ಶನಿವಾರ, ಜನವರಿ 25, 2020
29 °C
ಇನ್ನಷ್ಟು ಸುಧಾರಣೆಗೆ ಸಲಹೆ

ಸಂಚಾರ ದಟ್ಟಣೆ; ಪೊಲೀಸರ ಕಾರ್ಯಕ್ಕೆ ನಾಗರಿಕರ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಇಲಾಖೆಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಗರದ ಪೊಲೀಸ್ ಇಲಾಖೆಯ ‘ಚಿಂತನ’ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ಅವರು ನಗರದಲ್ಲಿ ಸಂಚಾರ ದಟ್ಟಣೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.

‘ಸಿದ್ಧೇಶ್ವರ ದೇವಸ್ಥಾನ ಮುಂಭಾಗ, ರಾಮ ಮಂದಿರ ರಸ್ತೆ, ಸರ್ಕಾರಿ ಬಾಲಕರ ಕಾಲೇಜಿನಿಂದ ಮೀನಾಕ್ಷಿ ಚೌಕ್, ಮನಗೂಳಿ ಅಗಸಿ ಸೇರಿದಂತೆ ಅನೇಕ ಕಡೆ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ಇದರಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದಿದೆ. ವಜ್ರಹನುಮಾನ್ ಗೇಟ್, ಇಬ್ರಾಹಿಂಪುರಂ ಗೇಟ್ ಬಳಿಯ ರಸ್ತೆಗಳಲ್ಲಿ ವಿಭಜಕಗಳನ್ನು ಅಳವಡಿಸಲಾಗಿದೆ. ಹೀಗಾಗಿ, ವಾಹನ ಸವಾರರಿಗೆ ಅನುಕೂಲವಾಗಿದೆ’ ಎಂದು ಹೇಳಿದರು.

‘ವಿಜಯಪುರ ನಗರವು ವಾಣಿಜ್ಯ ಹಾಗೂ ಪ್ರವಾಸೋದ್ಯಮ ಕೇಂದ್ರವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು, ಉದ್ಯಮಿಗಳು ಇಲ್ಲಿಗೆ ಬರುತ್ತಾರೆ. ಹೀಗಾಗಿ, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ವಹಿಸಲಾಗಿದೆ’ ಎಂದರು.

ಶಾಸಕ ಸುನಿಲ್‌ಗೌಡ ಪಾಟೀಲ ಮಾತನಾಡಿ, ‘ಶ್ರೀಲಂಕಾದಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ವ್ಯವಸ್ಥೆ ಅದ್ಭುತವಾಗಿದೆ. ಪೊಲೀಸ್ ಇಲಾಖೆ ಕೈಗೊಳ್ಳುವ ಕಾರ್ಯಗಳಿಗೆ ನಾಗರಿಕರು ಸಹಕಾರ ನೀಡಬೇಕು. ಎಂ.ಬಿ.ಪಾಟೀಲ ಫೌಂಡೇಷನ್ ವತಿಯಿಂದ 15 ಸಾವಿರ ಹೆಲ್ಮೆಟ್ ವಿತರಿಸಲಾಗಿದ್ದು, ಅಗತ್ಯ ನೆರವು ನೀಡಲು ಬದ್ಧರಿದ್ದೇವೆ’ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಸಂಚಾರ ವೃತ್ತ ನಿರೀಕ್ಷಕರ ಹುದ್ದೆ ಮಂಜೂರಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ರಸ್ತೆಗಳ ಪ್ರಗತಿಗಾಗಿಯೇ ₹150 ಕೋಟಿ ಅನುದಾನ ಬಿಡುಗಡೆಗೊಳ್ಳಲಿದೆ.

ನಗರದಲ್ಲಿ ಇನ್ನೊಂದು ಸಂಚಾರ ಪೊಲೀಸ್ ಠಾಣೆಯನ್ನು ಆರಂಭಿಸುವಂತೆ ಪೊಲೀಸ್ ಇಲಾಖೆಯು ಪ್ರಸ್ತಾವ ಸಲ್ಲಿಸಿದೆ. ಗೃಹ ಸಚಿವರ ಜೊತೆ ಚರ್ಚಿಸಿ, ಮುಂಬರುವ ಬಜೆಟ್‌ನಲ್ಲಿ ಸಂಚಾರ ಠಾಣೆಯನ್ನು ಮಂಜೂರು ಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಗಾಂಧಿ ಚೌಕ್‌ಗೆ ಹೊಂದಿಕೊಂಡು ₹50 ಲಕ್ಷ ವೆಚ್ಚದಲ್ಲಿ ಅಂಡರ್‌ಪಾಸ್‌ ಮಾರ್ಗವನ್ನು ನಿರ್ಮಿಸಲಾಗುವುದು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯನ್ನು ಸ್ಥಳಾಂತರ ಮಾಡಿ, ವಾಣಿಜ್ಯ ಸಂಕೀರ್ಣ ನಿರ್ಮಿಸಿ, ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಡಿವೈಎಸ್‌ಪಿ ಲಕ್ಷ್ಮೀನಾರಾಯಣ, ಸಿಪಿಐಗಳಾದ ರವೀಂದ್ರ ನಾಯ್ಕೋಡಿ, ಸುನೀಲ ಕಾಂಬಳೆ, ಚಂದ್ರಕಾಂತ ನೀಲಗಾರ, ಶಕೀಲಾ ಪಿಂಜಾರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು