ಗುರುವಾರ , ಸೆಪ್ಟೆಂಬರ್ 19, 2019
26 °C
ಆರ್‌ಎಫ್‌ಒನಿಂದ ಅನ್ಯಾಯ

ವಿಧಾನಸೌಧ ಎದುರು ಆತ್ಮಹತ್ಯೆಗೆ ಯತ್ನ, ಪ್ರತಿಭಟನೆ

Published:
Updated:
Prajavani

ಬೆಂಗಳೂರು: ‘ಬನ್ನೇರುಘಟ್ಟದಲ್ಲಿ ಕೆಲಸ ಮಾಡಿದ್ದ ಪ್ರಾದೇಶಿಕ ಅರಣ್ಯ ಅಧಿಕಾರಿಯೊಬ್ಬರಿಂದ (ಆರ್‌ಎಫ್‌ಒ) ನಮಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿ ಅಶ್ವತ್‌ ಗೌಡ ಎಂಬುವರು ತಮ್ಮ ಪತ್ನಿ ಹಾಗೂ ಮಗನ ಜೊತೆ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆ ಎದುರು ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಆರ್‌ಎಫ್‌ಒ ವಿರುದ್ಧ ಘೋಷಣಾ ಫಲಕ ಪ್ರದರ್ಶಿಸಿದ  ಕುಟುಂಬ, ನ್ಯಾಯಕ್ಕಾಗಿ ಆಗ್ರಹಿಸಿತು. ‘ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಪ್ರತಿಭಟನಾಕಾರರು ಹೇಳಿದರು. ವಿಧಾನಸೌಧ ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದ ಪೊಲೀಸರು, ಸಂಜೆ ಬಿಟ್ಟು ಕಳುಹಿಸಿದರು.

ಕಾರ್ಮಿಕನ ಜೀವವೂ ಹೋಯ್ತು: ಸುದ್ದಿಗಾರರ ಜೊತೆ ಮಾತನಾಡಿದ ಅಶ್ವಥ್‌ ಗೌಡ, ‘ಶಿಡ್ಲಘಟ್ಟದ ನಾನು, ಬನ್ನೇರುಘಟ್ಟದಲ್ಲಿ ವಾಸವಿದ್ದೇನೆ. 2008ರಲ್ಲಿ ಆರ್‌ಎಫ್‌ಒ ಆಗಿದ್ದ ಸತ್ಯನಾರಾಯಣ, ಮರಗಳ ಅಕ್ರಮ ಸಾಗಣೆಗಾಗಿ ನನ್ನ ಟ್ರ್ಯಾಕ್ಟರ್‌ ಅನ್ನು ಬಲವಂತವಾಗಿ ತೆಗೆದುಕೊಂಡು ಹೋಗಿದ್ದರು’ ಎಂದು ಹೇಳಿದರು.

‘ಮರಗಳ ಸಾಗಣೆ ವೇಳೆ ಟ್ರ್ಯಾಕ್ಟರ್ ಉರುಳಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದರು. ಆ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗದಂತೆ ನೋಡಿಕೊಂಡಿದ್ದ ಸತ್ಯನಾರಾಯಣ, ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಅವರು ಇದುವರೆಗೂ ಭರವಸೆ ಈಡೇರಿಸಿಲ್ಲ’ ಎಂದು ದೂರಿದರು.

’ಬನ್ನೇರುಘಟ್ಟದಲ್ಲಿ ದೂರು ದಾಖಲಿಸಲು ಸಲಹೆ’
‘ಅಶ್ವಥ್ ಗೌಡ ಹಾಗೂ ಅವರ ಕುಟುಂಬದವರಿಗೆ ಬುದ್ಧಿ ಹೇಳಿ ಬಿಟ್ಟು ಕಳುಹಿಸಲಾಗಿದೆ. 2008ರಲ್ಲಿ ಬನ್ನೇರುಘಟ್ಟ ಅರಣ್ಯದಲ್ಲಿ ನಡೆದ ಅಪಘಾತದ ಬಗ್ಗೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸುವಂತೆ ಸಲಹೆ ನೀಡಲಾಗಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು. 

Post Comments (+)