತದೆ. ಅದನ್ನೇ ‘ರಾಂಗ್‌ ಪಾರ್ಕಿಂಗ್ (ತಪ್ಪು ನಿಲುಗಡೆ)’ ಎಂದು ತೀರ್ಮಾನಿಸಿ ಪೊಲೀಸರು ದಂಡ ವಿಧಿಸುತ್ತಿದ್ದಾರೆ’ ಎಂದು ದೂರಿದರು.

‘ಪ್ರಕರಣ ದಾಖಲಿಸಿ ದಂಡ ವಿಧಿಸುವುದರಿಂದ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆ ಆಗುವುದಿಲ್ಲ. ಬದಲಿಗೆ, ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಆ ನಿಟ್ಟಿನಲ್ಲಿ ಪೊಲೀಸ್ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಬಿಎಂಟಿಸಿ ನಿಲ್ದಾಣಗಳಲ್ಲೂ ಕ್ಯಾಬ್ ನಿಲುಗಡೆ

2018ರಲ್ಲಿ 2,511 ಚಾಲಕರು ಬಿಎಂಟಿಸಿ ನಿಲ್ದಾಣಗಳಲ್ಲೂ ಕ್ಯಾಬ್‌ಗಳನ್ನು ನಿಲುಗಡೆ ಮಾಡಿದ್ದು, ಅಂಥವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

‘ಬಿಎಂಟಿಸಿ ಬಸ್‌ಗಳಿಗೆ ಮಾತ್ರ ನಿಲ್ದಾಣದಲ್ಲಿ ಪ್ರವೇಶವಿರುತ್ತದೆ. ಜಾಗ ಖಾಲಿ ಇದೆ ಎಂಬ ಕಾರಣಕ್ಕೆ ಕ್ಯಾಬ್‌ ಚಾಲಕರು ನಿಲ್ದಾಣದೊಳಗೆ ಹೋಗಿ ಕ್ಯಾಬ್ ನಿಲ್ಲಿಸುತ್ತಿದ್ದಾರೆ. ಅದರಿಂದ ಬಸ್‌ಗಳು ಹಾಗೂ ಪ್ರಯಾಣಿಕರ ಓಡಾಟಕ್ಕೆ ತೊಂದರೆ ಆಗುತ್ತಿದೆ. ಅಂಥ ಕ್ಯಾಬ್‌ಗಳ ವಿರುದ್ಧ ಪ್ರಕರಣ ದಾಖಲಿಸುವ ಕೆಲಸವೂ ನಡೆಯುತ್ತಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT