ಶುಕ್ರವಾರ, ಅಕ್ಟೋಬರ್ 18, 2019
28 °C
ಗಂಗಮ್ಮನಗುಡಿ ಠಾಣೆ ವ್ಯಾಪ್ತಿಯಲ್ಲಿ ಅವಘಡ

ಕಾಂಪೌಂಡ್ ಕುಸಿದು ವೃದ್ಧ ಸಾವು

Published:
Updated:

ಬೆಂಗಳೂರು: ಜಾಲಹಳ್ಳಿಯಲ್ಲಿರುವ ವಾಯುಪಡೆ ಕೇಂದ್ರದ ಕಾಂಪೌಂಡ್‌ ಕುಸಿದಿದ್ದರಿಂದ ಪರಮೇಶ್ವರ (69) ಎಂಬುವರು ಮೃತಪಟ್ಟಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

‘ಕೆ.ಆರ್. ಪುರ ನಿವಾಸಿ ಆಗಿದ್ದ ಪರಮೇಶ್ವರ ದಸರಾ ಹಬ್ಬದ ಪ್ರಯುಕ್ತ ಮಂಗಳವಾರ ಮಧ್ಯಾಹ್ನ ಜಾಲಹಳ್ಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬಂದಿದ್ದರು. ಅದೇ ವೇಳೆ ಈ ಅವಘಡ ಸಂಭವಿಸಿದ್ದು, ನಿರ್ಲಕ್ಷ್ಯ ಆರೋಪದಡಿ ವಾಯುಪಡೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಗಂಗಮ್ಮನಗುಡಿ ಠಾಣೆ ಪೊಲೀಸರು ಹೇಳಿದರು.

‘ಪರಮೇಶ್ವರ ಜೊತೆಯಲ್ಲಿ ಪತ್ನಿ, ಮಗ ಹಾಗೂ ಸೊಸೆ ಸಹ ಇದ್ದರು. ಎಲ್ಲರೂ ಸೇರಿ ದೇವರ ದರುಶನ ಪಡೆದು ದೇವಸ್ಥಾನದಿಂದ ಹೊರಗೆ ಬಂದಿದ್ದರು. ದೂರದಲ್ಲಿ ನಿಲ್ಲಿಸಿದ್ದ ಕಾರು ತರಲೆಂದು ಮಗ ಹೋಗಿದ್ದರು. ಕಾಂಪೌಂಡ್‌ ಪಕ್ಕದಲ್ಲೇ ಇದ್ದ ಕಟ್ಟೆಯ ಮೇಲೆ ಪರಮೇಶ್ವರ ಕುಳಿತುಕೊಂಡಿದ್ದರು.’

‘ಏಕಾಏಕಿ ಕಾಂಪೌಂಡ್ ಕುಸಿದು ಬಿದ್ದಿತ್ತು. ಕಾಂಪೌಂಡ್‌ನ ಕಲ್ಲುಗಳು ಪರಮೇಶ್ವರ ಅವರ ತಲೆ ಮೇಲೆಯೇ ಬಿದ್ದಿದ್ದವು. ತೀವ್ರ ರಕ್ತಸ್ರಾವದಿಂದಾಗಿ ಅವರು ಮೃತಪಟ್ಟರು. ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕುಸಿದು ಬಿದ್ದ ಕಾಂಪೌಂಡ್‌ ಹಳೆಯದಾಗಿದ್ದು, ಅದರ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಅದು ಕುಸಿಯಲು ಕಾರಣವೇನು ಎಂಬುದು ಗೊತ್ತಾಗಿಲ್ಲ’ ಎಂದರು. 

Post Comments (+)