ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನೋವಿಗೆ ಮಿಡಿದ ವಿಜಯಶಂಕರ

Last Updated 29 ನವೆಂಬರ್ 2018, 20:50 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರು, ಹಿರಿಯ ನಾಗರಿಕರಿಗೆ ಮಾತೃ ಹೃದಯದ ಸ್ಪಂದನ, ಉದ್ಯೋಗದ ಸಮಸ್ಯೆ ಹೇಳಿಕೊಂಡವರಿಗೆ ನವಿರಾದ ಹಾಸ್ಯ ಮಿಶ್ರಿತ ಧ್ವನಿಯಲ್ಲಿ ಭರವಸೆ, ಸಂಬಂಧವಿಲ್ಲದ ಕರೆಗಳಿಗೂ ಸಾವಧಾನದ ಉತ್ತರ, ಏರುಧ್ವನಿಯಲ್ಲಿ ಮಾತನಾಡುತ್ತಿದ್ದವರಿಗೆ ಜಿಲ್ಲಾಧಿಕಾರಿ ಗತ್ತು ತೋರಿ ಗದರಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯಶಂಕರ್ ಅವರ ಮಾತಿನ ವೈಖರಿ ಮೇಲಿನಂತೆ ಇತ್ತು.

ಜನರ ಸಮಸ್ಯೆಗಳೇನು ಎಂಬುದನ್ನು ಅರಿತಿದ್ದ ಜಿಲ್ಲಾಧಿಕಾರಿ, ಇದಕ್ಕೆ ಉತ್ತರ ನೀಡಲು ಬೇಕಾಗುವ ದಾಖಲೆಗಳು ಹಾಗೂ ಸಂಬಂಧ ಪಟ್ಟ ಹಿರಿಯ–ಕಿರಿಯ ಅಧಿಕಾರಿಗಳ ಜತೆಗೆ ಬಂದಿದ್ದರು. ಸುಮಾರು ಎರಡೂಕಾಲು ಗಂಟೆ ಎಡಬಿಡದೇ ಬಂದ ಕರೆಗಳಿಗೆ ಸಮಾಧಾನದಿಂದಲೇ ಉತ್ತರಿಸಿದರು. ಕರೆ ಬರುವುದು ಅರೆಕ್ಷಣ ಬಿಡುವುದಾಗ ತಮ್ಮ ಸಹೋದ್ಯೋಗಿಗಳಿಗೆ ಲಘುವಾಗಿ ಕುಟುಕುತ್ತಿದ್ದರು. ಅಲ್ಲದೇ, ಹಿಂದಿನ ಕರೆಯಲ್ಲಿ ಹೇಳಿಕೊಂಡವರ ದೂರಿಗೆ ಸಂಬಂಧಿಸಿ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನೂ ನೀಡುತ್ತಿದ್ದರು. ಸಂಬಂಧಪಟ್ಟ ತಹಶೀಲ್ದಾರರನ್ನು ಕರೆಸಿ ಜನರ ಅಹವಾಲುಗಳನ್ನು ಡೈರಿಯಲ್ಲಿ ಬರೆದುಕೊಳ್ಳುವಂತೆ ಸೂಚಿಸಿದರು. ಕಾಲಮಿತಿಯಲ್ಲಿ ಪರಿಹರಿಸುವಂತೆ ಆದೇಶಿಸಿದರು.

ಜಾಗದ ಸರ್ವೆ ಹಾಗೂ ಪೋಡಿಗಾಗಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೇ ಕಾಯುತ್ತ ಕುಳಿತಿದ್ದ ಸಾರ್ವಜನಿಕರ ಗೋಳನ್ನು ‘ಫೋನ್‌–ಇನ್’ ಕಾರ್ಯಕ್ರಮದ ಮೂಲಕ ಆಲಿಸಿದ ಜಿಲ್ಲಾಧಿಕಾರಿ ವಿಜಯಶಂಕರ್, ಆದಷ್ಟು ಬೇಗನೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

‘ರಾಜ್ಯದಾದ್ಯಂತ ಸರ್ವೇಯರ್ ಸಮಸ್ಯೆ ಇದೆ. ಸಾಧ್ಯವಾದಷ್ಟು ಸರ್ವೇಯರ್‌ಗಳನ್ನು ನೇಮಕ ಮಾಡಿ ಕೆಲಸ ಮಾಡಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಒತ್ತುವರಿ ಪತ್ತೆ ಹಾಗೂ ತೆರವು ಕೆಲಸವೇ ಬಹಳ ಇದೆ. ಹೀಗಾಗಿ, ವಿಳಂಬವಾಗಿರಬಹುದು. ಅರ್ಜಿ ಸಲ್ಲಿಸಿದರೂ ನಿಗದಿತ ಸಮಯದಲ್ಲಿ ಸರ್ವೆ ಹಾಗೂ ಪೋಡಿ ಆಗದಿದ್ದರೆ ಸಾರ್ವಜನಿಕರು ತಹಶೀಲ್ದಾರ್ ಅಥವಾ ನನಗೆ ಅರ್ಜಿ ಸಲ್ಲಿಸಬಹುದು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಕೊಡೋದು ನಿಲ್ಲಿಸಿ, ಪಡೆಯುವವರು ತೆಪ್ಪಗಾಗ್ತಾರೆ’

‘ಸಾರ್ವಜನಿಕರು ಎಲ್ಲಿಯವರೆಗೂ ಲಂಚ ಕೊಡುತ್ತಾರೋ ಅಲ್ಲಿಯವರೆಗೂ ತೆಗೆದುಕೊಳ್ಳುವವರೂ ಇರುತ್ತಾರೆ. ಸಾರ್ವಜನಿಕರು ಕಾನೂನುಬದ್ಧವಾಗಿ ಸಮರ್ಪಕ ದಾಖಲೆಗಳನ್ನು ಕೊಟ್ಟು ಸರದಿಯಲ್ಲಿ ನಿಂತು ಕೆಲಸ ಮಾಡಿಸಿಕೊಳ್ಳಬೇಕು. ಯಾರಿಗೂ ಲಂಚ ಕೊಡಬಾರದು. ಯಾರಾದರೂ ಕೇಳಿದರೆ ನನಗೆ ದೂರು ಕೊಡಿ’ ಎಂದು ತಿಳಿಸಿದರು.

‘ಆದಾಯ ಹಾಗೂ ಜಾತಿ ಪ್ರಮಾಣಪತ್ರ, ಮಾಸಾಶನ ಸೇರಿದಂತೆ ಹಲವು ಸೌಲಭ್ಯಕ್ಕೆ ಅಧಿಕಾರಿಗಳು ಮತ್ತು ದಲ್ಲಾಳಿಗಳು ಲಂಚ ಕೇಳುತ್ತಾರೆ’ ಎಂಬ ಸಾರ್ವಜನಿಕರ ದೂರಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಲಂಚದ ಬಗ್ಗೆ ನನಗೂ ದೂರುಗಳು ಬರುತ್ತಿವೆ. ಬುಧವಾರವಷ್ಟೇ ರಾಜಾಜಿನಗರ ನಾಡಕಚೇರಿಗೆ ಭೇಟಿ ನೀಡಿ, ಇಬ್ಬರು ದಲ್ಲಾಳಿಗಳನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ನನ್ನ ಈ ಭೇಟಿ ಹೀಗೆಯೇ ಮುಂದುವರಿಯಲಿದೆ’ ಎಂದರು.

‘ವ್ಯವಸ್ಥೆಯನ್ನು ಸುಧಾರಣೆ ಮಾಡಬೇಕಿದೆ. ಅದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು’ ಎಂದರು.

ದಾಕ್ಷಾಯಿಣಿ, ನಾಗರಬಾವಿ: ಸರ್ವೆಗಾಗಿ 2017ರ ಡಿಸೆಂಬರ್ 18ರಂದು ₹1,200 ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಿದ್ದೆ. ಇದುವರೆಗೂ ಕೆಲಸ ಆಗಿಲ್ಲ.

ಜಿಲ್ಲಾಧಿಕಾರಿ: ನಿಮಗೆ ಅಧಿಕಾರಿಗಳು ಹಿಂಬರಹ ಕೊಟ್ಟಿದ್ದರೆ, ಅದನ್ನು ತೆಗೆದುಕೊಂಡು ತಹಶೀಲ್ದಾರ್‌ ಅವರನ್ನು ಭೇಟಿಯಾಗಿ ಮಾಹಿತಿ ನೀಡಿ. ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತಾರೆ

**

ಮುನಿನಂಜಮ್ಮ, ಜಾಲ ಹೋಬಳಿ: ಏಕವ್ಯಕ್ತಿ ಪೋಡಿಗಾಗಿ ಅರ್ಜಿ ಸಲ್ಲಿಸಿ 5 ವರ್ಷ ಆಗಿದೆ. ಯಾರೂ ಬಂದಿಲ್ಲ.

ಜಿಲ್ಲಾಧಿಕಾರಿ: ಜಾಲ ಹೋಬಳಿ ಯಲ್ಲಿ ಕೆಲವು ದಾಖಲೆಗಳು ಸರಿ ಇಲ್ಲ. ದಾಖಲೆ ಪರಿಶೀಲನೆ ಮಾಡಿ ಪೋಡಿ ಮಾಡಬೇಕಾಗಿದೆ. ನಿಮ್ಮ ಬಳಿಯ ದಾಖಲೆಗಳನ್ನು ತೆಗೆದುಕೊಂಡು ಯಲಹಂಕ ತಹಶೀಲ್ದಾರ್ ಮಂಜುನಾಥ್ ಅವರನ್ನು ಸಂಪರ್ಕಿಸಿ. ಅವರೇ ಪರಿಹಾರ ಸೂಚಿಸುತ್ತಾರೆ.

**

ಮುನಿವೆಂಕಟಪ್ಪ, ಸೋಮನಹಳ್ಳಿ:ಸೋಮನಹಳ್ಳಿ ಗ್ರಾಮದ ಸರ್ವೇ ನಂಬರ್ 94/1ರಲ್ಲಿ ಪಹಣಿಯಲ್ಲಿ ವಿಸ್ತೀರ್ಣ ಬಿಟ್ಟು ಹೋಗಿದೆ. ದಯವಿಟ್ಟು ಸರಿಪಡಿಸಿ.ನಾನು ಕಾಂತರಾಜು ಸಂಬಂಧಿ.

ಜಿಲ್ಲಾಧಿಕಾರಿ:ಯಾರ ಸಂಬಂಧಿ ಆದರೇನು. ಎಲ್ಲರೂ ಒಂದೇ. ನನ್ನ ಸಂಬಂಧಿಯಾದರೂ, ಬೇರೆಯವರ ಸಂಬಂಧಿ ಆದರೂ ಕೆಲಸ ಮಾಡಿ ಕೊಡುತ್ತೇವೆ. ನಾಳೆ ಅಥವಾ ಸೋಮವಾರ, ಉಪವಿಭಾಗಾಧಿಕಾರಿಯವರನ್ನು ಭೇಟಿ ಮಾಡಿ.

**

ಗವಿಯಪ್ಪ, ಆನೇಕಲ್: ಪೋಡಿಗೆ ಅರ್ಜಿ ಕೊಟ್ಟು ಬಹಳ ದಿನ ಆಯ್ತು ಸರ್. ಮಾಡಿಸಿಕೊಡಿ.

ಜಿಲ್ಲಾಧಿಕಾರಿ: ತಹಶೀಲ್ದಾರ್‌ ಅವರಿಗೆ ನಿಮ್ಮ ನಂಬರ್ ಕೊಡುತ್ತೇನೆ. ಅವರೇ ನಿಮ್ಮ ಜೊತೆ ಮಾತನಾಡಿ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತಾರೆ.

ವಾಸುದೇವಮೂರ್ತಿ, ತಲಘಟ್ಟಪುರ: ಪೋಡಿಗಾಗಿ ಅರ್ಜಿ ಕೊಟ್ಟು ಮೂರೂವರೆ ತಿಂಗಳಾಯಿತು. ಕೆಲಸವೇ ಆಗಿಲ್ಲ

ಜಿಲ್ಲಾಧಿಕಾರಿ: ಭೂದಾಖಲೆ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ಕೊಡುತ್ತೇನೆ

**

ಸುಮಾ, ಕಾಚನಾಯಕನಹಳ್ಳಿ: ‘ಉಳುವವನೇ ಭೂ ಒಡೆಯ’ ಯೋಜನೆಯಲ್ಲಿ ನಮ್ಮ ಮಾವನಿಗೆ 12 ಎಕರೆ ಜಮೀನು ಬಂದಿದೆ. ಅದನ್ನು ಈಗ ಹಂಚಿಕೆ ಮಾಡಲಾಗುತ್ತಿದೆ. ಅಳತೆ ಮಾಡುವಾಗ, ಪೋಡಿ ಆಗಿಲ್ಲ, ಅದು ಇಲ್ಲ, ಇದು ಇಲ್ಲ ಅಂತಾ ಅಧಿಕಾರಿಗಳು ಹೇಳುತ್ತಿದ್ದಾರೆ.

ಜಿಲ್ಲಾಧಿಕಾರಿ: ತಹಶೀಲ್ದಾರ್‌ಗೆ ಅರ್ಜಿ ಕೊಡಿ. ಸಾಧ್ಯವಾದರೆ, ಬೆಂಗಳೂರು ಕಂದಾಯ ಭವನದಲ್ಲಿ ಉಪ ವಿಭಾಗಾಧಿಕಾರಿ ಡಾ.ಬಿ.ಆರ್‌. ಹರೀಶ್ ನಾಯಕ್‌ ಅವರನ್ನು ಭೇಟಿ ಮಾಡಿ ದೂರು ನೀಡಿ.

**

ನಂಜಪ್ಪ, ಹಂಪಾಪುರ: ನನ್ನ ತಂದೆಯದ್ದು ಆಸ್ತಿ ಇದೆ. ನನ್ನ ಅಣ್ಣ ನನ್ನ ಹೆಸರು ಬಿಟ್ಟು ಪಹಣಿ ಮಾಡಿಸಿಕೊಂಡಿದ್ದಾನೆ. ಅದರಲ್ಲಿ ನನ್ನ ಹೆಸರು ಸೇರಿಸಲು ಕೋರಿ ಉಪವಿಭಾಗಾಧಿಕಾರಿ ಬಳಿ ಮೊಕದ್ದಮೆ ಹೂಡಿದ್ದೇನೆ. ಬೇಗ ಆದೇಶ ಮಾಡಿಸಿ.

ಜಿಲ್ಲಾಧಿಕಾರಿ: ಉಪ ವಿಭಾಗಾಧಿಕಾರಿ ಅವರು ವಿಚಾರಣೆಗೆ ದಿನಾಂಕ ನಿಗದಿಪಡಿಸಿ ನಿಮಗೆ ತಿಳಿಸುತ್ತಾರೆ. ನೀವು ವಕೀಲರ ಮೂಲಕ ಹಾಜರಾಗಿ, ಬೇಗನೇ ಆದೇಶ ಕೊಡುತ್ತಾರೆ.

**

ವಿನಯ, ರಾಯಸಂದ್ರ: ಜಾಗ ಸರ್ವೆ ಮಾಡಲು ಅಧಿಕಾರಿಗಳು ಹೆಚ್ಚುವರಿ ಶುಲ್ಕ ಕೇಳುತ್ತಿದ್ದಾರೆ. ಕೊಡಬೇಕಾ?

ಜಿಲ್ಲಾಧಿಕಾರಿ: ಯಾವುದೇ ಹೆಚ್ಚುವರಿ ಶುಲ್ಕ ಕೊಡಬೇಕಿಲ್ಲ. ಆ ರೀತಿ ಯಾರಾದರೂ ಕೇಳಿದರೆ ನನಗೆ ದೂರು ಕೊಡಿ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ.

**

ಅರ್ಜಿ ಪಡೆಯಲು ಪಿಡಿಒ ಹಿಂದೇಟು

ಇಂದ್ರಕುಮಾರ್,ದಾಸನಪುರ: ರಾಜೀವ್ ಗಾಂಧಿ ವಸತಿ ನಿಗಮದಿಂದ 2005–06ರಲ್ಲಿ ನಿವೇಶನ ಮಂಜೂರು ಆಗಿದೆ. ಆರಂಭದಲ್ಲಿ ಶುಲ್ಕವೆಂದು ₹5,000 ಕಟ್ಟಿದ್ದೆ. ಇದುವರೆಗೂ ಹಕ್ಕು ಪತ್ರ ಕೊಟ್ಟಿಲ್ಲ. ಅದಕ್ಕಾಗಿ ನಿಗಮದವರನ್ನು ಸಂಪರ್ಕಿಸಿದರೂ ಪ್ರಯೋಜನ ಆಗುತ್ತಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿ (ಪಿಡಿಒ) ಸಹ ಅರ್ಜಿ ಪ‍ಡೆಯುತ್ತಿಲ್ಲ.

ಜಿಲ್ಲಾಧಿಕಾರಿ: ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅರ್ಚನಾ ಅವರಿಗೆ ಅರ್ಜಿ ಕೊಡಿ. ನಿಮ್ಮ ಸಮಸ್ಯೆಗೆ ಅವರು ಪರಿಹಾರ ಸೂಚಿಸುತ್ತಾರೆ.

**

ಸರ್ಕಾರಿ ಶಾಲೆ ಕಟ್ಟಡಕ್ಕೆ ಜಾಗ ಕೊಡಿ

ಧನಲಕ್ಷ್ಮಿ, ಬೆಳ್ಳಳ್ಳಿ: ಸರ್ಕಾರಿ ಶಾಲೆ ನಿರ್ಮಾಣಕ್ಕೆ ಇದ್ದ ಜಾಗದಲ್ಲಿ ಈದ್ಗಾ ಇದೆ. ಆ ಸಂಬಂಧ ವ್ಯಾಜ್ಯ ಸಹ ಇದೆ. ದಯವಿಟ್ಟು ಶಾಲೆ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಡಿ

ಜಿಲ್ಲಾಧಿಕಾರಿ: ಬೆಳ್ಳಳ್ಳಿಯು 600 ಎಕರೆ ಜಾಗದಲ್ಲಿದೆ. ಅಲ್ಲಿಯ ಜಾಗವನ್ನು ಹಲವು ವರ್ಷಗಳ ಹಿಂದೆಯೇ ವಕ್ಫ್ ಬೋರ್ಡ್‌ಗೆ ನೀಡಲಾಗಿದೆ. ಈಗಾಗಲೇ ಅಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. 1 ಎಕರೆ 20 ಗುಂಟೆ ಜಾಗವನ್ನು ಸರ್ಕಾರಿ ಶಾಲೆಗೆ ನೀಡಲು ತಹಶೀಲ್ದಾರ್ ಸಹ ಪ್ರಸ್ತಾವ ಕಳುಹಿಸಿದ್ದಾರೆ.

**

ಕೊಲೆ ಬೆದರಿಕೆಗೆ ಹೆದರಬೇಡಿ

ಕಾಳೇಗೌಡ, ಆಲೂರು, ದಾಸನಪುರ ಹೋಬಳಿ: ನನ್ನ ಜಾಗದ ಸಂಬಂಧ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮೊಕದ್ದಮೆ ಇದೆ. ಆದರೆ, ಕೆಲವರು ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ.

ಜಿಲ್ಲಾಧಿಕಾರಿ:ಬೆಂಗಳೂರಿನಲ್ಲಿ ಕೊಲೆ ಮಾಡುತ್ತೇನೆ ಎಂದೇ ಎಲ್ಲರೂ ಹೆದರಿಸೋದು. ನೀವೇನು ಹೆದರಬೇಡಿ. ನಿಮ್ಮ ಮೊಕದ್ದಮೆ ಬಗ್ಗೆ ತಿಳಿದುಕೊಂಡು ಸಮಸ್ಯೆ ಬಗೆಹರಿಸುತ್ತೇನೆ

**

ಸರ್ವಜ್ಞನಗರ ಜಿಮ್ಖಾನ್ ಕ್ಲಬ್ ಜಾಗ; ಸಮಿತಿಯಲ್ಲಿ ಪ್ರಕರಣ

ಸರ್ವಜ್ಞನಗರ ನಿವಾಸಿಗಳ ವೇದಿಕೆ: ಜಿಮ್ಖಾನ್ ಕ್ಲಬ್‌ ಜಾಗದ ಸಮಸ್ಯೆ ಬಗೆಹರಿಸಿ.

ಜಿಲ್ಲಾಧಿಕಾರಿ: ಆ ಜಾಗದ ಬಗ್ಗೆ ಮೇಲ್ಮನವಿ ಸಮಿತಿಯಲ್ಲಿ ಪ್ರಕರಣ ಇದೆ. ಸಮಿತಿ ಸದಸ್ಯರು, ಬಿಬಿಎಂಪಿ ಆಯುಕ್ತರ ಜೊತೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸಮಿತಿಯೇ ಜಾಗದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು.

**

ಕಚೇರಿಗೆ ಹೋಗದೇ ‘ಲಂಚ’ ಪಡೆಯುತ್ತಾರೆ ಎಂದರೆ ಹೇಗೆ?

ನಾಗರಬಾವಿಯ ದಾಕ್ಷಾಯಿಣಿ, ‘ಸರ್. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬರೀ ಲಂಚ ಕೇಳುತ್ತಾರೆ. ಅದನ್ನು ಕೊಡದಿದ್ದರೆ ಕೆಲಸವೇ ಆಗುವುದಿಲ್ಲ’ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ: ‘ಲಂಚ ತೆಗೆದುಕೊಳ್ಳುವವರ ಬಗ್ಗೆ ನನ್ನ ಕಚೇರಿಗೆ ಬಂದು ದೂರು ನೀಡಿ. ಕಠಿಣ ಕ್ರಮ ಕೈಗೊಳ್ಳುತ್ತೇನೆ’ ಎಂದರು.

ಆಗ ದಾಕ್ಷಾಯಿಣಿ, ‘ನಿಮ್ಮ ಕಚೇರಿಗೆ ಎಲ್ಲಿದೆ ಸರ್’ ಎನ್ನುತ್ತಿದ್ದಂತೆ, ‘ಏನ್ ಮೇಡಂ. ನಮ್ಮ ಕಚೇರಿಯನ್ನೇ ನೀವು ನೋಡಿಲ್ಲ. ಸುಖಾಸುಮ್ಮನೇ ‘ಲಂಚ’ದ ಆರೋಪ ಮಾಡುತ್ತೀರಾ. ಆ ರೀತಿ ಪುರಾವೆ ಇಲ್ಲದೇ ಮಾತನಾಡಬಾರದು’ ಎಂದು ಜಿಲ್ಲಾಧಿಕಾರಿ ಹೇಳಿದರು. ನಂತರ, ತಾವೇ ಕಚೇರಿ ವಿಳಾಸ ತಿಳಿಸಿದರು.

**

‘ಪಹಣಿಯಲ್ಲಿ ಮರ ಸೇರಿಸಿ’

ಆನೇಕಲ್‌ನ ಮರಸೂರಿನ ಕೃಷ್ಣ ರೆಡ್ಡಿ, ‘ನನ್ನ ಜಮೀನಿನಲ್ಲಿ 20 ವರ್ಷದಿಂದ ನೇರಳೆ ಮರ ಇದೆ. ಆದರೆ, ಅದನ್ನು ಪಹಣಿಯಲ್ಲಿ ಉಲ್ಲೇಖಿಸಿಲ್ಲ. ಜಮೀನು ಪಕ್ಕದಲ್ಲಿರುವ ರಾಜಕಾಲುವೆ ಒತ್ತುವರಿಯಾಗಿದ್ದು, ಅದರ ತೆರವಿಗೂ ಕ್ರಮ ಕೈಗೊಂಡಿಲ್ಲ’ ಎಂದು ಸಮಸ್ಯೆ ಹೇಳಿಕೊಂಡರು.

ಜಿಲ್ಲಾಧಿಕಾರಿ: ‘ಬೆಳೆ ಸಮೀಕ್ಷೆ ಈಗಾಗಲೇ ಮುಗಿದಿದೆ. ಕೆಲವೆಡೆ ಸರಿಯಾಗಿ ಆಗಿಲ್ಲವೆಂದು ಮರು ಸಮೀಕ್ಷೆ ಮಾಡಿಸಲಾಗುತ್ತಿದೆ. ನಿಮ್ಮ ನೇರಳೆ ಮರವನ್ನು ಪಹಣಿಯಲ್ಲಿ ಸೇರಿಸಲು ತಹಶೀಲ್ದಾರ್‌ಗೆ ಹೇಳುತ್ತೇನೆ. ಒತ್ತುವರಿ ತೆರವು ಬಗ್ಗೆಯೂ ಕ್ರಮ ಕೈಗೊಳ್ಳುತ್ತೇವೆ’ ಎಂದರು.

**

ಮೋಹನ್, ಮಲ್ಲೇಶ್ವರ: ಬೆಂಗಳೂರು ಒನ್‌ ಕೇಂದ್ರದಲ್ಲಿ ಜಾತಿ ಪ್ರಮಾಣ ಪತ್ರ ನೀಡಲು ₹1,000 ಕೇಳುತ್ತಾರೆ. ಜೆರಾಕ್ಸ್ ಅಂಗಡಿಯಲ್ಲಿ ಜಾತಿ ಪ್ರಮಾಣ ಪತ್ರದ ಅರ್ಜಿ ನಮೂನೆಯನ್ನು ₹5ಕ್ಕೆ ಮಾರಾಟ ಮಾಡುತ್ತಿದ್ದಾರೆ. ದಲ್ಲಾಳಿಗಳ ಹಾವಳಿಯಂತೂ ಹೇಳತೀರದು.

ಜಿಲ್ಲಾಧಿಕಾರಿ: ನೀವು ಯಾರಿಗೂ ಹಣ ಕೊಡುವುದು ಬೇಡ. ಆ ಕೇಂದ್ರಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ಗೆ ಸೂಚಿಸುತ್ತೇನೆ.

**

ನಂಜುಂಡೇಶ್ವರ, ಬನ್ನೇರುಘಟ್ಟ ರಸ್ತೆ:ಆದಾಯ ಹಾಗೂ ಜಾತಿ ಪ್ರಮಾಣ ಪತ್ರಕ್ಕಾಗಿ ಬನಶಂಕರಿ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದೆ. ಇದುವರೆಗೂ ಪ್ರಮಾಣಪತ್ರ ನೀಡಿಲ್ಲ. ನಾಳೆ ಬನ್ನಿ ಎನ್ನುತ್ತಲೇ ಅಧಿಕಾರಿಗಳು ದಿನಕಳೆಯುತ್ತಿದ್ದಾರೆ.

ಜಿಲ್ಲಾಧಿಕಾರಿ: ನಾನೇ ಖುದ್ದಾಗಿ ಬನಶಂಕರಿ ನಾಡಕಚೇರಿಗೆ ಭೇಟಿ ನೀಡಿದ್ದೆ. ಅಲ್ಲಿ ಕಂಪ್ಯೂಟರ್‌ ಹಾಗೂ ಸರ್ವರ್ ಸಮಸ್ಯೆ ಇದೆ. ಹೆಚ್ಚುವರಿ ಕಂಪ್ಯೂಟರ್ ಹಾಗೂ ಆಪರೇಟರ್ ನೀಡಲು ಕ್ರಮ ಕೈಗೊಂಡಿದ್ದೇನೆ. ಶೀಘ್ರವೇ ನಿಗದಿತ ಸಮಯಕ್ಕೆ ಪ್ರಮಾಣ ಪತ್ರ ಸಿಗುವಂತೆ ಮಾಡುತ್ತೇನೆ. ಜೊತೆಗೆ ನೀವೂ ನಾಡಕಚೇರಿಯಲ್ಲಿ ದಲ್ಲಾಳಿಗಳನ್ನು ಬೆಳೆಸಬೇಡಿ. ಎಲ್ಲರೂ ಸೇರಿ ವ್ಯವಸ್ಥೆ ಸರಿ ಮಾಡೋಣ.

**

ಸುನೀಲ್, ವಿಜಯನಗರ: ಉದ್ಯೋಗ ಹಾಗೂ ಶೈಕ್ಷಣಿಕ ಉದ್ದೇಶಕ್ಕೆ ಬೇರೆ ಬೇರೆಯಾಗಿ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ನೀಡುತ್ತಾರಾ?

ಜಿಲ್ಲಾಧಿಕಾರಿ: ಹೌದು. ಎರಡೂ ಉದ್ದೇಶಕ್ಕೂ ಪ್ರಮಾಣ ಪತ್ರ ನೀಡಲಾಗುತ್ತದೆ. ನಿಮಗೆ ಯಾವ ಉದ್ದೇಶಕ್ಕೆ ಬೇಕೆಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಬೇಕು.

**

ಸುಜಾತಾ, ಎಂ.ಎಸ್. ರಾಮಯ್ಯ ಆಸ್ಪತ್ರೆ: ಮಗನಿಗೆ ಆದಾಯ ಹಾಗೂಜಾತಿ ಪ್ರಮಾಣ ಮಾಡಿಸಬೇಕಿತ್ತು. ಹೇಗೆ ಮಾಡಿಸುವುದು ಎಂದೇ
ಗೊತ್ತಾಗುತ್ತಿಲ್ಲ.

ಜಿಲ್ಲಾಧಿಕಾರಿ: ನಿಮ್ಮ ಮನೆಯ ಸಮೀಪದಲ್ಲಿರುವ ಜೆ.ಪಿ. ಪಾರ್ಕ್‌ ಬಳಿ ನಾಡಕಚೇರಿ ಇದೆ. ನಿಮ್ಮ ಮಗನ ಜನನ ಪ್ರಮಾಣಪತ್ರ, ಮನೆ ವಿಳಾಸ ದಾಖಲೆ ಹಾಗೂ ಆಧಾರ್ ಕಾರ್ಡ್‌ ಸಮೇತ ನಾಡಕಚೇರಿಗೆ ಅರ್ಜಿಸಲ್ಲಿಸಿ.15 ದಿನದೊಳಗೆ ಪ್ರಮಾಣ ಪತ್ರ ನೀಡುತ್ತಾರೆ.

**

ಹೊರ ಜಿಲ್ಲೆಯಿಂದಲೂ ಕರೆ: ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿ ಹೊರ ಜಿಲ್ಲೆಗಳಿಂದಲೂ ಸಾರ್ವಜನಿಕರು ‘ಫೋನ್‌–ಇನ್’ ಕಾರ್ಯಕ್ರಮಕ್ಕೆ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು.

ಚನ್ನರಾಯಪಟ್ಟಣದಿಂದ ಕರೆ ಮಾಡಿದವರೊಬ್ಬರು ತಮ್ಮ ಸಮಸ್ಹೆ ಹೇಳಿಕೊಳ್ಳಲು ಮುಂದಾದರು. ‘ಅಲ್ಲಿಯ ಜಿಲ್ಲೆಯ ಅಧಿಕಾರ ನನಗೆ
ಇಲ್ಲವಲ್ಲಪ್ಪ. ನೀವು ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಬಳಿ ಹೋಗಿ’ ಎಂದು ಸಲಹೆ ನೀಡಿದರು.

ಹೇಗೆ ಕೆಲಸ ಮಾಡಿಸಬೇಕು ಎಂದು ನೀವು ಸಲಹೆ ನೀಡಿ ಎಂದು ಕರೆ ಮಾಡಿದವರು ಬೇಡಿಕೆ ಇಟ್ಟರು. ‘ನಾನು ಜಿಲ್ಲಾಧಿಕಾರಿ, ಹೇಗೆ ಸಲಹೆ ನೀಡಲಿ; ರೋಹಿಣಿ ಬಹಳ ಒಳ್ಳೆಯವರು. ಅವರ ಬಳಿ ನಿಮ್ಮ ಸಮಸ್ಯೆ ಹೇಳಿಕೊಂಡರೆ ಪರಿಹಾರಖಚಿತ’ ಎಂದು ಸಲಹೆಯನ್ನೂ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT