ಅಶೋಕ ನಗರದಲ್ಲಿ 24x7 ನೀರು ಪೂರೈಕೆ ಯೋಜನೆ ಕಾಮಗಾರಿಗೆ ಚಾಲನೆ

7

ಅಶೋಕ ನಗರದಲ್ಲಿ 24x7 ನೀರು ಪೂರೈಕೆ ಯೋಜನೆ ಕಾಮಗಾರಿಗೆ ಚಾಲನೆ

Published:
Updated:
Deccan Herald

ತುಮಕೂರು: ನಗರದ ಜನರಿಗೆ 24x7 ನಿರಂತರ ನೀರು ಪೂರೈಕೆ ಯೋಜನೆಗೆ ಶನಿವಾರ ನಗರದ 26ನೇ ವಾರ್ಡಿನ ಅಶೋಕನಗರದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ನಗರದ ಜನರಿಗೆ ಯಾವುದೇ ಅಡೆತಡೆ ಇಲ್ಲದೇ ನಿರಂತರವಾಗಿ ವಾರದ ಏಳೂ ದಿನ ಕುಡಿಯುವ ನೀರು ಪೂರೈಸಬೇಕು ಎಂಬ ಯೋಜನೆ ನಮ್ಮ ತಂದೆ ಜಿ.ಎಸ್.ಬಸವರಾಜ್ ಅವರು ಸಂಸದರಾಗಿದ್ದಾಗ ಪ್ರಾರಂಭವಾದ ಯೋಜನೆಯಾಗಿದೆ. ಆದರೆ, ಇದುವರೆಗೂ ಅನುಷ್ಠಾನ ಆಗಿಲ್ಲ. ಈಗ ಚಾಲನೆ ನೀಡಲಾಗಿದೆ' ಎಂದು ಹೇಳಿದರು.

ನೀರನ್ನು ನಾಗರಿಕರು ಅವಶ್ಯಕತೆಗೆ ತಕ್ಕಂತೆ ಮಿತವಾಗಿ ಬಳಕೆ ಮಾಡಬೇಕು. ಇದರಿಂದ ಎಲ್ಲ ಬಡಾವಣೆಗಳಿಗೂ ನೀರು ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆಯಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಇವುಗಳು ಅನುಷ್ಠಾನವಾದರೆ ತುಮಕೂರು ನಗರ ಬೆಂಗಳೂರು ನಗರಕ್ಕೆ ಪರ್ಯಾಯ ನಗರವಾಗಿ ರೂಪಗೊಳ್ಳಲಿದೆ ಎಂದು ಹೇಳಿದರು.

ಪಾಲಿಕೆ 26ನೇ ವಾರ್ಡಿನ ಸದಸ್ಯ ಎಚ್.ಮಲ್ಲಿಕಾರ್ಜುನ್ ಮಾತನಾಡಿ,‘ ಸರ್ಕಾರದ ಮಹಾತ್ವಾ ಕಾಂಕ್ಷೆಯ ಯೋಜನೆ ಇದಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು. ನಿರಂತರ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ನಾಗರಿಕರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಈರಣ್ಣ, ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ನಿರಂಜನ್, ಸುಜಾತಾ ಚಂದ್ರಶೇಖರ್, ಬಿಜೆಪಿ ಮುಖಂಡ ಕೊಪ್ಪಲ್ ನಾಗರಾಜು, ಮಂಜುನಾಥ್, ಜ್ಯೋತಿ, ಕಾವ್ಯ, ಕೆಂಚರಾಯಪ್ಪ, ಸಂದೀಪಗೌಡ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !