ಗುರುವಾರ , ಆಗಸ್ಟ್ 22, 2019
26 °C
ನಗರದೆಲ್ಲೆಡೆ ಹಬ್ಬದ ಸಡಗರ * ಅಷ್ಟ ಐಶ್ವರ್ಯಗಳ ಅಧಿದೇವತೆಯ ಆರಾಧನೆ

ವರಮಹಾಲಕ್ಷ್ಮಿಗೆ ಬೇಡಿಕೆಯ ತೋರಣ

Published:
Updated:
Prajavani

ಬೆಂಗಳೂರು: ಶ್ರಾವಣ ಮಾಸದ ಮೊದಲ ಹಬ್ಬ ವರಮಹಾಲಕ್ಷ್ಮಿ ವ್ರತವನ್ನು ನಗರದಾದ್ಯಂತ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ಶೇಷಾದ್ರಿಪುರ ಮತ್ತು ಮಹಾಲಕ್ಷ್ಮಿ ಲೇಔಟ್‌ನ ಲಕ್ಷ್ಮಿ ದೇಗುಲಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. 

ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಅಂಗಳವನ್ನು ಚಿತ್ತಾಕರ್ಷಕಗೊಳಿಸಿದ್ದರು. ಬಾಗಿಲಿಗೆ ತಳಿರು ತೋರಣ ಕಟ್ಟಿ ಸಿಂಗರಿಸಿದ್ದರು. ಬೆಳಿಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಭೇಟಿ ನಗರದ ಮಹಾಲಕ್ಷ್ಮಿ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಮನೆಯಲ್ಲಿನ ದೇವರ ಕೋಣೆಯನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಲಕ್ಷ್ಮಿದೇವಿ ಫೋಟೊ ಎದುರು ಹಣ, ಒಡವೆ, ಸಿಹಿ ತಿಂಡಿ ಹಾಗೂ ವಿವಿಧ ಬಗೆಯ ಹಣ್ಣು–ಹೂವು ಇಟ್ಟು ಪೂಜೆ ಸಲ್ಲಿಸಿದರು. ಕೆಲ ಮನೆಗಳಲ್ಲಿ ಲಕ್ಷ್ಮಿ ಕಳಶ ಪ್ರತಿಷ್ಠಾಪಿಸಿ, ಸೀರೆ ಹಾಗೂ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಆರ್ಥಿಕವಾಗಿ ಸ್ಥಿತಿವಂತರಾದವರಮನೆಗಳಲ್ಲಿ ಚಿನ್ನಾಭರಣ ಹಾಗೂ ಹಣ ಇಟ್ಟು ಪೂಜೆ ಮಾಡಿದರೆ, ಬಡ ಹಾಗೂ ಮಧ್ಯಮ ವರ್ಗದ ಜನರು ಹೂವು, ಹಣ್ಣುಗಳಿಂದ ಸಂಪತ್ತಿನ ಅಧಿದೇವತೆಯನ್ನು ಆರಾಧಿಸಿದರು. ಅಕ್ಕಪಕ್ಕದ ಮನೆಗಳ ಮಹಿಳೆಯರನ್ನು ಮನೆಗೆ ಕರೆದು ಅರಿಶಿಣ, ಕುಂಕುಮ, ಬಳೆ, ಹೂವು ಹಾಗೂ ತಾಂಬೂಲ ಕೊಟ್ಟು ಸತ್ಕರಿಸಿದರು.

ವಿವಿಧ ಖಾದ್ಯಗಳು: ಶಾವಿಗೆ ಪಾಯಸ, ಅಕ್ಕಿ ಪಾಯಸ, ಒಬ್ಬಟ್ಟು, ಕೋಸಂಬರಿ, ಹಪ್ಪಳ, ತರಕಾರಿಯ ಪಲ್ಯ ಮತ್ತಿತರ ಖಾದ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಮಾಡಿದರು.

ಹಬ್ಬದ ಸಡಗರವನ್ನು ಬೆಲೆ ಏರಿಕೆ ಕಡಿಮೆ ಮಾಡಲಿಲ್ಲ. ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳಲ್ಲಿ ವರಮಹಾಲಕ್ಷ್ಮಿ ಪೂಜೆ ಜೋರಾಗಿತ್ತು. ಬ್ಯಾಂಕುಗಳ ಕಚೇರಿಯಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು.

Post Comments (+)